ಬ್ಯೂಟಿಪಾರ್ಲರ್ ಹಂತಕಿಯನ್ನು ಜೈಲಿಗಟ್ಟಿದ ಪೊಲೀಸರು

ಬ್ಯೂಟಿಪಾರ್ಲರ್ ಹಂತಕಿಯನ್ನು ಜೈಲಿಗಟ್ಟಿದ ಪೊಲೀಸರು
ಬ್ಯೂಟಿಪಾರ್ಲರ್ ಹಂತಕಿಯನ್ನು ಜೈಲಿಗಟ್ಟಿದ ಪೊಲೀಸರು
Published on

*ಅಕ್ರಮ ಸಂಬಂಧದಿಂದ ರಿಯಲ್ ಎಸ್ಟೇಟ್ ಉದ್ಯಮಿ ಕೊಲೆ

ಪ್ರಿಯಕರನ ಹತ್ಯೆ ಮಾಡಿದ ಪ್ರಿಯಕರ!

ವಿಜಯವಾಣಿ ಸುದ್ದಿಜಾಲ ಬೆಂ.ಗ್ರಾಮಾಂತರ/ಸರ್ಜಾಪುರ
ಇಬ್ಬರು ಪ್ರಿಯಕರರೊಂದಿಗೆ ಸಲುಗೆಯಲ್ಲಿದ್ದ ಮಹಿಳೆಯೊಬ್ಬಳು ಒಬ್ಬ ಪ್ರಿಯಕರನ ಹತ್ಯೆಗೆ ಮತ್ತೊಬ್ಬ ಪ್ರಿಯಕರಿಗೆ ಸುಾರಿ ಕೊಟ್ಟು ಕೊಲೆ ಮಾಡಿಸಿರುವ ಪ್ರಕರಣ ಸರ್ಜಾಪುರ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ.
ಟಿ.ಸಿ.ಹಳ್ಳಿಯ ಬ್ಯೂಟಿಪಾರ್ಲರ್ ನಡೆಸುತ್ತಿದ್ದ ಶೋಭಾ (26) ಸುಾರಿ ಹಂತಕಿ. ಈಕೆ ಸಂಚಿಗೆ ಕೆ.ಆರ್.ಪುರಂನ ರಿಯಲ್ ಎಸ್ಟೇಟ್ ಉದ್ಯಮಿ ಚೇತನ್ ಕೊಲೆಯಾಗಿದ್ದಾನೆ. ಮತ್ತೊಬ್ಬ ಪ್ರಿಯಕರ ಹೊಸಕೋಟೆಯ ಸತೀಶ್ ಹಾಗೂ ಕೊಲೆಗೆ ಸಹಕರಿಸಿದ ಈತನ ಸ್ನೇಹಿತ ಶಶಿ ಜೈಲುಪಾಲಾಗಿದ್ದಾರೆ.
ಮುಗಳೂರು ಗ್ರಾಮದ ಬಳಿಯ ದಕ್ಷಿಣ ಪಿನಾಕಿನಿ ನದಿ ದಡದಲ್ಲಿ ಅ.26 ರಂದು ಪತ್ತೆಯಾಗಿದ್ದ ಅಪರಿಚಿತ ಶವ ಪ್ರಕರಣ ಬೇಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಇಬ್ಬರೊಂದಿಗೆ ಸಲುಗೆ: ಆರೋಪಿ ಶೋಭಾ ಪತಿಯೊಂದಿಗೆ ಆನೇಕಲ್ ತಾಲೂಕಿನ ಅತ್ತಿಬೆಲೆಯಲ್ಲಿ ವಾಸವಾಗಿದ್ದಳು. ಟಿ.ಸಿ.ಹಳ್ಳಿಯ ಬ್ಯೂಟಿಪಾರ್ಲರ್‌ನಲ್ಲಿ ಕೆಲಸ ಮಾಡುತ್ತಿದ್ದಳು. ಈ ವೇಳೆ ರಿಯಲ್‌ಎಸ್ಟೇಟ್ ಉದ್ಯಮಿ ಚೇತನ್ ಪರಿಚಯವಾಗಿ ಇಬ್ಬರ ನಡುವೆ ಸಲುಗೆ ಬೆಳೆದಿತ್ತು. ಏತನ್ಮಧ್ಯೆ ಆರೋಪಿ ಸತೀಶ್ ಸ್ನೇಹ ಬೆಳೆಸಿದ ಶೋಭಾ ಆತನೊಂದಿಗೆ ತಿರುಗಾಟ ಶುರುವಿಟ್ಟುಕೊಂಡಿದ್ದಳು. ಇತ್ತೀಚಿಗೆ ಸತೀಶ್ ಹೊಸದಾಗಿ ಬ್ಯೂಟಿಪಾರ್ಲರ್ ತೆರೆದು ಶೋಭಾಳಿಗೆ ಉಡುಗೊರೆಯಾಗಿ ನೀಡಿದ್ದ ಎನ್ನಲಾಗಿದೆ. ದಿನೆ ದಿನೇ ಸತೀಶ್‌ಗೆ ಹತ್ತಿರವಾಗಿದ್ದ ಶೋಭಾ ಹಳೇಯ ಪ್ರಿಯಕರ ಚೇತನ್‌ನೊಂದಿಗೆ ಅಂತರ ಕಾಯ್ದುಕೊಂಡಿದ್ದಳು. ಈ ಬಗ್ಗೆ ಆಕ್ರೋಶಗೊಂಡಿದ್ದ ಚೇತನ್ ಆಗಾಗ ಈಕೆಯೊಂದಿಗೆ ಜಗಳ ಮಾಡುತ್ತಿದ್ದ ಎನ್ನಲಾಗಿದೆ.
ಕೊಲೆ ಮಾಡಲು ಸಂಚು: ಚೇತನ್ ಸಂಬಂಧ ಕಡಿದುಕೊಳ್ಳಲು ಸಜ್ಜಾಗಿದ್ದ ಶೋಭಾ ಕೊಲೆ ಮಾಡಲು ಸಂಚು ರೂಪಿಸಿದ್ದಳು. ಈ ಬಗ್ಗೆ ಸತೀಶ್ ಹಾಗೂ ಆತನ ಸ್ನೇಹಿತ ಶಶಿಗೆ ಸುಾರಿ ನೀಡಿದ್ದಳು. ಪೂರ್ವ ಸಂಚಿನಂತೆ ಅ.26ರಂದು ಹೊಸಕೋಟೆಯಲ್ಲಿ ಚೇತನ್‌ಗೆ ಮದ್ಯಪಾನ ಮಾಡಿಸಿ ಕರೆತಂದಿದ್ದ ಹಂತಕರು ಮುಗಳೂರು ಗ್ರಾಮದ ಬಳಿಯ ದಕ್ಷಿಣ ಪಿನಾಕಿನಿ ನದಿ ಬಳಿ ಮಾರಕಾಸಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದರು.
ಮಿಸ್ಸಿಂಗ್ ಕಂಪ್ಲೆಂಟ್ ತನಿಖೆ: ಅಪರಿಚಿತ ಶವ ಪ್ರಕರಣ ಬೆನ್ನತ್ತಿದ ಪೊಲೀಸರು ಎಲ್ಲೆಲ್ಲಿ ಮಿಸ್ಸಿಂಗ್ ಕಂಪ್ಲೆಂಟ್ ದಾಖಲಾಗಿದೆ ಎಂದು ಪರಿಶೀಲನೆ ನಡೆಸಿದ ವೇಳೆ ಕೆ.ಆರ್.ಪುರಂ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿರುವುದು ಕಂಡುಬಂದಿತ್ತು. ತನಿಖೆ ನಡೆಸಿದ ಪೊಲೀಸರಿಗೆ ಶವದ ಗುರುತು ಪತ್ತೆಯಾಗಿತ್ತು. ಚೇತನ್ ಸ್ನೇಹಿತರು ಹಾಗೂ ಸ್ಥಳೀಯರ ವಿಚಾರಣೆ ವೇಳೆ ಶೋಭಾ ನಂಟಿನ ಬಗ್ಗೆ ವಿಷಯ ತಿಳಿದುಬಂದಿತ್ತು.
ಜೈಲು ಕಂಡಿದ್ದ ಶೋಭಾ: ಹಾಸನದಿಂದ ಬಂದು ಪತಿಯೊಂದಿಗೆ ಅತ್ತಿಬೆಲೆಯಲ್ಲಿ ನೆಲಸಿದ್ದ ಶೋಭಾ ಕೆಲವು ದಿನಗಳ ಹಿಂದೆ ಅತ್ತೆ, ಮಾವನನ್ನು ಮನೆಯಲ್ಲಿ ಕೂಡಿಹಾಕಿ ವಿಕೃತಿ ಮೆರೆದಿದ್ದ ಬಗ್ಗೆ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಜೈಲು ಕಂಡಿದ್ದ ಈಕೆ ವಾಪಸ್ ಬಂದ ಬಳಿಕ ಕುಟುಂಬದವರಿಂದ ಸಂಪೂರ್ಣ ದೂರವಾಗಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net