ಉದ್ಯೋಗಿಗಳಾಗುವ ಬದಲು ಉದ್ಯೋಗತಾರರಾಗಿ : ಲೂನಾರ್ಸ್ ಕಂಪನಿ ಎಂಡಿ ಜಾನ್ಸನ್ ಜೋಸೆಫ್

Nataraja college
Published on

ಮೈಸೂರು: ಬೇರೆಯವರ ಬಳಿ ಉದ್ಯೋಗ ಪಡೆಯುವುದಕ್ಕಿಂತ ನೀವೇ ಉದ್ಯಮ ಆರಂಭಿಸಿ ಎಂದು ಲೂನಾರ್ಸ್ ಗ್ರೂಪ್ ಆಫ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಜಾನ್ಸನ್ ಜೋಸೆಫ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ನಟರಾಜ ಸ್ನಾತಕೋತ್ತರ ಕೇಂದ್ರದ ವಾಣಿಜ್ಯ ವಿಭಾಗವು ಗುರುವಾರ ಏರ್ಪಡಿಸಿದ್ದ ಉದ್ಯಮಶೀಲತೆ ಕುರಿತ ವಿಶೇಷ ಉಪನ್ಯಾಸ ಉದ್ಘಾಟಿಸಿ ಮಾತನಾಡಿದ ಅವರು, ಅವರಿವರ ಬಳಿ ಉದ್ಯೋಗ ಪಡೆಯುವುದು ದೊಡ್ಡ ವಿಚಾರವಲ್ಲ. ನಾವೇ ಉದ್ಯಮ ಆರಂಭಿಸಿ ಇತರರಿಗೆ ಉದ್ಯೋಗ ನೀಡಬೇಕು ಎಂದರು.

ನಾವು ಮೂಲತಃ ಕೇರಳದ ಇಡುಕ್ಕಿಯವರು. ನಮ್ಮ ತಂದೆ ವೈದ್ಯರು. ಏಳು ಪುತ್ರರು ಹಾಗೂ ಐವರು ಪುತ್ರಿಯರು. ಈ ಕುಟುಂಬದಲ್ಲಿ ಮೂವರು ಎಂಜಿನಿಯರ್‌ಗಳು ಹಾಗೂ ಇಬ್ಬರು ವೆದ್ಯರಾಗಿದ್ದಾರೆ. ನಾನು ಹಾಗೂ ನನ್ನ ಸಹೋದರ ಉದ್ಯಮ ಆರಂಭಿಸಿ ನೂರಾರು ಜನರಿಗೆ ಕೆಲಸ ನೀಡಿದ್ದೇವೆ ಎಂದರು.

ಉದ್ಯಮ ಆರಂಭಿಸುವುದು ಅಷ್ಟು ಸುಲಭವಲ್ಲ. ಹತ್ತು ಹಲವು ಸಂಕಷ್ಟಗಳು, ಸಮಸ್ಯೆಗಳು, ಅಡತಡೆಗಳು ಎದುರಾಗುತ್ತವೆ. ಅವುಗಳನ್ನೆಲ್ಲ ನಿವಾರಿಸಿಕೊಂಡು ಕುಟುಂಬದ ಬೆಂಬಲ ಪಡೆದು, ಕಠಿಣ ಪರಿಶ್ರಮದಿಂದ ಮುಂದೆ ಸಾಗಬೇಕು ಎಂದು ಅವರು ಸಲಹೆ ನೀಡಿದರು.

ನಾನು ಮೆಕಾನಿಕಲ್ ಎಂಜಿನಿಯರಿಂಗ್ ಮುಗಿಸಿ, ಮೆಸೂರಿನ ಜೆಎಸ್‌ಎಸ್ ಮಹಾವಿದ್ಯಾಪೀಠದ ಎಸ್‌ಜೆಸಿಇಗೆ ತರಬೇತಿಗೆ ಬಂದಾಗ ಉದ್ಯಮ ಆರಂಭಿಸುವುದಕ್ಕೆ ಸ್ಫೂರ್ತಿ ಸಿಕ್ಕಿತು. ಅದೇ ರೀತಿ ನೀವು ಕೂಡ ಸ್ಫೂರ್ತಿ ಪಡೆಯಬೇಕು ಎಂದರು.

ಪಾಲುದಾರರೊಂದಿಗೆ ಕಂಪನಿ ಆರಂಭಿಸಿದಲ್ಲಿ ಅವರ ಸಕಾರಾತ್ಮಕ ಅಂಶಗಳನ್ನು ಮಾತ್ರ ಸ್ವೀಕರಿಸಬೇಕು. ನಕಾರಾತ್ಮಕ ಅಂಶಗಳಿಗೆ ಮಹತ್ವ ನೀಡಬಾರದು ಎಂದು ಕಿವಿಮಾತು ಹೇಳಿದರು.

ನಟರಾಜ ಪ್ರತಿಷ್ಠಾನದ ವಿಶೇಷಾಧಿಕಾರಿ ಡಾ.ಎಸ್. ಶಿವರಾಜಪ್ಪ, ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಪ್ರಾಂಶುಪಾಲೆ ಡಾ.ಎಂ. ಶಾರದಾ, ವಾಣಿಜ್ಯ ವಿಭಾಗದ ಬೋಧಕರಾದ ಶ್ರೀಕಾಂತ್, ಪವನ್, ಲಕ್ಷ್ಮೀ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net