

ಪಿರಿಯಾಪಟ್ಟಣ : ಕೊಡಗು ಗೌಡ ಸಮಾಜದ ಸದಸ್ಯತ್ವ ಹೆಚ್ಚಳಕ್ಕೆ ಎಲ್ಲರೂ ಸಹಕರಿಸುವಂತೆ ತಾಲೂಕು ಕೊಡಗು ಗೌಡ ಸಮಾಜದ ಅಧ್ಯಕ್ಷ ಪೊಕ್ಕಳಂಡ ವಸಂತ್ ಕುಮಾರ್ ತಿಳಿಸಿದರು.
ಪಟ್ಟಣದ ಕೊಡಗು ಗೌಡ ಸಮಾಜದ ಸಮುದಾಯ ಭವನದಲ್ಲಿ ಭಾನುವಾರ ನಡೆದ 2023- 24 ನೇ ಸಾಲಿನ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಪಿರಿಯಾಪಟ್ಟಣ ತಾಲೂಕಿನಲ್ಲಿ ಕೊಡಗು ಗೌಡ ಸಮಾಜದ ಸಂಘಟನೆ ಆರಂಭಗೊಂಡು 34 ವರ್ಷಗಳು ಕಳೆದಿದ್ದರೂ ಈವರೆಗೆ ನೋಂದಣಿ ಸದಸ್ಯತ್ವ ಪಡೆದವರ ಸಂಖ್ಯೆ 587 ಆಗಿದೆ. ಸಮುದಾಯದ ಅಭಿವೃದ್ಧಿಯ ನಿಟ್ಟಿನಲ್ಲಿ ಕುಟುಂಬದ ಪ್ರತಿಯೊಂದು ಸದಸ್ಯರೂ ಸದಸ್ಯತ್ವ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಪ್ರಸ್ತುತ ನಮ್ಮ ತಾಲೂಕು ಕೊಡಗು ಗೌಡ ಸಮಾಜ ಸಂಘದಲ್ಲಿ ಪಿರಿಯಾಪಟ್ಟಣ ಮತ್ತು ಹುಣಸೂರು ತಾಲೂಕಿನವರಿಗೆ ಸದಸ್ಯತ್ವ ನೀಡಲಾಗಿದ್ದು, ತಾಲೂಕಿನಲ್ಲಿ ವಾಸಿಸುತ್ತಿರುವ ಹಲವರು ಈವರೆಗೂ ಸದಸ್ಯತ್ವ ಪಡೆಯಲು ಮುಂದಾಗದಿರುವುದು ಸಮಾಜದ ಅಭಿವೃದ್ಧಿಗೆ ಅಡ್ಡಿಯಾಗಿದೆ ಎಂದರು.
ನಮ್ಮ ಸಮುದಾಯ ಭವನದ ಅಭಿವೃದ್ಧಿಗೆ ಪ್ರತಿಯೊಬ್ಬ ಸದಸ್ಯರು ಸಹಕಾರ ನೀಡಬೇಕಿದ್ದು ಹಬ್ಬದ ಪ್ರಯುಕ್ತ ಅಥವಾ ವಾರ್ಷಿಕ ಮಹಾಸಭೆಯ ಪ್ರಯುಕ್ತ ನಮ್ಮ ಕುಟುಂಬದ ಸದಸ್ಯರಿಗೆ ನಡೆಸುವಂತಹ ಕ್ರೀಡಾಕೂಟ, ಮನರಂಜನೆಯ ಆಟೋಟ ಸ್ಪರ್ಧೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪ್ರತಿಯೊಬ್ಬರೂ ಭಾಗವಹಿಸುವ ಮೂಲಕ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಬೇಕು ಎಂದರು.
ನಮ್ಮ ಸಮಾಜದ ವತಿಯಿಂದ ಹಮ್ಮಿಕೊಳ್ಳಲಾಗುವ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುವ ಮೂಲಕ ಸರ್ಕಾರದ ಗಮನ ಸೆಳೆಯಲು ಸಹಕರಿಸುವಂತೆ ಮನವಿ ಮಾಡಿದರು.
ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳಲ್ಲಿ 2023-24ನೇ ಸಾಲಿನಲ್ಲಿ ಉತ್ತಮ ಸಾಧನೆಗೈದಿರುವ ಕೊಡಗು ಗೌಡ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಿ ಅಭಿನಂದಿಸಲಾಯಿತು. ಪ್ರಸ್ತುತ ಸಾಲಿನಲ್ಲಿ ಮೃತಪಟ್ಟ ಸಮಾಜದ ಸದಸ್ಯರಿಗೆ ಸಂತಾಪ ಸೂಚಿಸಲಾಯಿತು.
ಕೊಡಗು ಗೌಡ ಸಮಾಜದ ಉಪಾಧ್ಯಕ್ಷ ಆರಂಬೂರು ಜೋಯಪ್ಪ, ಕಾರ್ಯದರ್ಶಿ ಪೂಜಾರಿ ರವಿ, ಜಂಟಿ ಕಾರ್ಯದರ್ಶಿ ನಿಡ್ಯಮಲೆ ಪೂಣಚ್ಚ , ಖಜಾಂಚಿ ಕರೆಮನೆ ವಿಠಲ, ನಿರ್ದೇಶಕರಾದ ಕುಯ್ಯುಮುಡಿ ಬೋಜಪ್ಪ, ಪರಿವಾರನ ಮೋಹನ್ ಕುಮಾರ್, ಕೂರನ ಪೂಣಚ್ಚ, ಪೆಮ್ಮಟೆ ರಘುನಾಥ್, ಸೂದನ ಸುನಂದಾ, ಕೂಡಕಂಡಿ ಜಗದೀಶ್ ಕುಮಾರ್, ಬೊಳ್ಳನ ರಮೇಶ್, ಕೋಲ್ಪೆ ದೇವಕಿ ಪ್ರಭಾಕರ್, ಬೆಳ್ಳಿಯಂಡ ಭಾಗ್ಯಲಕ್ಷ್ಮೀ ಪೊನ್ನು, ಮಳ್ಳನ ವೇದಾವತಿ ರಮೇಶ್, ಕುಯ್ಯಮುಡಿ ಅಶ್ವಿನಿ ಕುಮಾರ್, ಶಿವಾಜಿ, ಬಾಲಕೃಷ್ಣ ಸೇರಿದಂತೆ ಕೊಡಗುಗೌಡ ಸಮಾಜದ ಸದಸ್ಯರು ಭಾಗವಹಿಸಿದ್ದರು.