

ಹುಬ್ಬಳ್ಳಿ : ಇಂದಿನ ಕಾಲದಲ್ಲಿ ಕೇವಲ ವೈದ್ಯಕೀಯ ಪದವಿಗಳಿಸಿ ವೈದ್ಯರಾದರೆ ಜನಮನ್ನಣೆ ಖಂಡಿತ ಸಿಗುವುದಿಲ್ಲ, ಪದವಿಯ ಜತೆಗೆ ರೋಗಿಗಳಿಗೆ ಮಾನವೀಯ ಸಂವೇದನಾ ಶೀಲ ಗುಣದಿಂದಿ ಚಿಕಿತ್ಸೆ ಕೊಟ್ಟರೆ ಸಮಾಜವಲ್ಲ, ದೇವರು ಕೂಡ ಮಾಡುವ ಕೆಲಸಕ್ಕೆ ಒಳ್ಳೆಯ ಪ್ರತಿಫಲ ಕೊಡುತ್ತಾನೆ ಎಂದು ಖ್ಯಾತ ವಾಗ್ಮಿ ಹಾಗೂ ಹಾಸ್ಯ ಭಾಷಣಕಾರ ಪ್ರೊ. ಕೃಷ್ಣೇಗೌಡ ಹೇಳಿದರು.
ಇಲ್ಲಿನ ಸಂಜೀವಿನಿ ಆಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ವತಿಯಿಂದ ಬುಧವಾರ ಆಯೋಜಿಸಿದ್ದ ಸಮನ್ವಯ ವಿದ್ಯಾರ್ಥಿ ಸಂಘದ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಅವರು ಮಾತನಾಡಿದರು.
ಜೀವನದಲ್ಲಿ ಪ್ರತಿಯೊಬ್ಬರೂ ಆದರ್ಶ, ಗುರಿ ಹೊಂದಿರಬೇಕು. ಇಲ್ಲವಾದಲ್ಲಿ ಅವರೇ ತಿಳಿದುಕೊಂಡಿರುವ ವಿಚಾರಗಳೇ ಅವರಿಗೆ ಆದರ್ಶ ಪ್ರಾಯವಾಗಿ ಕಂಡುಬರುವ ಪರಿಸ್ಥಿತಿ ಇಂದಿನ ಸಮಾಜದಲ್ಲಿ ಕಂಡುಬಂದಿದೆ ಎಂದರು.
ಪ್ರತಿಯೊಬ್ಬರೂ ವಿಮರ್ಶಾತ್ಮಕ ವಿಚಾರಗಳನ್ನು ಜೀವನದಲ್ಲಿ ಅನುಸರಿಸುವುದು ಅಗತ್ಯ. ಶಿಕ್ಷಣ ಕೇವಲ ಪದವಿ ಪಡೆಯುವದಷ್ಟೇ ಅಲ್ಲ.ವಿದ್ಯಾರ್ಥಿಗಳಲ್ಲಿ ಭಾವನಾತ್ಮಕ ಸಂಬಂಧ, ಪ್ರಬುದ್ಧತೆಯನ್ನು, ಸಮಾನತೆಯ ಗುಣವನ್ನು ಬೆಳೆಸುವ ಶಿಕ್ಷಣ ಬೇಕು. ಸಮಾಜದಲ್ಲಿ ಎಲ್ಲರನ್ನೂ ಸಮಭಾವದಿಂದ ಕಾಣುವ ಪರಿಸ್ಥಿತಿ ನಿರ್ವಣವಾಗಬೇಕು. ಅದೇ ಅಭಿವೃದ್ಧಿಯ ಸಂಕೇತವೆಂದು ತಿಳಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ಡಾ. ಶ್ರೀನಿವಾಸ ಬನ್ನಿಗೋಳ, ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳ ಮಹತ್ವ ಮತ್ತು ಪ್ರತಿಭೆಗಳನ್ನು ಹೊರತರಲು ವೇದಿಕೆ ಬೇಕು. ಅದು ವಿದ್ಯಾರ್ಥಿ ಸಂಘದಿಂದ ಮಾತ್ರ ಸಾಧ. ಪ್ರಯತ್ನ ಮಾಡಿ ಸೋಲು ಆದರೆ ಪ್ರಯತ್ನ ಮಾಡದೇ ಸೋಲಬೇಡ, ಸೋತರೂ ಕುಗ್ಗದೆ ಮರಳಿ ಪ್ರಯತ್ನಿಸಿದಾಗ ಗೆಲವು ನಿಶ್ಚಿತ ಎಂದು ಸಲಹೆ ನೀಡಿದರು.
ಆಡಳಿತ ಮಂಡಳಿಯ ಕಾರ್ಯದರ್ಶಿ ಡಾ. ಸೋಮಶೇಖರ ಹುದ್ದಾರ ಅವರು ಸಂಜೀವಿನಿ ಬೆಳೆದ ಬಗೆ ವಿವರಿಸಿದರು. ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ. ಚರಂತಯ್ಯ ಹಿರೇಮಠ ಮಾತನಾಡಿದರು. ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಆಕಾಶ ಹಿರೇಮಠ ಕಾಲೇಜಿನ ವಾರ್ಷಿಕ ವರದಿ ವಾಚಿಸಿದರು.
ಸಂಜೆ ನಡೆದ ಸಮನ್ವಯ ಪ್ರತಿಭೋತ್ಸವ ಕಾರ್ಯಕ್ರಮದಲ್ಲಿ ಪೊಲೀಸ್ ಆಯುಕ್ತ ಎನ್, ಶಶಿಕುಮಾರ ಅವರು ವಿವಿಧ ಸ್ಪರ್ಧೆಗಳಲ್ಲಿ ಪ್ರಶಸ್ತಿಪಡೆದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು.
ಡಾ. ಬಿ. ಎಲ್. ಪಾಟೀಲ ಸ್ವಾಗತಿಸಿದರು. ಡಾ. ಅಂಜನಾ ಸಿದ್ಧಾಪೂರ, ಮೇಘನಾ, ಶ್ರೇಯಾ ತೇಗೂರ ನಿರೂಪಿಸಿದರು. ಸೃಷ್ಠಿ ಕೊಟ್ಟರಶೆಟ್ಟರ ವಂದಿಸಿದರು.