

ಮಡಿಕೇರಿ:
ಭೂಮಿಯ ನೈಸರ್ಗಿಕ ಸಮತೋಲನದಲ್ಲಿ ಅರಣ್ಯಗಳ ಪಾತ್ರ ದೊಡ್ಡದು. ಕಾಡಿದ್ದರೆ ನಾಡು ಎನ್ನುವುದು ಪ್ರಸಿದ್ಧ ಘೋಷ ವಾಕ್ಯ. ಅರಣ್ಯದ ಪ್ರಮಾಣ ಕಡಿಮೆಯಾಗುತ್ತಾ ಹೋದರೆ ಪ್ರಕೃತಿ ಯಾವ ರೀತಿಯಲ್ಲಿ ಪಾಠ ಕಲಿಸುತ್ತದೆ ಎನ್ನುವುದನ್ನು ಕೊಡಗಿನಲ್ಲಿ ೨೦೧೮ರಿಂದ ಈಚೆಗೆ ಕಾಣಬಹುದಾಗಿದೆ. ಹಾಗಾಗಿ ಈಗ ಜನಸಾಮಾನ್ಯರಲ್ಲೂ ಕಾಡು ಬೆಳೆಸುವ ಆಸಕ್ತಿ ಹೆಚ್ಚಾಗುತ್ತಿರುವುದು ಸ್ವಾಗತಾರ್ಹ ಬೆಳವಣಿಗೆ. ಈ ನಿಟ್ಟಿನಲ್ಲಿ ಅರಣ್ಯ ಇಲಾಖೆಯೂ ಹಲವು ರೀತಿಯ ಪ್ರಯೋಗಗಳನ್ನು ಮಾಡುತ್ತಿದೆ. ಬೀಜದುಂಡೆ ಕೂಡ ಇದರಲ್ಲಿ ಒಂದು. ಗಿಡ ಮರಗಳ ಸಂಖ್ಯೆ ಹೆಚ್ಚಿಸುವಲ್ಲಿ ಬೀಜದುಂಡೆ ಕ್ರಾಂತಿಕಾರಕ ಬದಲಾವಣೆಗೆ ಕಾರಣವಾಗುತ್ತಿದೆ.
ನಗರ ಪ್ರದೇಶಗಳಲ್ಲಿ ಪರಿಸರ ದಿನ, ವನಮಹೋತ್ಸವ ಸಂದರ್ಭದಲ್ಲಿ ಒಂದಿಷ್ಟು ಗಿಡಗಳನ್ನು ನೆಟ್ಟು, ಫೋಟೋ ತೆಗೆಸಿಕೊಂಡು ಮರೆತುಬಿಡುವವರೇ ಹೆಚ್ಚು. ಪುನಃ ಗಿಡನೆಡುವುದು ನೆನಪಾಗಬೇಕಾದರೆ ಮತ್ತೊಂದು ವರ್ಷದ ಪರಿಸರ ದಿನ, ವನಮಹೋತ್ಸವ ಬರಬೇಕು. ಈ ಮಧ್ಯದ ದಿನಗಳಲ್ಲಿ ತಾವು ನೆಟ್ಟಿರುವ ಗಿಡಗಳ ಪರಿಸ್ಥಿತಿ ಏನಾಗಿದೆ ಎನ್ನುವುದರ ಕಾಳಜಿ ಬಹುತೇಕರಿಗೆ ಇರುವುದಿಲ್ಲ. ಆದರೆ ಅರಣ್ಯ ಪ್ರದೇಶದಲ್ಲಿ ಗಿಡಗಳಲ್ಲಿ ನೆಟ್ಟರೆ ನೈಸರ್ಗಿಕ ರಕ್ಷಣೆ ಮತ್ತು ಪಾಲನೆ ಇರುತ್ತದೆ. ಹಾಗಾಗಿ ಗಿಡಗಳು ತಮ್ಮಷ್ಟಕ್ಕೆ ತಾವೇ ಬೆಳೆದು ಮರಗಳಾಗುತ್ತವೆ. ಆದರೆ ದೊಡ್ಡ ಪ್ರಮಾಣದಲ್ಲಿ ಗಿಡ ನೆಡುವುದು ಆರ್ಥಿಕವಾಗಿ ಹೊರೆಯಾಗುವ ಕೆಲಸ. ಇದರ ಜೊತೆಗೆ ಇನ್ನೊಂದಿಷ್ಟು ನಕರಾತ್ಮಕ ಅಂಶಗಳನ್ನೂ ಪರಿಸರಪ್ರಿಯರು ಪಟ್ಟಿ ಮಾಡುತ್ತಾರೆ.
