ಸುಂದರ- ಸ್ವಚ್ಛ ಮರವಂತೆ ಅಭಿಯಾನಕ್ಕೆ ಚಾಲನೆ

gan (10)
Published on

ಕುಂದಾಪುರ: ಮರವಂತೆ ನದಿ ಕಡಲಿನಿಂದ ಆವೃತವಾದ ಪ್ರಕೃತಿ ರಮ್ಯ ಪ್ರವಾಸಿ ತಾಣ. ಇದನ್ನು ಇನ್ನಷ್ಟು ಸುಂದರ ಮತ್ತು ಸ್ವಚ್ಛವಾಗಿ ಮಾರ್ಪಡಿಸಲು ಗ್ರಾಮ ಪಂಚಾಯಿತಿ ರೂಪಿಸಿದ ಸುಂದರ ಮರವಂತೆ ಸ್ವಚ್ಛ ಮರವಂತೆ ಅಭಿಯಾನಕ್ಕೆ ಮಂಗಳವಾರ ಚಾಲನೆ ನೀಡಲಾಯಿತು.

ಗ್ರಾಮ ಪಂಚಾಯಿತಿ ಸಭಾಭವನದಲ್ಲಿ ಪಂಚಾಯಿತಿ ಅಧ್ಯಕ್ಷ ನಾಗರಾಜ್ ಅಧ್ಯಕ್ಷತೆಯಲ್ಲಿ ನಡೆದ ಪಂಚಾಯಿತಿ ಸದಸ್ಯರ, ಸಂಘಸಂಸ್ಥೆಗಳ ಪ್ರಮುಖರ, ಇಲಾಖೆಗಳ ಅಧಿಕಾರಿಗಳ, ಸಮುದಾಯದ ಹಿರಿಯರ ಸಭೆಯಲ್ಲಿ ಯೋಜನೆಯ ವಿವರಗಳನ್ನು ಕೂಲಂಕಷವಾಗಿ ಚರ್ಚಿಸಲಾಯಿತು.

ಗ್ರಾಪಂ ಕ್ರಮಬದ್ಧವಾಗಿ ತ್ಯಾಜ್ಯ ನಿರ್ವಹಣೆ ಮಾಡುತ್ತಿದ್ದರೂ ಜನರು ಸಾರ್ವಜನಿಕ ಸ್ಥಳಗಳಲ್ಲಿ, ರಸ್ತೆಯ ಇಕ್ಕೆಲಗಳಲ್ಲಿ ಎಸೆಯುವ ಪ್ಲಾಸ್ಟಿಕ್ ಮತ್ತು ಇತರ ತ್ಯಾಜ್ಯಗಳಿಂದ ಊರಿನ ಸೌಂದರ್ಯ ಕೆಡುತ್ತಿದೆ. ಈ ಬಗ್ಗೆ ಜನರಲ್ಲಿ ಅರಿವು ಮೂಡಿಸಿ ಸ್ವಚ್ಛತೆಗೆ ಕಾಪಾಡಲು ಪಂಚಾಯಿತಿ ರೂಪಿಸಿದ ಯೋಜನೆಗೆ ಮೆಚ್ಚುಗೆ ವ್ಯಕ್ತವಾಯಿತು.

ಗ್ರಾಪಂ ಸದಸ್ಯರು, ಅಧಿಕಾರಿಗಳು, ಶಾಲೆಗಳ ಮುಖ್ಯಶಿಕ್ಷಕರು, ಆರೋಗ್ಯ ಅಧಿಕಾರಿಗಳು, ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಸಾಧನಾ ವೇದಿಕೆ, ಸಂಗಮ ಯುವಕ ಮಂಡಲ, ವರಾಹ ದೇವಸ್ಥಾನ, ರಾಮ ಮಂದಿರ, ಸಂಜೀವಿನಿ ಸಂಸ್ಥೆಗಳ ಪ್ರಮುಖರು, ವಿಶ್ವಕರ್ಮ, ಬಿಲ್ಲವ, ದಲಿತ ಸಂಘಟನೆಗಳ ಮುಖಂಡರು, ಕ್ಲೀನ್ ತ್ರಾಸಿ ಮರವಂತೆ, ಕ್ಲೀನ್ ಕಿನಾರಾ, ಸಾಹಸ್ ಸಂಘಟನೆಗಳ ಕಾರ್ಯಕರ್ತರು, ನಾಗರಿಕರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net