ಬೆಡ್ ಮಾನಿಟರಿಂಗ್ ಸಿಸ್ಟಂ ಜಾರಿ

Covid 19 Doctor
Published on

ಉಡುಪಿ: ಜಿಲ್ಲೆಯಲ್ಲಿ ಬೆಡ್ ಮಾನಿಟರಿಂಗ್ ಸಿಸ್ಟಂ ಯೋಜನೆ ಸಿದ್ಧಪಡಿಸಲಾಗುತ್ತಿದ್ದು, ಇದರಿಂದ ಯಾವ ಆಸ್ಪತ್ರೆಯಲ್ಲಿ ಎಷ್ಟು ಬೆಡ್‌ಗಳು ಖಾಲಿ ಇವೆ, ಸಮೀಪದ ಆಸ್ಪತ್ರೆ ಎಲ್ಲಿದೆ. ಆ ಆಸ್ಪತ್ರೆಯಲ್ಲಿ ಏನು ಸೌಲಭ್ಯಗಳಿವೆ ಎಂಬ ಮಾಹಿತಿ ಕೂಡಲೇ ಲಭ್ಯವಾಗಲಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.

ಸೋಮವಾರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಕೋವಿಡ್ ನಿಯಂತ್ರಣ ಸಂಬಂಧಿಸಿ ಆಯೋಜಿಸಲಾದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಈಗಾಗಲೇ ವಿವಿಧ ಆಸ್ಪತ್ರೆಗಳಲ್ಲಿ 2400 ಬೆಡ್‌ಗಳನ್ನು ಕೋವಿಡ್-19 ರೋಗಿಗಳಿಗೆ ಮೀಸಲಿಡಲಾಗಿದೆ. ಕೋವಿಡ್ -19 ಪಾಸಿಟಿವ್ ಬಂದ ವ್ಯಕ್ತಿಗಳನ್ನು ಸ್ಥಳಾಂತರಿಸಲು ರಚಿಸಲಾಗಿರುವ ತಂಡದ ಸಿಬ್ಬಂದಿ ಐ.ಸಿ.ಎಂಆರ್ ಪೋರ್ಟಲ್‌ನಲ್ಲಿ ಪಾಸಿಟಿವ್ ವರದಿ ಬಂದ ಕೂಡಲೇ ಸಂಬಂಧಪಟ್ಟ ರೋಗಿಯನ್ನು ತಕ್ಷಣ ಆಸ್ಪತ್ರೆಗೆ ಸ್ಥಳಾಂತರಿಸಲು ವ್ಯವಸ್ಥೆ ಮಾಡಬೇಕು.

ಜಿಲ್ಲೆಯಲ್ಲಿ ಆಂಬುಲೆನ್ಸ್ ಮಾನಿಟರಿಂಗ್ ಸಿಸ್ಟಂ ಜಾರಿಗೊಳಿಸಿದ್ದು, ವ್ಯಕ್ತಿಯ ಮನೆಗೆ ಸಮೀಪದ ಆರೋಗ್ಯ ಕೇಂದ್ರದಲ್ಲಿರುವ ಆಂಬುಲೆನ್ಸ್ ಸಹಾಯದೊಂದಿಗೆ ನಿಗದಿತ ಆಸ್ಪತ್ರೆಗೆ ದಾಖಲಿಸಬೇಕು. ತುರ್ತು ಅಗತ್ಯವಿದ್ದಲ್ಲಿ ಖಾಸಗಿ ಆಸ್ಪತ್ರೆಯ ಅಂಬುಲೆನ್ಸ್‌ಗಳನ್ನು ಬಳಸಿಕೊಳ್ಳಬಹುದು. ಯಾವುದೇ ಕಾರಣಕ್ಕೂ ಪಾಸಿಟಿವ್ ವರದಿ ಬಂದ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸುವಲ್ಲಿ ವಿಳಂಬ ಸಲ್ಲದು ಎಂದು ಜಿಲ್ಲಾಧಿಕಾರಿ ಸೂಚಿಸಿದರು.

ಜಿಲ್ಲೆಯ ಎಲ್ಲಾ ಸರ್ಕಾರಿ ಆಸ್ಪತ್ರೆಯ ನರ್ಸ್‌ಗಳಿಗೆ ಐ.ಸಿ.ಯು.ನಲ್ಲಿ ಕಾರ್ಯ ನಿರ್ವಹಣೆಯ ವಿಧಾನ ಕುರಿತು ಮಣಿಪಾಲದ ಕೆಎಂಸಿಯಲ್ಲಿ ವಿಶೇಷ ತರಬೇತಿಗೆ ನಿಯೋಜಿಸುವಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.

