

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮಹಿಳೆ ಮತ್ತು ಮಕ್ಕಳ ಸುರಕ್ಷತೆಗೆ ಆಗ್ನೇಯಾ ವಿಭಾಗ ಪೊಲೀಸರು ‘ಬೀ ಟುಗೆದರ್ ಬೆಂಗಳೂರು’ (ಒಂದಾಗಿರು ಬೆಂಗಳೂರು) ವಿಶೇಷ ಕಾರ್ಯಕ್ರಮ ಕೈಗೊಂಡಿದ್ದಾರೆ.
ಫೆ.24ರ ರಾತ್ರಿಯಿಂದ ಚಾಲನೆಗೊಂಡಿದ್ದು, ಮಾ.8 ರವರೆಗೆ ನಡೆಯಲಿದೆ. ಆಗ್ನೇಯಾ ವಿಭಾಗ ಡಿಸಿಪಿ ಇಶಾ ಪಂತ್ ನೇತೃತ್ವದಲ್ಲಿ ಸಿಲ್ಕ್ ಬೋರ್ಡ್, ಡೇರಿ ಸರ್ಕಲ್, ಕೋರಮಂಗಲ ಬಿಡಿಎ ಕಾಂಪ್ಲೆಕ್ಸ್, ಕೋರಮಂಗಲ ಪ್ರಾದೇಶಿಕ ಪಾಸ್ಪೋರ್ಟ್ ಕಚೇರಿ, ವೀರ ಯೋಧರ ಉದ್ಯಾನ, ಕೋರಮಂಗಲ 6ನೇ ಬ್ಲಾಕ್ ಗ್ರೇಪ್ ಗಾರ್ಡನ್, ಮಡಿವಾಳ ಮಾರ್ಕೆಟ್, ತಾವರೆಕೆರೆ ಸ್ಪತಿ ಹಾಸ್ಟಿಟಲ್ ಬಳಿ ರಾತ್ರಿ 7 ರಿಂದ ರಾತ್ರಿ 9 ಗಂಟೆವರೆಗೂ ಪೊಲೀಸರು ಮೊಕ್ಕಾಂ ಹೂಡಲಿದ್ದಾರೆ. 8 ಪ್ರದೇಶಗಳಿಗೆ ವಾಯುವಿಹಾರಕ್ಕೆ ಬರುವ ಎಲ್ಲರನ್ನು ಒಂದೆಡೆ ಸೇರಿಸಿ ಪರಸ್ಪರ ಪರಿಚಯ ಮಾಡಿಸಿ ಒಗ್ಗೂಡಿಸಲಾಗುತ್ತದೆ. ಹೆಸರು, ಮನೆ ವಿಳಾಸ, ವೃತ್ತಿ ಮತ್ತು ಅವರಲ್ಲಿರುವ ವಿಶೇಷ ಪ್ರತಿಭೆಯನ್ನು ಪ್ರದರ್ಶನಕ್ಕೆ ವೇದಿಕೆ ಕಲ್ಪಿಸಲಾಗುತ್ತಿದೆ. ಜತೆಗೆ ಪೊಲೀಸರು ಸಹ ಅಪರಾಧ ತಡೆಗೆ ಕೈಗೊಳ್ಳಬೇಕಾದ ಮುಂಜಾಗ್ರತೆ ಕ್ರಮಗಳ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ.
ಪಾರ್ಕ್, ಮೈದಾನಗಳಲ್ಲಿ ಪ್ರತಿದಿನ ನೂರಾರು ಮಂದಿ ವಾಯುವಿಹಾರ ನಡೆಸುತ್ತಾರೆ. ಅಲ್ಲಿಗೆ ಬರುವರು ಪರಸ್ಪರ ಪರಿಚಯ, ಸ್ನೇಹ ಮಾಡಿಕೊಳ್ಳುವ ಗೋಜಿಗೆ ಹೋಗುವುದಿಲ್ಲ. ಇದನ್ನೇ ಟಾರ್ಗೆಟ್ ಮಾಡುವ ಕಳ್ಳರು ಮತ್ತು ಕಿಡಿಗೇಡಿಗಳು ಲೈಂಗಿಕ ದೌರ್ಜನ್ಯ ಅಥವಾ ಬೆಲೆ ಬಾಳುವ ವಸ್ತುಗಳನ್ನು ಕಸಿದು ಪರಾರಿಯಾಗುತ್ತಾರೆ. ಅದಕ್ಕಾಗಿ ವಾಯುವಿಹಾರಕ್ಕೆ ಬರುವರು ಪರಸ್ಪರ ಪರಿಚಯ ಮಾಡಿಕೊಂಡು ಗುಂಪು ಗುಂಪಾಗಿ ಓಡಾಡಿದರೆ ಕಿಡಿಗೇಡಿಗಳಿಗೆ ಕೃತ್ಯ ಎಸಗಲು ಅವಕಾಶ ಸಿಗುವುದಿಲ್ಲ. ಈ ಸಲುವಾಗಿ ಪರಸ್ಪರ ಪರಿಚಯ ಮಾಡಿಸಿ ಒಟ್ಟುಗೂಡಿಸುವ ಸಲುವಾಗಿ ‘ಬೀ ಟುಗೆದರ್ ಬೆಂಗಳೂರು’ ಹಮ್ಮಿಕೊಳ್ಳಲಾಗಿದೆ.
ಇಂದು ಪಿಂಕ್ ಚೀತಾ ಸವಾರಿ: ಆಗ್ನೇಯ ವಿಭಾಗದಲ್ಲಿ ಬುಧವಾರ ಪಿಂಕ್ ಚೀತಾಗಳು ರಸ್ತೆಗೆ ಇಳಿಯಲಿವೆ. ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಪಿಂಕ್ ಚೀತಾ ಗಸ್ತಿಗೆ ಚಾಲನೆ ನೀಡಲಿದ್ದು, ಮಹಿಳಾ ಪೊಲೀಸರೇ ಸವಾರಿ ಮಾಡಲಿದ್ದಾರೆ.