ಮಹಿಳಾ ಸಬಲೀಕರಣಕ್ಕೆ ಸ್ವಉದ್ಯೋಗ ಅವಶ್ಯಕ: ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕ ಎಸ್.ರಾಜಮೂರ್ತಿ ಅಭಿಮತ

1 (1)
Published on

ಮಂಡ್ಯ: ಮಹಿಳೆ ಆರ್ಥಿಕವಾಗಿ ಸಬಲೀಕರಣಗೊಳ್ಳಲು ಕೌಶಲಾಧಾರಿತ ಸ್ವಉದ್ಯೋಗ ಅವಶ್ಯಕ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕ ಎಸ್.ರಾಜಮೂರ್ತಿ ಹೇಳಿದರು.

ನಗರದ ನೆಹರು ಯುವ ಕೇಂದ್ರ ಸಭಾಂಗಣದಲ್ಲಿ ರೋಟರಿ ಸಂಸ್ಥೆ, ನೆಹರು ಯುವ ಕೇಂದ್ರ ಜಿಲ್ಲಾ ಶಾಖೆ, ಅನನ್ಯ ಹಾರ್ಟ್ ಸಂಸ್ಥೆ, ಅಕ್ಷಯ ಸಿರಿ ಚಾರಿಟಬಲ್ ಟ್ರಸ್ಟ್, ರೂಪಶ್ರೀ ಮಹಿಳಾ ಮತ್ತು ಗ್ರಾಮೀಣಾಭಿವೃದ್ದಿ ಸಂಘದ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ಬ್ಯೂಟಿಪಾರ್ಲರ್ ಮತ್ತು ಟೈಲರಿಂಗ್ ಉಚಿತ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು. ಇಂದಿನ ದಿನಗಳಲ್ಲಿ ಮಹಿಳೆಯರು ಪುರುಷರಷ್ಟೇ ಸಮಾನ ಅವಕಾಶವನ್ನು ಪಡೆದುಕೊಳ್ಳಲು ಮುಂದಾಗಿದ್ದಾರೆ. ಶಿಕ್ಷಣ, ಕೌಶಲಾಧಾರಿತ ಉದ್ಯೋಗಗಳಲ್ಲಿ ಮಹಿಳೆಯರು ಸಮಾಜದ ಮುಖ್ಯವಾಹಿನಿಗೆ ಬರುತ್ತಿದ್ದಾರೆ. ಮಹಿಳೆಯರು ಆರ್ಥಿಕವಾಗಿ ಮುಂದೆಬಂದರೆ ಸರ್ವತೋಮುಖ ಅಭಿವೃದ್ದಿಗೆ ನಾಂದಿಯಾಗುತ್ತದೆ. ರಾಜ್ಯ ಸರ್ಕಾರವು ನೂತನವಾಗಿ ಗೃಹಲಕ್ಷ್ಮೀ ಯೋಜನೆ ಜಾರಿಗೆ ತಂದಿದೆ, ಮನೆಯ ಯಜಮಾನಿಗೆ ಪ್ರತಿ ತಿಂಗಳು 2 ಸಾವಿರ ರೂ ಬರುತ್ತದೆ. ಸರ್ಕಾರಿ ಸ್ವಾಮ್ಯದ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಿ ಉಚಿತವಾಗಿ ನೋಂದಣಿ ಮಾಡಿಸಿಕೊಳ್ಳಬಹುದು ಎಂದು ಸಲಹೆ ನೀಡಿದರು.

ನೇಗಿಲಯೋಗಿ ಸಮಾಜಸೇವಾ ಟ್ರಸ್ಟ್ ಅಧ್ಯಕ್ಷ ಎ.ಸಿ.ರಮೇಶ್ ಮಾತನಾಡಿ, ಮಹಿಳೆಯರು ಶಕ್ತಿಯುತವಾಗಿ ಎಲ್ಲ ಕ್ಷೇತ್ರಗಳಲ್ಲೂ ಸಬಲೀಕರಣಗೊಳ್ಳುತ್ತಿದ್ದಾರೆ. ಅವರು ಆರ್ಥಿಕವಾಗಿ ಸ್ವಾವಲಂಬಿಯಾದರೆ ಸದೃಢ ಸಮಾಜ ನಿರ್ಮಾಣವಾಗುತ್ತದೆ. ಹಿಂದೆ ಕುಟುಂಬದ ನಿರ್ವಹಣೆ ವೆಚ್ಚವು ಬರೀ ಪುರುಷರಿಗೆ ಸೀಮಿತವಾಗಿತ್ತು. ಈಗ ಮಹಿಳೆಯರೂ ವೆಚ್ಚ ನಿರ್ವಹಿಸುತ್ತಿದ್ದಾರೆ. ಇದು ಸಾಮರಸ್ಯದ ಸಂಕೇತವಾಗಿದೆ ಎಂದರು.

ಜಿಲ್ಲಾ ಕೌಶಲಾಭಿವೃದ್ದಿ ಅಧಿಕಾರಿ ಎನ್.ಆರ್.ವೇಣುಗೋಪಾಲ್, ರೋಟರಿ ಅಧ್ಯಕ್ಷೆ ಬಿ.ಎಸ್.ಅನುಪಮಾ, ನಿರ್ದೇಶಕ ಹೊನ್ನೇಗೌಡ, ಕಾರ್ಯದರ್ಶಿ ರಾಜೇಶ್, ಅಕ್ಷಯಸಿರಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಲೋಕೇಶ್ ಲಕ್ಕಪ್ಪ, ರೂಪಶ್ರೀ ಮಹಿಳಾ ಮತ್ತು ಗ್ರಾಮೀಣಾಭಿವೃದ್ದಿ ಸಂಘದ ಅಧ್ಯಕ್ಷ ರಾಜೇಶ್ ಆಚಾರ್, ಎನ್‌ವೈಕೆ ಲೆಕ್ಕಾಧಿಕಾರಿ ರವಿಚಂದ್ರ, ಶಿಕ್ಷಕಿ ಸುವರ್ಣ, ಪವಿತ್ರಾ ಇತರರಿದ್ದರು. ಇದೇ ಸಂದರ್ಭದಲ್ಲಿ 110ಕ್ಕೂ ಹೆಚ್ಚು ಮಹಿಳೆಯರು ತರಬೇತಿಯಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net