

ಹುಬ್ಬಳ್ಳಿ: ಮದುಮಗಳಿಗೆ ವಿಶೇಷ ಅಲಂಕಾರ ಮಾಡುವ ಆನ್‌ಲೈನ್ ಸ್ಪರ್ಧೆಯಲ್ಲಿ ಹುಬ್ಬಳ್ಳಿಯ ಬ್ಯೂಟಿಷಿಯನ್ ಶೈಲಜಾ ಶ್ರೀರಾಮ ಬಗಾಡೆ ಪಾಲ್ಗೊಳ್ಳುವ ಮೂಲಕ ಸಾಧನೆಯ ಹಾದಿಯಲ್ಲಿದ್ದಾರೆ. ಗಿನ್ನೆಸ್ ವರ್ಲ್ಡ್ ರೆಕಾರ್ಡ್‌ಗೆ ದಾಖಲಾಗುವ ಈ ಸ್ಪರ್ಧೆಯಲ್ಲಿ ಭಾಗವಹಿಸುವ ಮುಖೇನ ಶೈಲಜಾ ಹುಬ್ಬಳ್ಳಿಯ ಹಿರಿಮೆ-ಗರಿಮೆ ಹೆಚ್ಚಿಸಿದ್ದಾರೆ.
ಬ್ರಾಹ್ಮಣಿ ಇವೆಂಟ್ಸ್ ಆ್ಯಂಡ್ ಎಕ್ಸಿಬಿಷನ್ ಪ್ರೈ. ಲಿ., ಬೀಸಾ ಇಂಟರ್‌ನ್ಯಾಶನಲ್ ಬ್ಯೂಟಿ ಸಲೂನ್ ಟ್ರೇಡ್ ಶೋ ಹಾಗೂ ಆಲ್ ಇಂಡಿಯಾ ಹೇರ್ ಆ್ಯಂಡ್ ಬ್ಯೂಟಿ ಅಸೋಸಿಯೇಶನ್ ಸಹಭಾಗಿತ್ವದಲ್ಲಿ 45 ನಿಮಿಷದಲ್ಲಿ ಮದುಮಗಳಿಗೆ ವಿಶೇಷ ಅಲಂಕಾರ ಮಾಡುವ ಆನ್‌ಲೈನ್ ಸ್ಪರ್ಧೆ 20 ಡಿಸೆಂಬರ್ 2020ರಂದು ಆಯೋಜಿಸಲಾಗಿತ್ತು. ಈ ಸ್ಪರ್ಧೆ ಗಿನ್ನೆಸ್ ವರ್ಲ್ಡ್ ರೆಕಾರ್ಡ್‌ಗೆ ದಾಖಲಾಗಲಿದೆ. ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಜಿ ಆಹ್ವಾನಿಸಲಾಗಿತ್ತು. ದೇಶಾದ್ಯಂತ 1146 ಸ್ಪರ್ಧಾಳುಗಳಿಗೆ ಸ್ಪರ್ಧಿಸಲು ಅವಕಾಶ ಸಿಕ್ಕಿತ್ತು. ಈ ಪೈಕಿ ಹುಬ್ಬಳ್ಳಿಯಿಂದ ಶೈಲಜಾ ಅವರಿಗೆ ಸ್ಪರ್ಧಿಸಲು ಅವಕಾಶ ಸಿಕ್ಕಿದ್ದು ವಿಶೇಷ. ಸ್ಪರ್ಧೆಯಲ್ಲಿ ಯಶಸ್ವಿಯಾಗಿ ಭಾಗಿಯಾಗಿದ್ದಕ್ಕೆ ಶೈಲಜಾ ಅವರಿಗೆ ಪ್ರಶಂಸೆ ಪತ್ರ ರವಾನಿಸಲಾಗಿದೆ.