ಡ್ರೋನ್​ ಕ್ಯಾಮರಾದಲ್ಲಿ ಸೆರೆಯಾದ ಕರಡಿಗಳ ಆಟ

karadi
Published on

ಅವ್ವೇರಹಳ್ಳಿ ರೇವಣಸಿದ್ದೇಶ್ವರ ಬೆಟ್ಟದಲ್ಲಿ ಸೆರೆ

ಕೈಲಾಂಚ: ಪ್ರಸಿದ್ದ ಪ್ರವಾಸಿ ತಾಣ ಅವ್ವೇರಹಳ್ಳಿ ರೇವಣಸಿದ್ದೇಶ್ವರ ಬೆಟ್ಟದ ಅಕ್ಕಪಕ್ಕದ ಬೆಟ್ಟದ ಮೇಲೆ ಕರಡಿ ತನ್ನ ಮರಿಯೊಂದಿಗೆ ಆಹಾರ ತಿನ್ನುತ್ತ ಓಡಾಟ ನಡೆಸಿರುವ ದೃಶ್ಯವನ್ನು ಪ್ರವಾಸಿಗರೊಬ್ಬರು ಡ್ರೋನ್​ ಕ್ಯಾಮರಾ ಮೂಲಕ ಸೆರೆ ಹಿಡಿದಿದ್ದು, ಇದು ಕಳೆದ 2 ದಿನದಿಂದ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆೆ.

ಅವ್ವೇರಹಳ್ಳಿ ರೇವಣಸಿದ್ದೇಶ್ವರ ಬೆಟ್ಟ, ಹಂದಿಗುಂದಿ ಅರಣ್ಯಪ್ರದೇಶಕ್ಕೆ ಹೊಂದಿಕೊಂಡಿದೆ. ಬೆಟ್ಟ ಕಲ್ಲುಗಳಿಂದ ಆವೃತ್ತವಾಗಿದ್ದರೂ ಬೆಟ್ಟಗಳ ಮೇಲೆ ಸಾಕಷ್ಟು ಅರಣ್ಯ ಪ್ರದೇಶ ಇದೆ. ಪುರಾತನ ಕಾಲದಿಂದಲೂ ಬೆಟ್ಟದಲ್ಲಿ ಮತ್ತು ಅದರ ಅಕ್ಕಪಕ್ಕ ಕರಡಿಗಳು ವಾಸ ಮಾಡುತ್ತಿವೆ.

ಮುಂಜಾವು ಸಂಜೆ ವೇಳೆಯಲ್ಲಿ ಕರಡಿಗಳು ಗುಹೆಯಿಂದ ಹೊರಬಂದು ಆಹಾರ ಅರಸುತ್ತಾ ಬೆಟ್ಟದ ಆಸುಪಾಸಿನಲ್ಲೇ ಓಡಾಟ ನಡೆಸುತ್ತವೆ.

ಬೆಟ್ಟಕ್ಕೆ ಬಂದ ಭಕ್ತರಿಗೆ, ಬೆಟ್ಟದ ನಿವಾಸಿಗಳಿಗಳಿಗೆ ಹಾಗೂ ಅಕ್ಕಪಕ್ಕದ ಗ್ರಾಮಗಳ ಜನರಿಗೆ ಕರಡಿಗಳು ಆಗಿಂದಾಗ್ಗೆ ಕಾಣಿಸಿಕೊಳ್ಳುತ್ತಿರುತ್ತವೆ. ಕೆಲವು ವರ್ಷಗಳ ಹಿಂದೆ ಬೆಟ್ಟಕ್ಕೆ ಬಂದ ಭಕ್ತರೊಬ್ಬರಿಗೆ ಕರಡಿ ಗಾಯ ಮಾಡಿದ ಉದಾಹರಣೆಯೂ ಇದೆ. ಇದೀಗ ಕರಡಿಯ ಚಿತ್ರಣವನ್ನು ಮೊಬೈಲ್​ನಲ್ಲಿ ಹರಿಬಿಟ್ಟ ಕಾರಣ ಸಾಕಷ್ಟು ವೈರಲ್​ ಆಗಿದೆ.

2 ಕಾಲಿನಲ್ಲಿ ನಿಂತ ಕರಡಿ ಮತ್ತು ಮರಿ

ಬೆಟ್ಟದ ತಂಪಾದ ಸ್ಥಳದಲ್ಲಿ ಮರಗಿಡಗಳ ಮಧ್ಯೆ ಆಹಾರ ತಿನ್ನುತ್ತಾ ತನ್ನ ಮರಿಯೊಂದಿಗೆ ಕರಡಿ ಆಟವಾಡುವ ಚಿತ್ರಣವನ್ನು ಡ್ರೋನ್​ ಕ್ಯಾಮರಾದಲ್ಲಿ ಸೆರೆಹಿಡಿಯಲಾಗಿದೆ. ಕ್ಯಾಮರಾ ನೋಡಿ ಮತ್ತು ಸದ್ದು ಕೇಳಿ ಅದರ ಕಡೆ ನೋಡುತ್ತಾ ಮರಿ ಮತ್ತು ಕರಡಿ ಎರಡು ಕಾಲಿನಲ್ಲಿ ನಿಂತಿವೆ. ನಂತರ ಕರಡಿ ತನ್ನ ಮರಿಯನ್ನು ಬೆನ್ನ ಮೇಲೆ ಕೂರಿಸಿಕೊಂಡು ಹಸಿರು ಗಿಡ ಮರಗಳ ಮಧ್ಯೆ ಹೋಗಿ ಕಲ್ಲಿನ ಗುಹೆಯೊಳಗೆ ಸೇರಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net