ಅತಿವೃಷ್ಟಿ, ಅನಾವೃಷ್ಟಿಗಳ ನಿರ್ವಹಣೆ ಅಗತ್ಯ

chn
Published on

ಚನ್ನಗಿರಿ: ರೈತರಿಗೆ ಅತಿವೃಷ್ಟಿ, ಅನಾವೃಷ್ಟಿಗಳ ನಿರ್ವಹಣೆ ಕುರಿತು ಸಮಗ್ರ ಮಾಹಿತಿಯನ್ನು ಕಾರ್ಯಾಗಾರ ಮಾಡಲಾಗುತ್ತಿದ್ದು, ರೈತರು ಇದರ ಪ್ರಯೋಜನ ಪಡೆಯಬೇಕು ಎಂದು ಶಾಸಕ ಬಸವರಾಜ್ ಶಿವಗಂಗಾ ತಿಳಿಸಿದರು.

ತಾಲೂಕಿನ ಸಂತೇಬೆನ್ನೂರಿನಲ್ಲಿ ಜಿಪಂ, ತೋಟಗಾರಿಕೆ ಇಲಾಖೆ, ಶಿರಸಿ ಸ್ಕೋಡ್‌ವೆಸ್ ಸಂಸ್ಥೆ ಸಹಯೋಗದಲ್ಲಿ ಏರ್ಪಡಿಸಿದ್ದ ಪರಂಪರಾಗತ ಕೃಷಿ ವಿಕಾಸ ಯೋಜನೆಯಡಿ ಮಾವು ಬೆಳೆವ ರೈತ ಗುಂಪುಗಳಿಗೆ ಸಾಮರ್ಥ್ಯ ಅಭಿವೃದ್ಧಿ ತರಬೇತಿ, ಜೇನು ಕೃಷಿ ತರಬೇತಿ ಕಾರ್ಯಾಗಾರ ಉದ್ಘಾಟಿಸಿ, ಮಂಗಳವಾರ ಮಾತನಾಡಿದರು.

ರೈತರು ಬೆಳೆಯುವ ಬೆಳೆ ಜತೆಯಲ್ಲಿ ಸ್ವ ಉದ್ಯೋಗ ರೂಪಿಸಿಕೊಳ್ಳಬೇಕು. ಜೇನು, ಪಶು, ಕೋಳಿ, ಕುರಿ ಸಂಗೋಪನೆ ಕೈಗೊಂಡಾಗ ಉತ್ತಮ ಲಾಭ ಪಡೆದು ಆರ್ಥಿಕವಾಗಿ ಸ್ವಾವಲಂಬಿಗಳಾಗಬಹುದು. ಅಂತಹ ರೈತರಿಗೆ ಸರ್ಕಾರ ಸಹಾಯಧನ ನೀಡುತ್ತದೆ. ತೋಟಗಾರಿಕೆ ಇಲಾಖೆಯಲ್ಲಿ ಮಾಹಿತಿ ಪಡೆದು ಪ್ರಾರಂಭ ಮಾಡಿ ಎಂದರು.

ವಿಜ್ಞಾನಿ ಬಸವನಗೌಡ ಮಾತನಾಡಿ, ರೈತರು ಹವಮಾನ ವೈಪರೀತ್ಯದಿಂದ ಪಾರಾಗಬೇಕಾದರೆ ಸಮಗ್ರ ಕೃಷಿ ಪದ್ದತಿ ಅನುಸರಿಸಬೇಕು. ರಾಸಾಯನಿಕ ಅವಲಂಬನೆ ಕಡಿಮೆ ಮಾಡಿ ಸಾವಯವ ಪದ್ದತಿ ಅನುಸರಿಸಬೇಕು. ಜಿಲ್ಲೆಯಲ್ಲಿ ರಾಸಾಯನಿಕ ಮತ್ತು ಕಳೆನಾಶಕ ಸಿಂಪರಣೆಯಲ್ಲಿ ಚನ್ನಗಿರಿ ತಾಲೂಕು ಪ್ರಥಮ ಸ್ಥಾನದಲ್ಲಿದೆ ಎಂದು ಹೇಳಿದರು.

ಡಾ.ಎಸ್.ಜೆ. ವೀರೇಶ್ ಮಾತನಾಡಿ, ದೇಶದಲ್ಲಿ ಹಸಿರು ಕ್ರಾಂತಿಯಿಂದ 60 ವರ್ಷದಲ್ಲಿ ಕೃಷಿ ಅಭಿವೃದ್ಧಿಯಾಗಿದೆ. ಇತ್ತೀಚೆಗೆ ಕೃಷಿಗೆ ರಾಸಾಯನಿಕ ಬಳಕೆಯಿಂದ ಭೂಮಿ ಬರಡಾಗುತ್ತಿದೆ. ಮನುಷ್ಯನ ಆರೋಗ್ಯ ಕೆಡುತ್ತಿದೆ. ಇದಕ್ಕೆ ಪರಿಹಾರವಾಗಿ ಪಾರಂಪರಿಕ ಕೃಷಿ ಪದ್ದತಿ ಅನುಸರಿಸಿದಾಗ ಮಾತ್ರ ಆರೋಗ್ಯಕರ ಕೃಷಿ, ಆಹಾರ ಪಡೆಯಲು ಸಾಧ್ಯ ಎಂದರು.

ಗ್ರಾಪಂ ಅಧ್ಯಕ್ಷೆ ಭಾಗ್ಯಗುಜ್ಜರ್, ಉಪಾಧ್ಯಕ್ಷೆ ಶೃತಿ ರುದ್ರೇಶ್, ಸಂಸ್ಥೆ ಆಧಿಕಾರಿ ಮಾಲತಿ, ಪಿಎಸ್‌ಐ ಜಗದೀಶ್, ರಹಮತ್‌ವುಲ್ಲಾ, ರಂಗನಾಥ್, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಶ್ರೀಕಾಂತ್, ಗ್ರಾಪಂ ಪಿಡಿಒ ಮಾರುತಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net