

ಕೆ.ಆರ್.ನಗರ: ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡುವ ಮೂಲಕ ದೇಶಕ್ಕೆ ಸತ್ಪ್ರಜೆಗಳಾಗಬೇಕು ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.
ಪಟ್ಟಣದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ 2024-25ನೇ ಸಾಲಿನ ಸಾಂಸ್ಕೃತಿಕ ವಿವಿಧ ಸಮಿತಿಗಳ ಸಮಾರೋಪ ಹಾಗೂ ಜಾನಪದ ಉತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ದಿಟ್ಟ ಗುರಿ ಪ್ರಯತ್ನಗಳು ಇದ್ದರೆ ಸಾಧನೆ ಸುಲಭವಾಗಲಿದೆ ಎಂದು ಹೇಳಿದರು.
ಒಂದು ದೇಶದ ಪ್ರಗತಿಗೆ ಆರೋಗ್ಯ ಮತ್ತು ಶಿಕ್ಷಣ ಬಹಳ ಮುಖ್ಯ. ಅದರಂತೆ ನಾನು ಕೂಡ ನನ್ನ ಕ್ಷೇತ್ರದಲ್ಲಿ ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದೇನೆ. ಶಿಕ್ಷಣದ ಜತೆಗೆ ನಮ್ಮ ಸಂಸ್ಕೃತಿ, ಪರಂಪರೆ, ವೈವಿಧ್ಯ ಪ್ರತಿಬಿಂಬಿಸುವಂತ ಕೆಲಸಗಳು ಕಾಲೇಜಿನ ವಿದ್ಯಾರ್ಥಿಗಳಿಂದ ಆಗುವ ಮೂಲಕ ಯುವ ಸಮುದಾಯಕ್ಕೆ ಅದನ್ನು ಉಳಿಸಿ ಬೆಳೆಸುವ ಅಗತ್ಯವಿದೆ ಎಂದು ತಿಳಿಸಿದರು.
ವಿದ್ಯಾರ್ಥಿಗಳಿಗೆ ಕಾಲೇಜು ಘಟ್ಟ ಪ್ರಮುಖವಾಗಿದ್ದು, ಸಮಾಜ ಬದಲಾವಣೆ, ನಮ್ಮ ಜೀವನದ ಪರಿವರ್ತನೆಗೆ ಹೆಚ್ಚು ಮಹತ್ವದ್ದಾಗಿದೆ. ಉತ್ತಮ ಅಂಕ ಗಳಿಸುವ ಜತೆಗೆ ನಮ್ಮ ಜೀವನಗಳನ್ನು ಕಟ್ಟಿಕೊಳ್ಳುವ ಕೆಲಸವಾಗಬೇಕು ಎಂದು ಸಲಹೆ ನೀಡಿದರು.
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳು ಹೆಚ್ಚಿನ ಮಹತ್ವ ನೀಡಬೇಕು. ಆ ನಿಟ್ಟಿನಲ್ಲಿ ಯುಪಿಎಸ್ಸಿ ಪರೀಕ್ಷೆಯಲ್ಲಿ ಕೆ.ಆರ್.ನಗರ ವಿಧಾನಸಭಾ ಕ್ಷೇತ್ರದ ಪ್ರೀತಿ ಮತ್ತು ಭಾನುಪ್ರಕಾಶ್ ಅವರು ಉತ್ತಮ ರ‌್ಯಾಂಕ್ ಗಳಿಸಿದ್ದು, ವಿದ್ಯಾರ್ಥಿಗಳು ಅವನ್ನು ಅನುಸರಿಸಬೇಕು ಎಂದು ಕಿವಿಮಾತು ಹೇಳಿದರು.
