

ಶಿವಮೊಗ್ಗ: ಸಹೋದರ ಸಹೋದರಿ ನಡುವಿನ ಭಾವನಾತ್ಮಕ ಬಾಂಧವ್ಯದ ಸಾಕ್ಷಾತ್ಕಾರವೇ ರಕ್ಷಾಬಂಧನ. ಇದು ಭಾರತೀಯ ಸಂಸ್ಕೃತಿಯ ಸೊಗಸು ಎಂದು ಆರ್‌ಎಸ್‌ಎಸ್‌ನ ಜಿಲ್ಲಾ ಬೌದ್ಧಿಕ ಪ್ರಮುಖ್ ಮೇಘರಾಜ್ ಅಭಿಪ್ರಾಯಪಟ್ಟರು.
ಶಿಕಾರಿಪುರದ ಶ್ರೀ ಕೊಟ್ಟೂರೇಶ್ವರ ವಿದ್ಯಾ ಸಂಸ್ಥೆಯ ಅಂಗ ಸಂಸ್ಥೆಗಳಾದ ವೃಷಭ ಸಿಬಿಎಸ್ಸಿ ಮತ್ತು ಕೆವಿಎಸ್ ಪಿಯು ಸೈನ್ಸ್ ಕಾಲೇಜು ಸಂಯುಕ್ತ ಆಶ್ರಯದಲ್ಲಿ ಗುರುವಾರ ಏರ್ಪಡಿಸಿದ್ದ ರಕ್ಷಾಬಂಧನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದ ಇತಿಹಾಸದಲ್ಲಿ ಅನಿರೀಕ್ಷಿತ ಪರಿವರ್ತನೆಗೆ , ದೇಶದ ಸಂಸ್ಕಾರ ವಿಶ್ವ ಸಹೋದರತೆಯ ಎತ್ತರಕ್ಕೆ ಏರುವುದಕ್ಕೆ ರಾಖಿ ಕಾರಣವಾಗುವುದು ಒಂದು ಅದ್ಭುತ ಮನೋಧರ್ಮದ ದರ್ಶನ. ಅದೇ ಭಾರತೀಯ ಜೀವನ ವಿಧಾನದ ವೈಶಾಲ್ಯ . ಇದೇ ಭ್ರಾತೃ ಭಗಿನಿ ಬಾಂಧವ್ಯ ಬಂಧನ ಎಂದರು.
ಒಡಹುಟ್ಟಿದವರೊಂದಿಗೆ ಸಮಾಜದ ಸ್ತ್ರೀಯರೆಲ್ಲ ತನ್ನ ಸೋದರಿಯರು ಎಂಬ ಉದಾತ್ತ ಭಾವದೊಂದಿಗೆ ಚಿತ್ತಶುದ್ಧಿಯ ಜೀವನಕ್ಕೆ ರಾಖಿ ಬಂಧನ ಇಂಬು ಕೊಡುತ್ತದೆ. ಅನಿವಾರ್ಯ ಆಪತ್ಕಾಲದಲ್ಲಿ ಸ್ತ್ರೀಯ ಮಾನ, ಪ್ರಾಣ ರಕ್ಷಣೆಗೆ ಪ್ರಾಣಾರ್ಪಣೆಗೂ ಸಿದ್ಧನಾಗುವುದು ಪುರುಷನ ಕರ್ತವ್ಯವಾದರೂ ಅದನ್ನು ರೂಢಿಸಿಕೊಳ್ಳುವ ಮನಸ್ಥಿತಿ ಏರ್ಪಡಲು ರಕ್ಷಾ ಬಂಧನ ಪ್ರೇರಣೆಯಾಗುತ್ತದೆ ಎಂದು ಹೇಳಿದರು.
ಸಂಸ್ಥೆಯ ಕಾರ್ಯದರ್ಶಿ ಎಚ್.ವಿ.ದೇವರಾಜ್ ಅಧ್ಯಕ್ಷತೆ ವಹಿಸಿದ್ದರು. ನಿರ್ದೇಶಕಿ ರೂಪಾ ದೇವರಾಜ್, ಆರ್‌ಎಸ್‌ಎಸ್ ಶಿಕಾರಿಪುರ ತಾಲೂಕು ಪ್ರಚಾರಕ ಶ್ರೀನಿವಾಸ್, ತಾಲೂಕು ಕಾರ್ಯವಾಹ ಮುರಳೀಧರ್, ಕೆವಿಎಸ್ ಪಿಯು ಕಾಲೇಜಿನ ಪ್ರಾಚಾರ್ಯ ಬಸವರಾಜ ಮುದೇನೂರು, ವೃಷಭ ಸಿಬಿಎಸ್ಸಿ ಪ್ರಾಚಾರ್ಯೆ ಗೀತಾ ಎಸ್.ಬಣಕಾರ್, ಮುಖ್ಯಶಿಕ್ಷಕ ಡಿ. ಮಂಜುನಾಥ್ ಮುಂತಾದವರಿದ್ದರು.