ಹೈನುಗಾರಿಕೆ ಉಪ ಕಸುಬನ್ನಾಗಿ ಮಾಡಿಕೊಂಡು ಆರ್ಥಿಕವಾಗಿ ಸದೃಢರಾಗಿ: ಡಾ.ಎಚ್.ತೆಗ್ಗಿ ಸಲಹೆ

7
Published on

ಮೈಸೂರು: ಸುತ್ತೂರಿನ ಐಸಿಸಿಆರ್ ಜೆಎಸ್‌ಎಸ್ ಕೃಷಿ ವಿಜ್ಞಾನ ಕೇಂದ್ರದಲ್ಲಿ ಜಾನುವಾರು ಪಾಲಕರಿಗೆ ಮೂರು ದಿನಗಳ ಕುರಿ ಮತ್ತು ಮೇಕೆ ಸಾಕಣೆ ತರಬೇತಿ ಹಮ್ಮಿಕೊಳ್ಳಲಾಗಿತ್ತು.

ಬೆಂಗಳೂರಿನ ಹೆಸರಘಟ್ಟದಲ್ಲಿರುವ ಪಶುಸಂಗೋಪನೆ ಶ್ರೇಷ್ಠತೆ ಕೇಂದ್ರದ ಜಂಟಿ ಆಯುಕ್ತ ಡಾ.ಎಚ್.ತೆಗ್ಗಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪಶುಸಂಗೋಪನೆ ಕ್ಷೇತ್ರವು ರೈತರಿಗೆ ಪ್ರತಿದಿನ ಹಣವನ್ನು ತಂದುಕೊಡುವ ಉದ್ಯಮವಾಗಿದೆ. ಸಾವಯವ ಕೃಷಿ ಮತ್ತು ನೈಸರ್ಗಿಕ ಕೃಷಿಗೆ ಮೂಲವೂ ಪಶುಸಂಗೋಪನೆಯಾಗಿದೆ. ಆದ್ದರಿಂದ ರೈತರು ಹೆಚ್ಚು ಕುರಿ, ಮೇಕೆಗಳನ್ನು ಸಾಕಬೇಕು. ಹೈನುಗಾರಿಕೆಯನ್ನು ಉಪ ಕಸುಬನ್ನಾಗಿ ಮಾಡಿಕೊಂಡು ಆರ್ಥಿಕವಾಗಿ ಸದೃಢರಾಗಬೇಕೆಂದು ತಿಳಿಸಿದರು.

ಇತ್ತೀಚಿನ ದಿನಗಳಲ್ಲಿ ಪಶುಸಂಗೋಪನೆ ಕ್ಷೇತ್ರದಲ್ಲಿ 4 ಮತ್ತು 5ನೇ ಪೀಳಿಗೆ ಆ್ಯಂಟಿಬಯೋಟಿಕ್ಸ್‌ಗಳನ್ನು ಬಳಸಲಾಗುತ್ತಿದೆ. ಅವೈಜ್ಞಾನಿಕ ಆ್ಯಂಟಿಬಯೋಟಿಕ್ಸ್ ಬಳಕೆಯಿಂದ ಹಲವಾರು ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ಆದ್ದರಿಂದ ಆ್ಯಂಟಿಬಯೋಟಿಕ್ಸ್‌ಗಳ ಸಮರ್ಪಕ ಬಳಕೆಗೆ ರೈತರು ಪಶು ವೈದ್ಯರ ಸಲಹೆಯಂತೆ ನಡೆಯಬೇಕು ಎಂದು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಹಿರಿಯ ವಿಜ್ಞಾನಿ ಡಾ.ಬಿ.ಎನ್.ಜ್ಞಾನೇಶ್ ಮಾತನಾಡಿ, ರೈತರು ಕೃಷಿ ಹಾಗೂ ಪಶುಸಂಗೋಪನೆಯಲ್ಲಿ ಹೆಚ್ಚಿನ ಲಾಭ ಗಳಿಸಬೇಕಾದರೆ ಮಾರುಕಟ್ಟೆಗೆ ಅನುಗುಣವಾಗಿ ಕ್ರಮವಹಿಸಬೇಕು. ಕುರಿ, ಮೇಕೆ ತಳಿಗಳನ್ನು ಆಯಾ ಪ್ರದೇಶಕ್ಕೆ ಅನುಗುಣವಾಗಿ ತಜ್ಞರ ಅಭಿಪ್ರಾಯ ಪಡೆದು ಸಾಕಾಣೆ ಪ್ರಾರಂಭಿಸಬೇಕು ಎಂದರು.

ಸಾಕಣೆ ಮಾಡುವ ಮುನ್ನ ತರಬೇತಿ ಪಡೆದು, ಕುರಿ-ಮೇಕೆ ಸಾಕಣೆ ಸಂಖ್ಯೆಯನ್ನು ಆದಾಯಕ್ಕೆ ಅನುಗುಣವಾಗಿ ಕಡಿಮೆ ವೆಚ್ಚದಲ್ಲಿ ಪ್ರಾರಂಭಿಸಬೇಕು. ಸಾಕಣೆಯಲ್ಲಿ ಅನುಭವ, ಆದಾಯ ಪಡೆದ ನಂತರ ಹೆಚ್ಚಿನ ಸಂಖ್ಯೆಯಲ್ಲಿ ಕುರಿ-ಮೇಕೆ ಸಾಕಣೆ ಮಾಡುವುದು ಸೂಕ್ತ ಎಂದು ಹೇಳಿದರು.

ಕೇಂದ್ರದ ಪಶು ವಿಜ್ಞಾನ ವಿಷಯತಜ್ಞ ಡಾ.ಯು.ಎಂ.ರಕ್ಷಿತ್‌ರಾಜ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕೆವಿಕೆಯ ಶಾಮರಾಜ್, ಡಾ. ಪ್ರಸಾದ್, ಡಾ.ದೀಪಕ್ ಇದ್ದರು.

ಪ್ರಗತಿಪರ ರೈತರಾದ ಹುಳಿಮಾವಿನ ಪುಟ್ಟಣ್ಣ, ಕಲ್ಕುಂದ ಪವನ್, ಯೋಗೇಶ್ ಸೇರಿದಂತೆ 70ಕ್ಕೂ ಹೆಚ್ಚಿನ ರೈತರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net