ಕೆ.ಆರ್.ನಗರ ಉತ್ತಮ ಸುಸಜ್ಜಿತ ಪಟ್ಟಣವಾಗಿದ್ದು, ಎಲ್ಲ ಶಿಕ್ಷಣ ಸಂಸ್ಥೆಗಳು ಒಂದೆಡೆ ಇವೆ. ಈಗಾಗಲೇ ಸರ್ಕಾರದಿಂದ ಈ ಕಾಲೇಜಿಗೆ 1 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ಅಗತ್ಯ ಕೊಠಡಿಗಳು ಹಾಗೂ ಇನ್ನಿತರ ಕಾಮಗಾರಿಗಳಿಗೆ ಕ್ರಿಯಾ ಯೋಜನೆ ತಯಾರಿಸಿ ನೀಡಿದರೆ ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ ಈ ವರ್ಷವೇ ಅಗತ್ಯ ಅನುದಾನ ಕೊಡಿಸುತ್ತೇನೆ. ಜತೆಗೆ ಸುಸಜ್ಜಿತವಾದ ರಂಗಮಂದಿರ ನಿರ್ಮಿಸಿ ಕೊಡುತ್ತೇನೆ ಎಂದು ಭರವಸೆ ನೀಡಿದರು.
ವಿದ್ಯಾರ್ಥಿಗಳು ಶಿಕ್ಷಣದ ಜತೆಗೆ ಇತರೆ ಚಟುವಟಿಕೆಗಳಲ್ಲಿ ಭಾಗವಹಿಸಬೇಕು. ಆ ಮೂಲಕ ತಮ್ಮಲ್ಲಿರುವ ಪ್ರತಿಭೆ ತೋರಬೇಕು. ಅಲ್ಲದೆ ಉತ್ತಮ ಫಲಿತಾಂಶದ ಜತೆಗೆ ಸಾಧನೆ ಮಾಡಿ ಕಾಲೇಜು, ನಮ್ಮ ತಾಲೂಕು ಹಾಗೂ ಹೆತ್ತವರಿಗೆ ಗೌರವ ತರಬೇಕು ಎಂದರು.
ವಿವಿಧ ಕ್ರೀಡೆ ಸಾಂಸ್ಕೃತಿಕ ಚಟುವಟಿಕೆ ಹಾಗೂ ಉತ್ತಮ ಫಲಿತಾಂಶ ಪಡೆದ ಪ್ರತಿಭಾನ್ವಿತರಿಗೆ ಪ್ರಶಸ್ತಿ, ಪುರಸ್ಕಾರ ನೀಡಿ ಗೌರವಿಸಲಾಯಿತು.
ಅಂತಾರಾಷ್ಟ್ರೀಯ ಜಾನಪದ ಗಾಯಕ ಜಿ.ಅಮ್ಮ ರಾಮಚಂದ್ರ, ಕಾಲೇಜು ಪ್ರಾಂಶುಪಾಲ ಪ್ರೊ.ಬಿ.ಟಿ.ವಿಜಯ್, ವಿದ್ಯಾರ್ಥಿಗಳ ಸಂಘದ ಅಧ್ಯಕ್ಷೆ ಆರ್.ಚೈತ್ರಾ ಮಾತನಾಡಿದರು. ವೇದಿಕೆಯಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಕಾರ್ಯದರ್ಶಿ ವೈ.ಎಸ್.ಜಯಂತ್, ಸದಸ್ಯರಾದ ತೋಟೆಗೌಡ, ಸಾಕರಾಜ್, ಸಂಪತ್‌ಗೌಡ, ಸುಧಾಕರ್, ಕೆ.ಚಂದ್ರು, ಕ್ರೀಡಾ ಸಮಿತಿ ಸಂಚಾಲಕ ಡಾ.ಬಿ.ವಿ.ಗಣೇಶ್, ಸ್ಕೌಟ್ಸ್ ಅಂಡ್ ಗೈಡ್ಸ್ ಸಂಚಾಲಕ ಡಾ.ರೇಣುಕಾದೇವಿ ಇತರರು ಇದ್ದರು.