ಪಪಂ ಆಗಿ ಮೇಲ್ದರ್ಜೆಗೇರಿದ ಹನುಮಸಾಗರ, ಗ್ರಾಮಸ್ಥರ ಬಹುದಿನಗಳ ಕನಸು ನನಸು

Become a higher being
ಹನುಮಸಾಗರ ಗ್ರಾಪಂ ಹೋರ ನೋಟ.
Published on

ಹನುಮಸಾಗರ: ಜಿಲ್ಲೆಯ ದೊಡ್ಡ ಗ್ರಾಮ ಹನುಮಸಾಗರವನ್ನು ಬುಧವಾರ ಆಯೋಜಿಸಿದ್ದ ಸಚಿವ ಸಂಪುಟ ಸಭೆಯಲ್ಲಿ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೆ ಏರಿಸಿದ್ದು, ನಿವಾಸಿಗಳ ಬಹುದಿನಗಳ ಬೇಡಿಕೆ ಈಡೇರಿದಿದೆ.

14 ವಾರ್ಡ್ ಇರುವ ಹನುಮಸಾಗರ ಗ್ರಾಪಂನಲ್ಲಿ ಸದ್ಯ 38 ಜನ ಸದಸ್ಯರಿದ್ದಾರೆ. ದೊಡ್ಡ ಗ್ರಾಮವನ್ನು ಪಟ್ಟಣ ಪಂಚಾಯಿತಿ ಆಗಿ ಮೇಲ್ದರ್ಜೆಗೆ ಏರಿಸುವಂತೆ ಸ್ಥಳೀಯ ನಿವಾಸಿಗಳು 2008ರಿಂದ ಮನವಿ ಸಲ್ಲಿಸುತ್ತಾ ಬರುತ್ತಿದ್ದರು. ಆದರೆ, 15 ವರ್ಷ ಕಳೆದರೂ ಸರ್ಕಾರಗಳು ಬೇಡಿಕೆಗೆ ಸೊಪ್ಪು ಹಾಕಲಿಲ್ಲ.

2011ಜನಗಣತಿ ಪ್ರಕಾರ ಹನುಮಸಾಗರ ಗ್ರಾಮ ಪಟ್ಟಣ ಪಂಚಾಯಿತಿಯಾಗಲು ಇನ್ನೂ 123 ಜನಸಂಖ್ಯೆ ಕಡಿಮೆಯಿದೆ ಎಂದು ಆಗಿನ ಸರ್ಕಾರ ಮೇಲ್ದರ್ಜೆಗೇರಿಸಲು ನಿರಾಕರಿಸಿತ್ತು. ಸದ್ಯ ಸುಮಾರು 30 ಸಾವಿರಕ್ಕೂ ಅಧಿಕ ಜನರು ಹನುಮಸಾಗರದಲ್ಲಿದ್ದಾರೆ. ಕಳೆದ 15 ವರ್ಷಗಳಿಂದ ನಮ್ಮ ಊರು ಪಟ್ಟಣ ಪಂಚಾಯಿತಿ ಆಗಿ ಮೇಲ್ದರ್ಜೆಗೆ ಏರುತ್ತದೆ ಎಂದು ನಿವಾಸಿಗಳು ಬಜೆಟ್ ಹಾಗೂ ಸಚಿವ ಸಂಪುಟಗಳು ನಡೆದ ಸಂದರ್ಭದಲ್ಲಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದರು. ಸದ್ಯ ನಿಟ್ಟುಸಿರು ಬಿಟ್ಟಿದ್ದಾರೆ. ಕಳೆದ ಗ್ರಾಪಂ ಚುನಾವಣೆ ಮೊದಲೇ ಪಟ್ಟಣ ಪಂಚಾಯಿತಿಯಾಗುತ್ತದೆ ಎಂಬ ಊಹಾಪೋಹ ಹಬ್ಬಿತ್ತು. ಸಾರ್ವಜನಿಕರ ಆಸೆಗೆ ಸರ್ಕಾರ ಹುಸಿಯಾಗಿಸಿತ್ತು.

ಈಗಾಗಲೇ ಹೋಬಳಿ ಕೇಂದ್ರವಾಗಿರುವ ಹನುಮಸಾಗರದಲ್ಲಿ ಪೊಲೀಸ್ ಠಾಣೆ, ಸಮುದಾಯ ಆಸ್ಪತ್ರೆ, ರೈತ ಸಂಪರ್ಕ ಕೇಂದ್ರ, 2 ರಾಷ್ಟ್ರೀಕೃತ ಬ್ಯಾಂಕ್, 10ಕ್ಕೂ ಹೆಚ್ಚು ಸಹಕಾರಿ ಬ್ಯಾಂಕ್‌ಗಳು, 6 ಸಹಿಪ್ರಾ ಶಾಲೆಗಳು, 3 ಸರ್ಕಾರಿ ಪ್ರೌಢ ಶಾಲೆಗಳು, 1 ಸಪಪೂ ಕಾಲೇಜು, 1 ಸರ್ಕಾರಿ ಐಟಿಐ ಕಾಲೇಜು ಸೇರಿ ಖಾಸಗಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳು ಇವೆ. 2 ಸರ್ಕಾರಿ ವಸತಿ ನಿಲಯ, 3 ವಸತಿ ಶಾಲೆಗಳು ಇವೆ. ಸುಮಾರು 80ಕ್ಕೂ ಹೆಚ್ಚು ಹಳ್ಳಿಗಳ ಜನರಿಗೆ ಇದು ವ್ಯಾಪಾರ ಕೇಂದ್ರವಾಗಿದೆ. ವಾರ್ಷಿಕ 30ಕ್ಕೂ ಅಧಿಕ ತೆರಿಗೆ ಇಲ್ಲಿ ಸಂಗ್ರಹವಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net