ಬೀಜದುಂಡೆ ಪದ್ಧತಿ ಇತ್ತೀಚಿನ ವರ್ಷಗಳಲ್ಲಿ ಪ್ರಕೃತಿಪ್ರೇಮಿಗಳಿಗೆ ಅಪ್ಯಾಯಮಾನ ಆಗುತ್ತಿದೆ. ಬೀಜದುಂಡೆ ತಯಾರಿಸುವುದು ಮತ್ತು ನಾಟಿ ಮಾಡುವುದು ಸುಲಭ ಹಾಗೂ ಆರ್ಥಿಕವಾಗಿಯೂ ಜೇಬಿಗೆ ಭಾರ ಅಲ್ಲ ಎನ್ನುವ ಕಾರಣಕ್ಕೆ ಗಿಡಗಳನ್ನು ನೆಡುವುದರ ಬದಲು ಬೀಜದುಂಡೆ ಬಿತ್ತನೆಯೇ ಸೂಕ್ತ ಎನ್ನುವುದು ಹಲವರ ಅಭಿಪ್ರಾಯ. ಕಳೆದ ವರ್ಷ ಕೊಡಗಿನಲ್ಲಿ ಅರಣ್ಯ ಪ್ರದೇಶ ವಿಸ್ತರಿಸುವ ನಿಟ್ಟಿನಲ್ಲಿ ಬೀಜೋತ್ಸವ ಹೆಸರಿನ ಚಿಕ್ಕದೊಂದು ಕ್ರಾಂತಿಯೇ ನಡೆದಿತ್ತು. ಇಲ್ಲಿಯೂ ಬಹುತೇಕ ಬಳಕೆಯಾಗಿದ್ದು ಈ ಬೀಜದುಂಡೆಗಳು.
ಕಾವೇರಿ, ಲಕ್ಷ್ಮಣತೀರ್ಥ, ಹಾರಂಗಿ ಸೇರಿದಂತೆ ನಾಡಿನ ಪ್ರಮುಖ ನದಿಗಳ ಉಗಮ ಸ್ಥಾನ ಹೊಂದಿರುವ ಕೊಡಗಿನ ಬಹುಭಾಗ ದಟ್ಟ ಅರಣ್ಯದಿಂದ ಕೂಡಿದ್ದು, ಶ್ರೀಮಂತ ಪ್ರಾಕೃತಿಕ ಸಂಪತ್ತು ಹೊಂದಿದೆ. ೨೦೨೧-೨೨ರ ಅರಣ್ಯ ಇಲಾಖೆ ವಾರ್ಷಿಕ ವರದಿ ಪ್ರಕಾರ ೪,೧೦೨ ಚ.ಕಿ ಮೀಟರ್‌ಗಳಷ್ಟು ಭೂ ಪ್ರದೇಶ ಹೊಂದಿರುವ ಕೊಡಗಿನಲ್ಲಿ ೧೯೬೩.೫೮ ಚ.ಕಿ.ಮೀ. ಅರಣ್ಯ ಪ್ರದೇಶ ಇದೆ. ಒಟ್ಟು ಭೂ ಪ್ರದೇಶದ ಸುಮಾರು ಶೇ.೪೭.೮೭ರಷ್ಟು ಕಾಡು ಇರುವ ಕೊಡಗಿನಲ್ಲಿ ಮತ್ತಷ್ಟು ಅರಣ್ಯ ವಿಸ್ತರಿಸುವ ಉದ್ದೇಶದಿಂದ ಬೀಜೋತ್ಸವ ಕಾರ್ಯಕ್ರಮ ಅರಣ್ಯ ಇಲಾಖೆಯಿಂದ ನಡೆಸಲಾಗುತ್ತಿದೆ.
