

ನಾಗಮಂಗಲ: ವಿಶೇಷ ಚೇತನರು ಸರ್ಕಾರದ ಸವಲತ್ತನ್ನು ಪಡೆದುಕೊಂಡು ಸ್ವಾವಲಂಬಿ ಬದುಕು ನಡೆಸಬೇಕು ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಸಲಹೆ ನೀಡಿದರು.
ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಚೇರಿ ಮುಂಭಾಗದಲ್ಲಿ ಸೋಮವಾರ 2024-25ನೇ ಸಾಲಿನ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಲ್ಲಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 20 ಮಂದಿ ಅರ್ಹ ಅಂಗವಿಕಲ ಫಲಾನುಭವಿಗಳಿಗೆ ತಲಾ 1.25 ಲಕ್ಷ ರೂ. ವೆಚ್ಚದ ತ್ರಿಚಕ್ರ ವಾಹನಗಳನ್ನು ವಿತರಿಸಿ ಮಾತನಾಡಿದರು.
ವಿಶೇಷ ಚೇತನರು ಮುಖ್ಯವಾಹಿನಿಯಲ್ಲಿ ಎಲ್ಲರಿಗಿಂತಲೂ ವಿಶೇಷ ಸಾಧನೆ ಮಾಡಿರುವ ಉದಾಹರಣೆಗಳು ಸಾಕಷ್ಟಿವೆ. ಸಮಾಜದಲ್ಲಿ ಎಲ್ಲರಂತೆ ಸರಿಸಮಾನರಾಗಿ ಬದುಕು ನಡೆಸುತ್ತಿರುವ ವಿಶೇಷ ಚೇತನರ ಸ್ವಾವಲಂಬಿ ಜೀವನಕ್ಕೆ ಪೂರಕವಾಗಿ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ಸರ್ಕಾರ ನೀಡುವ ಸವಲತ್ತನ್ನು ಅರ್ಹ ಫಲಾನುಭವಿಗಳು ಸದ್ಬಳಕೆ ಮಾಡಿಕೊಳ್ಳಬೇಕು. ನಾಡಿನ ಎಲ್ಲ ವರ್ಗಗಳ ಬಡಜನರ ಶ್ರೇಯೋಭಿವೃದ್ಧಿಗಾಗಿ ಸರ್ಕಾರ ಹಲವು ಜನಪರ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿರುವಂತೆ ವಿಶೇಷ ಚೇತನರಿಗೂ ಕೂಡ ಮೂಲ ಸೌಲಭ್ಯ ಒದಗಿಸುತ್ತಿದೆ. ಶೇ.65ರಷ್ಟು ಅಂಗವಿಕಲತೆ ಹೊಂದಿರುವ 20 ಮಂದಿ ಫಲಾನುಭವಿಗಳನ್ನು ಗುರುತಿಸಿ ಅವರಿಗೆ ತಲಾ 1.25 ಲಕ್ಷ ವೆಚ್ಚದಲ್ಲಿ ತ್ರಿಚಕ್ರ ವಾಹನಗಳನ್ನು ನೀಡಲಾಗುತ್ತಿದೆ. ತಮ್ಮ ಯಾವುದೇ ವೈಯಕ್ತಿಕ ಕೆಲಸ ಕಾರ್ಯಗಳಿಗೆ ತೆರಳಲು ಈ ವಾಹನವನ್ನು ಬಳಸಿಕೊಳ್ಳಬೇಕು. ಆದರೆ ಇದನ್ನು ದುರ್ಬಳಕೆ ಮಾಡಿಕೊಳ್ಳಬಾರದೆಂದು ತಿಳಿಸಿದರು.
ತಾಲೂಕು ಮತ್ತು ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಸೇರುವ ಕೊಪ್ಪ ಹೋಬಳಿಯಲ್ಲಿ ತ್ರಿಚಕ್ರ ವಾಹನ ಪಡೆಯಲು ಅರ್ಹತೆ ಇರುವ ವಿಶೇಷ ಚೇತನರಿದ್ದಲ್ಲಿ ತಮ್ಮ ಕಚೇರಿಗೆ ಅರ್ಜಿ ಸಲ್ಲಿಸಬಹುದು. ಪರಿಶೀಲನೆ ನಡೆಸಿ ಮುಂದಿನ ದಿನಗಳಲ್ಲಿ ಅವರಿಗೂ ಕೂಡ ತ್ರಿಚಕ್ರ ವಾಹನಗಳನ್ನು ನೀಡಲಾಗುವುದು ಎಂದರು.
ಪುರಸಭೆ ಅಧ್ಯಕ್ಷ ಅಲಿ ಅನ್ಸರ್‌ಪಾಷ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಜೆ.ರಾಜೇಶ್, ರಾಜ್ಯ ಸಾವಯವ ಕೃಷಿ ಉನ್ನತ ಸಮಿತಿಯ ಮಾಜಿ ಉಪಾಧ್ಯಕ್ಷ ಎಚ್.ಟಿ.ಕೃಷ್ಣೇಗೌಡ, ಪುರಸಭೆ ನಾಮನಿರ್ದೇಶಿತ ಸದಸ್ಯರಾದ ಸಂಪತ್‌ಕುಮಾರ್, ನದೀಂ ಅಹಮ್ಮದ್, ಮುಖಂಡರಾದ ಬಿ.ಎನ್.ವನರಾಜ್, ಅಶೋಕ್, ತ್ಯಾಪೇನಹಳ್ಳಿ ಶ್ರೀನಿವಾಸ್, ಎಸ್.ಬಿ.ರಮೇಶ್, ಕೆಲಗೆರೆ ದೇವರಾಜು, ಜವರನಹಳ್ಳಿ ದಿನೇಶ್ ಹಲವರು ಇದ್ದರು.