ಕೋವಿಡ್ ಕಾಟ, ಗ್ರಾಪಂಗಳಿಗೆ ತೆರಿಗೆ ಸಂಕಷ್ಟ!; 740 ಕೋಟಿ ರೂ. ತೆರಿಗೆ ವಸೂಲಿ ಬಾಕಿ; ಪಂಚಾಯಿತಿ ನಿರ್ವಹಣೆ, ಸಿಬ್ಬಂದಿ ವೇತನಕ್ಕೂ ಪರದಾಟ

Panchayath
Published on

| ಮಂಜುನಾಥ ಕೋಳಿಗುಡ್ಡ ಬೆಳಗಾವಿ

ಅತಿವೃಷ್ಟಿ, ಕೋವಿಡ್ ಸಂಕಷ್ಟ ಕಾಲದಲ್ಲಿ ಸಮಯಕ್ಕೆ ಸರಿಯಾಗಿ ತೆರಿಗೆ ವಸೂಲಿ ಆಗದ ಪರಿಣಾಮ ಗ್ರಾಮ ಪಂಚಾಯಿತಿಗಳಲ್ಲೀಗ ನಿರ್ವಹಣೆ, ಸಿಬ್ಬಂದಿಗೆ ವೇತನ ಕೊಡುವುದಕ್ಕೂ ಆಗದ ಪರಿಸ್ಥಿತಿ ನಿರ್ವಣವಾಗಿದೆ. ರಾಜ್ಯಾದ್ಯಂತ ಗ್ರಾಪಂಗಳಿಂದ 2020-21ರಲ್ಲಿ 740.93 ಕೋಟಿ ರೂ. ತೆರಿಗೆ ವಸೂಲಿ ಬಾಕಿ ಇರುವುದರಿಂದಾಗಿ ಸ್ಥಳೀಯ ಆಡಳಿತ ಯಂತ್ರ ಆಮೆಗತಿಯಲ್ಲಿ ಸಾಗುವಂತಾಗಿದೆ. ರಾಜ್ಯದ 5,622 ಗ್ರಾಪಂಗಳಿಗೆ ಪ್ರಮುಖ ಆದಾಯದ ಮೂಲವಾದ ಕಟ್ಟಡ, ಮನೆ, ಖಾಲಿ ನಿವೇಶನ ಸೇರಿದಂತೆ ವಿವಿಧ ಪ್ರಕಾರದ ತೆರಿಗೆಗಳ ಮೂಲಕ ಸರ್ಕಾರದ ಬೊಕ್ಕಸಕ್ಕೆ ಜಮೆಯಾಗಬೇಕಿದ್ದ ನೂರಾರು ಕೋಟಿ ರೂ. ವಸೂಲಿ ಆಗದೆ ಬಾಕಿ ಉಳಿದುಕೊಂಡಿದೆ. ಕಳೆದ ಎರಡು ವರ್ಷದಿಂದ ಗ್ರಾಪಂಗಳಿಗೆ ತೆರಿಗೆ ವಸೂಲಿ ಮಾಡಲು ಆಗದ್ದರಿಂದ ಬಾಕಿ ಮೊತ್ತ ವರ್ಷದಿಂದ ವರ್ಷಕ್ಕೆ ಬೆಳೆಯುತ್ತಿದೆ.

ಯಾವ್ಯಾವ ತೆರಿಗೆ ಸಂಗ್ರಹ?: ಕಟ್ಟಡ ಮೇಲಿನ ತೆರಿಗೆ, ಬೀದಿ ದೀಪ, ಖಾಲಿ ನಿವೇಶನ, ಅಂಗಡಿ-ಮುಂಗಟ್ಟು ಸೇರಿ ಕೆಲವು ತೆರಿಗೆಗಳನ್ನು ಸಾರ್ವಜನಿಕರು ಕಟ್ಟಬೇಕು. ಕಟ್ಟದೆ ಇದ್ದರೆ ನೋಟಿಸ್ ಕೊಡುವ, ಇಲ್ಲವೆ ಆಸ್ತಿ ಹರಾಜು ಹಾಕಿ ಬೇಬಾಕಿ ವಸೂಲು ಮಾಡುವ ಅಧಿಕಾರ ಗ್ರಾಪಂಗಳಿಗಿದೆ.

