ಆಂಜನೇಯಸ್ವಾಮಿ ಹನುಮ ಮಹೋತ್ಸವ ಏ.12ಕ್ಕೆ

24 JLR
Published on

ಜಗಳೂರು: ತಾಲೂಕಿನ ಸಂತೇಮುದ್ದಾಪುರ ಬಳಿ ಇರುವ ಐತಿಹಾಸಿಕ ಬೇಡಿ ಆಂಜನೇಯಸ್ವಾಮಿ ಹನುಮ ಮಹೋತ್ಸವ ಏ.12 ರಂದು ಹಮ್ಮಿಕೊಳ್ಳಲಾಗಿದೆ ಎಂದು ಬೇಡಿ ಆಂಜನೇಯ ಅಭಿವೃದ್ಧಿ ಸಮಿತಿ ಅಧ್ಯಕ್ಷ ಬಿದರಕೆರೆ ಪ್ರಕಾಶ್ ತಿಳಿಸಿದರು.

ಪಟ್ಟಣದ ಪತ್ರಿಕಾ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಏ.11 ರಂದು ಪ್ರತಿ ಹಳ್ಳಿಯಿಂದ 5 ಜನರಂತೆ ಹನುಮ ಮಾಲೆ ಧರಿಸಿ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಿಂದ ದೊಡ್ಡ ಮಾರಿಕಾಂಬ ದೇವಸ್ಥಾನದವರೆಗೆ ಬೃಹತ್ ಶೋಭಾಯಾತ್ರೆಯನ್ನು ಆಯೋಜನೆ ಮಾಡಲಾಗಿದೆ ಎಂದರು.

ಮಾಜಿ ಶಾಸಕ ಎಚ್.ಪಿ. ರಾಜೇಶ್ ಮಾತನಾಡಿ, ಚಾಲುಕ್ಯ- ಚೋಳರು ಸೇರಿ ಅನೇಕ ರಾಜ ಮನೆತನಗಳ ಆಳ್ವಿಕೆ ಅವಧಿಯಲ್ಲಿ ನಿರ್ವಿುಸಿದ ಐತಿಹಾಸಿಕ ದೇವಸ್ಥಾನಗಳು, ಪುಷ್ಕರಣಿಗಳು, ಮರಡಿಗಳು ಪಾಳುಬಿದ್ದಿವೆ. ಅವುಗಳನ್ನು ಜೀಣೋದ್ಧಾರಗೊಳಿಸಬೇಕಿದೆ. ಸಂತೆಮುದ್ದಾಪುರದ ಎದುರು ಮುಖದ ಆಂಜನೇಯ ಮೂರ್ತಿಯ ದೇವಸ್ಥಾನದಲ್ಲಿ ನಡೆಯುವ ಹನುಮ ಮಹೋತ್ಸವ ಮಾಲಾಧಾರಿಗಳ ಕಾರ್ಯಕ್ರಮವನ್ನು ಪಕ್ಷಾತೀತ ಮತ್ತು ಜಾತ್ಯತೀತವಾಗಿ ನಡೆಸಲು ಕೈಜೋಡಿಸಬೇಕು. ಕಾರ್ಯಕ್ರಮದ ಅಧ್ಯಕ್ಷತೆ ಹಾಗೂ ಸಾನ್ನಿಧ್ಯವನ್ನು ರಾಜನಹಳ್ಳಿ ವಾಲ್ಮೀಕಿ ಪೀಠದ ಪ್ರಸನ್ನಾನಂದ ಪುರಿಸ್ವಾಮೀಜಿ ವಹಿಸಲಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮಕ್ಕೆ ಮನೋಹರ್ ಮಠದ್, ಮುನಿಯಪ್ಪ, ಗದಗ ರಾಮಕೃಷ್ಣ ಮಠದ ನಿರ್ಭಯಾನಂದ ಸರಸ್ವತಿ ಸ್ವಾಮೀಜಿ, ಬಿದರಕೆರೆ ಮಠದ ರುದ್ರಮುನಿ ಸ್ವಾಮೀಜಿ ಸೇರಿ ಗಣ್ಯರು ಭಾಗವಹಿಸಲಿದ್ದಾರೆ ಎಂದರು.

ಪಪಂ ಅಧ್ಯಕ್ಷ ನವೀನ್​ಕುಮಾರ್, ಸ್ವಾಗತ ಸಮಿತಿ ಸದಸ್ಯರಾದ ಡಿವಿ ನಾಗಪ್ಪ, ಪೂಜಾರ ಸಿದ್ದಪ್ಪ, ಕೊರಟಿಕೆರೆ ಧನಂಜಯ್, ಕೃಷ್ಣಮೂರ್ತಿ, ಮುರುಗೇಶ್, ಎ.ಎಂ. ಮರುಳಾರಾಧ್ಯ, ದಾಸಪ್ಪ, ಶಿವಕುಮಾರಸ್ವಾಮಿ, ಕರಿಬಸಪ್ಪ, ಗುತ್ತಿದುರ್ಗ ಸಂತೋಷ ಸೇರಿ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net