ಬಿದಿರಿನಿಂದ ಹಣ್ಣಿನ ಮರದ ತನಕ ವೈವಿಧ್ಯಮಯ ಬೀಜಗಳನ್ನು ಕಾಡೊಳಗೆ ಬಿತ್ತುವ ಸಲುವಾಗಿ ಬೀಜದುಂಡೆ ತಯಾರಿಸಲಾಗುತ್ತದೆ. ಅರಣ್ಯ ಇಲಾಖೆ ನೇತೃತ್ವದಲ್ಲಿ ಈ ಮಹತ್ತರ ಕಾರ್ಯ ನಡೆಯುವುದರಿಂದ ವಿವಿಧ ಪರಿಸರಾಸಕ್ತ ಸಂಘಟನೆಗಳೂ ಕೈಜೋಡಿಸಿಕೊಂಡು ಬಂದಿವೆ. ರಾಷ್ಟ್ರೀಯ ಹಸಿರು ಪಡೆ, ಇಕೋ ಕ್ಲಬ್, ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ವಿವಿಧ ಸ್ವಯಂ ಸೇವಾ ಸಂಘಟನೆಗಳು ಸೇರಿದಂತೆ ಸಂಘ-ಸಂಸ್ಥೆಗಳು ಪರಿಸರ ಕಾಯಕದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವುದು ಸ್ವಾಗತಾರ್ಹ ಬೆಳವಣಿಗೆಯಾಗಿದೆ.
ಕಳೆದ ವರ್ಷ ಕಾಡು ಪ್ರದೇಶ ಮಾತ್ರವಲ್ಲದೆ ಖಾಲಿ ಜಾಗದಲ್ಲೂ ಬೀಜ ಬಿತ್ತಲಾಗಿತ್ರು. ಈ ಬೀಜೋತ್ಸವ ಕಾರ್ಯಕ್ರಮದಲ್ಲಿ ಬಹುತೇಕ ಬೀಜದುಂಡೆಗಳನ್ನೇ ಬಳಸಿಕೊಳ್ಳಲಾಗಿತ್ತು. ವಿದ್ಯಾರ್ಥಿಗಳು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ನೋಡಿಕೊಳ್ಳುವುದರಿಂದ
ಬೀಜೋತ್ಸವ ಕೇವಲ ಅರಣ್ಯ ಇಲಾಖೆ ಕಾರ್ಯಕ್ರಮವಾಗದೇ ವಿವಿಧ ಸಂಘಟನೆಗಳ ಸಹಭಾಗಿತ್ವದಿಂದಾಗಿ ಉತ್ಸವದ ಮಹತ್ವ ಹೆಚ್ಚಾಗಿದೆ. ಈ ವರ್ಷವೂ ಇಂಥ ಒಂದು ಕಾರ್ಯಕ್ರಮದ ಬಗ್ಗೆ ಪರಿಸರ ಪ್ರಿಯರು ಈ ವರ್ಷವೂ ನಿರೀಕ್ಷೆಯಿಂದ ಕಾಯುವಂತಾಗಿದೆ.
ಬೀಜದುಂಡೆ ಬಳಸಿಕೊಂಡು ಮಾಡುವ ಬೀಜೋತ್ಸವ ಕಾರ್ಯಕ್ರಮ ಸಂದರ್ಭ ವಿದ್ಯಾರ್ಥಿಗಳನ್ನು ಬಳಸಿಕೊಳ್ಖುವುದರಿಂದ ಕೇವಲ ಬೀಜ ಬಿತ್ತನೆ ಮಾತ್ರ ಮಾಡಿದಂತೆ ಆಗುವುದಿಲ್ಲ. ಕಾಡಿನ ಸಂಕೀರ್ಣತೆ ಮತ್ತು ಅವುಗಳ ಮಹತ್ವದ ಬಗ್ಗೆಯೂ ಮಾಹಿತಿ ನೀಡುವ ಕೆಲಸವೂ ನಡೆಯುತ್ತಾ ಬಂದಿದೆ. ಅರಣ್ಯದಲ್ಲಿ ಬಿತ್ತನೆ ಬೀಜ ಬಿತ್ತುವ ವಿಧಾನ, ಮಳೆ ಬಂದಾಗ ಆ ಬೀಜಗಳು ಹೇಗೆ ಮೊಳಕೆಯೊಡೆದು ಗಿಡವಾಗಿ ಬೆಳೆಯುತ್ತವೆ ಎನ್ನುವುದರ ಮಾಹಿತಿಯನ್ನೂ ನೀಡುವ ಮೂಲಕ ಮಕ್ಕಳನ್ನು ಅರಣ್ಯ ಸಾಕ್ಷರರನ್ನಾಗಿ ಮಾಡಲಾಗುತ್ತಿದೆ. ಇದು ಪರೋಕ್ಷವಾಗಿ ಪೋಷಕರನ್ನೂ ತಲುಪುವ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸಲು ಸಹಕಾರಿ ಆಗುತ್ತಿದೆ ಎನ್ನುತ್ತಾರೆ ಅರಣ್ಯ ಇಲಾಖೆ ಅಧಿಕಾರಿಗಳು.