ಪ್ರಭಾವಿ ಬೆಂಬಲಿಗರೇ ಪಾವತಿಸಿಲ್ಲ!: ಡಿಸೆಂಬರ್​ನಲ್ಲಿ ನಡೆದ ಗ್ರಾಪಂ ಚುನಾವಣೆಗೆ ಅಭ್ಯರ್ಥಿಗಳು ಎನ್​ಒಸಿ ಪಡೆಯುವ ಮುನ್ನ ಬಾಕಿ ಉಳಿದ ತೆರಿಗೆ ಪಾವತಿಸಬೇಕಿತ್ತು. ಬಹಳಷ್ಟು ಜನರು ಕಟ್ಟಿದ್ದಾರೆ. ಆದರೆ, ರಾಜಕಾರಣಿಗಳ ಬೆಂಬಲಿಗರು ಎಂದು ಹೇಳಿಕೊಳ್ಳುವ ಗ್ರಾಮೀಣ ಭಾಗದ ಬಹಳಷ್ಟು ನಾಯಕರು, ತೆರಿಗೆ ಬಾಕಿ ಉಳಿಸಿಕೊಂಡಿದ್ದಾರೆ ಎಂಬ ಆರೋಪವೂ ಇದೆ.

ಸದಸ್ಯರಿಂದಲೇ ಅಡ್ಡಿ: 2021-22ನೇ ಸಾಲಿನಲ್ಲಿ ಒಟ್ಟು 1,256.11 ಕೋಟಿ ರೂ. ತೆರಿಗೆ ವಸೂಲಿ ಆಗಬೇಕಿತ್ತು. ಆದರೆ ಇಲ್ಲಿಯವರೆಗೆ 80.22 ಕೋಟಿ ರೂ.ಮಾತ್ರ ವಸೂಲಾಗಿದೆ. 2020ರಿಂದ 2021ನೇ ಸಾಲಿನ ಅವಧಿಯಲ್ಲಿ ಕೋವಿಡ್ ಕಾರಣದಿಂದ ಹೇರಲಾಗಿದ್ದ ಲಾಕ್​ಡೌನ್ ತೆರವಾದ ಬಳಿಕ ಜನಜೀವನ ಯಥಾಸ್ಥಿತಿಗೆ ಮರಳುತ್ತಿದ್ದಂತೆ ಬಾಕಿ ತೆರಿಗೆ ಸಂಗ್ರಹಕ್ಕೆ ಗ್ರಾಪಂ ಸಿಬ್ಬಂದಿ ಮುಂದಾಗಿದ್ದರು. ಆದರೆ, ಕರೊನಾದಿಂದ ಆರ್ಥಿಕ ಸಂಕಷ್ಟ ಅನುಭವಿಸಿದ ಜನರು ಕರ ಕಟ್ಟಲು ಹಿಂದೇಟು ಹಾಕಿದ್ದರು. ಅಲ್ಲದೆ, ಗ್ರಾಪಂ ಸದಸ್ಯರೇ ತೆರಿಗೆ ವಸೂಲಿ ಮಾಡದಂತೆ ಅಡ್ಡಿ ಮಾಡುತ್ತಿರುವುದು ಗ್ರಾಪಂ ಸಿಬ್ಬಂದಿಯನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

ತಂತ್ರಾಂಶದಲ್ಲಿಲ್ಲ ಮಾಹಿತಿ: ಗ್ರಾಪಂಗಳಲ್ಲಿ ಆಸ್ತಿಗಳ ತೆರಿಗೆ ಪರಿಷ್ಕರಣೆ ಮಾಡುವ ಬಗ್ಗೆ ಹಾಗೂ ಪರಿಷ್ಕರಣೆಯಾದ ಮಾಹಿತಿಯನ್ನು ಪಂಚತಂತ್ರ ತಂತ್ರಾಂಶ ದಲ್ಲಿ ಅಳವಡಿಸಿದ್ದಾರೆಯೇ ಇಲ್ಲವೇ ಎಂಬ ಬಗ್ಗೆ 2 ವರ್ಷದಿಂದ ಸರ್ಕಾರದ ಹಂತದಲ್ಲಿ ಮೇಲ್ವಿಚಾರಣೆ ನಡೆಯುತ್ತಿದೆ. ಆದರೆ, ಬಹುತೇಕ ಗ್ರಾಪಂಗಳಲ್ಲಿ ತೆರಿಗೆ ಪರಿಷ್ಕರಣೆ ವಿವರ ಗಳನ್ನು ಪಂಚತಂತ್ರ ತಂತ್ರಾಂಶದಲ್ಲಿ ಅಳವಡಿಸಿಲ್ಲ. ಅಲ್ಲದೆ, ಪಂಚತಂತ್ರ ತಂತ್ರಾಂಶದಲ್ಲಿ ಪ್ರಸ್ತುತ ಆಸ್ತಿಗಳ ವಿವರ ಗಮನಿಸಿದಾಗ ಗ್ರಾಪಂನ 3,58,392 ಆಸ್ತಿ ಗಳಿಗೆ ಶೂನ್ಯ ಬೇಡಿಕೆ ಮತ್ತು 5,04,607 ಆಸ್ತಿಗಳಿಗೆ 1ರಿಂದ 100 ರೂ. ಬೇಡಿಕೆ ಅಳವಡಿಸಲಾಗಿದೆ ಎಂದು ಆರ್​ಡಿಪಿಆರ್ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಅತಿವೃಷ್ಟಿ, ಕೋವಿಡ್-19 ಇನ್ನಿತರ ಕಾರಣಗಳಿಂದಾಗಿ ನಿರೀಕ್ಷಿತ ಪ್ರಮಾಣದಲ್ಲಿ ತೆರಿಗೆ ವಸೂಲಿ ಆಗಿಲ್ಲ. ಈಗಾಗಲೇ ತೆರಿಗೆ ಬಾಕಿ ಉಳಿಸಿಕೊಂಡಿರುವ ಗ್ರಾಪಂಗಳಿಗೆ ನಿಗದಿತ ಸಮಯದಲ್ಲಿಯೇ ತೆರಿಗೆ ವಸೂಲಿ ಮಾಡಿ ತಂತ್ರಾಂಶದಲ್ಲಿ ಅಪ್​ಡೇಟ್ ಮಾಡುವಂತೆ ಸೂಚನೆ ನೀಡಲಾಗಿದೆ. | ಎಚ್.ವಿ. ದರ್ಶನ ಜಿಪಂ ಸಿಇಒ, ಬೆಳಗಾವಿ