ಲೈಸೆನ್ಸ್ ರದ್ದು ಎಚ್ಚರಿಕೆ: ಜಿಲ್ಲೆಯಲ್ಲಿ ಶೀತ, ಕೆಮ್ಮ, ನಗಡಿ, ಜ್ವರದಿಂದ ಬಳಲುತ್ತಿರುವ ರೋಗಿಗಳ ವಿವರ ನೀಡದ ಖಾಸಗಿ ಆಸ್ಪತ್ರೆ ಮತ್ತು ಕ್ಲಿನಿಕ್‌ಗಳ ಲೈಸೆನ್ಸ್ ರದ್ದುಗೊಳಿಸುವುದಾಗಿ ಎಚ್ಚರಿಕೆ ನೀಡಿದರು. ಆಶಾ ಮತ್ತು ಆರೋಗ್ಯ ಕಾರ್ಯಕರ್ತೆಯರು ಪ್ರತಿದಿನ ತಮ್ಮ ವ್ಯಾಪ್ತಿಯ ಮನೆಗಳಿಗೆ ಭೇಟಿ ನೀಡಿ, ಶೀತ, ಕೆಮ್ಮ, ನಗಡಿ, ಜ್ವರದಿಂದ ಬಳಲುತ್ತಿರುವ ರೋಗಿಗಳ ವರದಿ ನೀಡಬೇಕು. ಇಂತಹ ಲಕ್ಷಣಗಳಿದ್ದು, ರೋಗಿಯ ತಪಾಸಣೆ ನಡೆಸದೆ ಆ ವ್ಯಕ್ತಿ ಕೋವಿಡ್‌ನಿಂದ ಮೃತಪಟ್ಟಲ್ಲಿ ಆ ವ್ಯಾಪ್ತಿಯ ಸಿಬ್ಬಂದಿ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದರು.

ಪ್ರತಿದಿನ 650 ತಪಾಸಣೆ: ಕಂಟೇನ್ಮೆಂಟ್ ವಲಯದ ಕುರಿತು ನಿಯಮ ಬದಲಾಗಿದ್ದು, ಸ್ಥಳಿಯವಾಗಿ 2-3 ಪ್ರಕರಣ ಕಂಡುಬಂದಲ್ಲಿ ಸಂಬಂಧಪಟ್ಟ ವ್ಯಕ್ತಿಯ ಮನೆಯ ಬದಲಾಗಿ ಇಡೀ ಗ್ರಾಮವನ್ನು ಸೀಲ್ ಡೌನ್ ಮಾಡಿ, ಆ ಭಾಗದಲ್ಲಿನ ಸಾರ್ವಜನಿಕರನ್ನು ವ್ಯಾಪಕವಾಗಿ ಪರೀಕ್ಷೆಗೆ ಒಳಪಡಿಸಬೇಕು. ಜಿಲ್ಲೆಯಲ್ಲಿ ಪ್ರತಿದಿನ 650 ಮಂದಿಯ ಸ್ಯಾಂಪಲ್ ಪರೀಕ್ಷೆ ನಡೆಸುವಂತೆ ನಿರ್ದೇಶನವಿದ್ದು, ಜಿಲ್ಲೆಯ ಒಂದೇ ಭಾಗದಲ್ಲಿ ಸ್ಯಾಂಪಲ್ ತೆಗೆಯದೆ, ಜಿಲ್ಲೆಯಾದ್ಯಂತ ವಿವಿಧ ವರ್ಗಗಳಿಗೆ ಸೇರಿದ ಸಾರ್ವಜನಿಕರ ಸ್ಯಾಂಪಲ್ ತೆಗದು ಪರೀಕ್ಷೆ ನೆಡೆಸುವಂತೆ ಜಿಲ್ಲಾಧಿಕಾರಿ ಸೂಚಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಕುಂದಾಪುರ ಉಪ ವಿಭಾಗಾಧಿಕಾರಿ ರಾಜು, ಜಿಲ್ಲಾ ಪಂಚಾಯಿತಿ ಉಪ ಕಾರ್ಯದಶಿ ಕಿರಣ್ ಫೆಡ್ನೇಕರ್, ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್ ಉಪಸ್ಥಿತರಿದ್ದರು.

ವಾರಿಯರ್ಸ್‌ಗೆ ಸನ್ಮಾನ ಬೇಡ: ಜಿಲ್ಲೆಯಲ್ಲಿ ಕೋವಿಡ್ ವಾರಿಯರ್ಸ್‌ಗಳಿಗೆ ಸನ್ಮಾನ ಕಾರ್ಯಕ್ರಮಗಳು ನಡೆಯುತ್ತಿದ್ದು, ಇಂತಹ ಕಾರ್ಯಕ್ರಮಗಳಲ್ಲಿ ಯಾವುದೇ ಸಾಮಾಜಿಕ ಅಂತರ ಪಾಲನೆಯಾಗುತ್ತಿಲ್ಲ. ಇನ್ನು ಮುಂದೆ ಇಂತಹ ಸನ್ಮಾನ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಸಿಬ್ಬಂದಿ ಮತ್ತು ಆಯೋಜಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಕೋವಿಡ್ ವಿರುದ್ಧದ ನಿಜವಾದ ಹೋರಾಟ ಈಗ ಆರಂಭವಾಗಿದೆ. ಕರೊನಾ ಮುಗಿದ ನಂತರ ಪ್ರತಿಯೊಬ್ಬರಿಗೂ ಜಿಲ್ಲಾಡಳಿತದಿಂದಲೇ ಸನ್ಮಾನ ಆಯೋಜಿಸಲಾಗುವುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net