ಅರಣ್ಯ ಪ್ರದೇಶದಲ್ಲಿ ಬೀಜದುಂಡೆಗಳ ಮೂಲಕ ಮತ್ತಿ, ತಾರೆ, ಮಹಾಗಣಿ, ಅಳಲೆ, ನೆಲ್ಲಿ, ಬೇವು, ಮಾವು, ಬಿದಿರು ಹಾಗೂ ವಿವಿಧ ರೀತಿಯ ಹಣ್ಣಿನ ಬೀಜಗಳನ್ನೂ ಬಿತ್ತುತ್ತಾ ಬರಲಾಗುತ್ತಿದೆ.
ಏನಿದು ಬೀಜದುಂಡೆ ?
ಸಗಣಿ, ಹಟ್ಟಿಗೊಬ್ಬರ ಅಥವಾ ಸಾವಯವ ಗೊಬ್ಬರದ ಜತೆಗೆ ಕೆಂಪು ಅಥವಾ ಜೇಡಿ ಮಣ್ಣಿನೊಂದಿಗೆ ನೀರನ್ನು ಹದವಾಗಿ ಮಿಶ್ರಣ ಮಾಡಿ ಉಂಡೆ ಮಾಡಲಾಗುತ್ತದೆ. ಈ ಉಂಡೆ ಮಧ್ಯೆ ಬೀಜಗಳನ್ನು ಇಟ್ಟು ಒಣಗಿಸಿದರೆ ಬೀಜದುಂಡೆ ತಯಾರಾಗುತ್ತದೆ. ಮಳೆಗಾಲದ ಸಂದರ್ಭ ಭೂಮಿಯಲ್ಲಿ ೧ ಅಥವಾ ೨ ಇಂಚು ಗುಂಡಿ ತೆಗೆದು ಇದನ್ನು ಬಿತ್ತಲಾಗುತ್ತದೆ. ಮಳೆಗಾಲದಲ್ಲಿ ಬೀಜದುಂಡೆಯೊಳಗೆ ನೀರು ಹೀರಿಕೊಂಡು ಒಳಗಿನ ಬೀಜಗಳು ಮೊಳಕೆಯೊಡೆಯುತ್ತದೆ. ಈ ವೇಳೆ ಉಂಡೆಯಲ್ಲಿರುವ ಪೌಷ್ಟಿಕಾಂಶ ಬಳಸಿಕೊಂಡು ಬೀಜ ಭೂಮಿಯೊಳಗೆ ತನ್ನ ಬೇರುಗಳನ್ನು ಇಳಿಸುತ್ತದೆ. ನಂತರ ಆಳವಾಗಿ ಬೇರೂರುವ ಸಸಿಗಳು ಮುಂದೆ ದೊಡ್ಡ ಮರವಾಗಿ ಬೆಳೆಯುತ್ತದೆ.
ಕಳೆದ ವರ್ಷದ ಬೀಜೋತ್ಸವ ಸಂದರ್ಭದಲ್ಲಿ ಬೀಜದುಂಡೆಗಳನ್ನು ಹೆಚ್ಚು ಬಳಸಲಾಗಿದೆ. ಈ ಬಗ್ಗೆ ವಿದ್ಯಾರ್ಥಿಗಳಿಗೆ ಜಾಗೃತಿಯನ್ನೂ ಮೂಡಿಸಲಾಗಿದೆ. ಜಿಲ್ಲೆಯಾದ್ಯಂತ ಬೀಜೋತ್ಸವ ಕಾರ್ಯಕ್ರಮ ನಡೆಯುವ ಸಂದರ್ಭದಲ್ಲಿ ಬೀಜದುಂಡೆಗಳ ಬಗ್ಗೆ, ಅವುಗಳನ್ನು ಹೇಗೆ ತಯಾರಿಸಬೇಕು ಎನ್ನುವುದರ ಬಗ್ಗೆಯೂ ಮಾಹಿತಿ ಕೊಡಲಾಗಿದೆ. ಕೊಡಗಿನ ಅರಣ್ಯ ವಿಸ್ತರಿಸುವ ನಿಟ್ಟಿನಲ್ಲಿ ಇದೊಂದು ಮಹತ್ವದ ಹೆಜ್ಜೆ. ಈ ವರ್ಷವೂ
ಇಂಥದ್ದೊಂದು ಕಾರ್ಯಕ್ರಮದ ನಿರೀಕ್ಷೆಯಲ್ಲಿ ಪರಿಸರ ಪ್ರೇಮಿಗಳು ಇದ್ದಾರೆ.