ಹಣ ಸ್ವಂತಕ್ಕೆ ಬಳಕೆ

ಮನೆ ಮನೆಗೆ ತೆರಳಿ ತೆರಿಗೆ ವಸೂಲಿ ಮಾಡುತ್ತಿರುವ ಗ್ರಾಪಂನ ಕೆಲ ಸಿಬ್ಬಂದಿ, ಸಾರ್ವಜನಿಕರು ಕಟ್ಟುವ ತೆರಿಗೆಯನ್ನು ಗ್ರಾಪಂ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡುತ್ತಿಲ್ಲ. ದಿನಕ್ಕೆ 2ರಿಂದ 5 ಸಾವಿರ ರೂ. ತೆರಿಗೆ ವಸೂಲಿ ಮಾಡಿದರೆ ಬ್ಯಾಂಕ್​ಗಳಿಗೆ ಅಂದು ಅರ್ಧದಷ್ಟು ಹಣ ಮಾತ್ರ ಜಮಾ ಮಾಡಿ ಇನ್ನುಳಿದದ್ದನ್ನು ಸ್ವಂತಕ್ಕೆ ಬಳಸಿಕೊಳ್ಳತೊಡಗಿದ್ದಾರೆ. ಅಲ್ಲದೆ, ಕೆಲ ಗ್ರಾಪಂಗಳಲ್ಲಿ ತೆರಿಗೆ ವಸೂಲಿಗೆ ನಿಯೋಜಿಸಿದ ಸಿಬ್ಬಂದಿ ಎರಡೆರಡು ರಷೀದಿ ಬುಕ್ ನಿರ್ವಹಣೆ ಮಾಡುತ್ತಿದ್ದಾರೆ. ಹೀಗಾಗಿ ಗ್ರಾಮಸ್ಥರು ತೆರಿಗೆ ಕಟ್ಟಿದ್ದರೂ ಗ್ರಾಪಂ ದಾಖಲೆಗಳಲ್ಲಿ ತೆರಿಗೆ ಬಾಕಿ ಉಳಿದುಕೊಳ್ಳುತ್ತಿದೆ. ಈ ಬಗ್ಗೆ ಪರಿಶೀಲನೆ ನಡೆಸಿದರೂ ತೆರಿಗೆ ವಸೂಲಿಗಾರರು ಗ್ರಾಪಂ ಖಾತೆಗೆ ತೆರಿಗೆ ಹಣ ಜಮಾ ಮಾಡುತ್ತಿಲ್ಲ. ಹಾಗಾಗಿ ತೆರಿಗೆ ವಸೂಲಿಯಲ್ಲಿ ಪಾರದರ್ಶಕತೆ ತರಲು ಗ್ರಾಪಂಗಳಿಂದಲೇ ರಷೀದಿ ಮಷಿನ್ ಬಳಕೆ ಮಾಡಬೇಕು ಎಂದು ಗ್ರಾಪಂನ ಕೆಲ ಸದಸ್ಯರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net