ತನ್ನಷ್ಟದಂತೆ ರಸ್ತೆ ಮಾರ್ಪಾಡು ಮಾಡಿದವರಿಗೆ ನೋಟಿಸ್ ನೀಡಿದ ಬೀರೂರು ಪುರಸಭೆ

web 4
Published on

ಬೀರೂರು: ಪುರಸಭೆ ವ್ಯಾಪ್ತಿಯ ಕಾಂಕ್ರೀಟ್ ರಸ್ತೆಯನ್ನೇ ವ್ಯಕ್ತಿಯೊಬ್ಬ ಅನುಕೂಲಕ್ಕೆ ತಕ್ಕಂತೆ ಎರಡು ಅಡಿಯಷ್ಟು ಎತ್ತರ ಮಾಡಿಕೊಂಡಿದ್ದನ್ನು ಮೂರು ದಿನಗಳೊಳಗೆ ತೆರವುಗೊಳಿಸುವಂತೆ ಪುರಸಭೆ ನೋಟಿಸ್ ಜಾರಿಗೊಳಿಸಿದೆ.

ಪಟ್ಟಣದ ಶ್ರೀರಾಂಪುರ ಮುಖ್ಯ ರಸ್ತೆಯಲ್ಲಿ ವ್ಯಕ್ತಿಯೊಬ್ಬರು ಮನೆ ನಿರ್ವಿುಸುವ ಸಂದರ್ಭ ರಸ್ತೆಯನ್ನು ಹಾಳುಗೆಡವಿ, ತನ್ನ ಮನೆಯ ವಾಹನಗಳ ರ್ಪಾಂಗ್​ಗೆ ಅನುಕೂಲವಾಗುವಂತೆ ರಸ್ತೆಯನ್ನು ಎತ್ತರಿಸಿ ಕಾಂಕ್ರಿಟೀಕರಣ ಮಾಡಿಕೊಂಡಿದ್ದರು. ಇದರಿಂದ ಪಾದಚಾರಿಗಳು, ವಾಹನಗಳಿಗೆ, ಶಾಲಾ ಮಕ್ಕಳ ಓಡಾಟಕ್ಕೆ ತೊಂದರೆಯಾಗಿತ್ತು. ಈ ಕುರಿತು ವಿಜಯವಾಣಿ ಜ.29ರ ಸಂಚಿಕೆಯಲ್ಲಿ ವರದಿ ಪ್ರಕಟವಾಗಿತ್ತು. ಇದನ್ನು ಗಮನಿಸಿದ ಪುರಸಭೆ ಅಧಿಕಾರಿಗಳು ವ್ಯಕ್ತಿಗೆ ಪುರಸಭೆ ರಸ್ತೆ ಹಾಳುಗೆಡವಿದ್ದನ್ನು ಪ್ರಶ್ನಿಸಿ ನೋಟಿಸ್ ಜಾರಿಗೊಳಿಸಿದ್ದಾರೆ.

ದೂರು ಬಂದ ಹಿನ್ನೆಲೆಯಲ್ಲಿ ಸ್ಥಳ ಪರಿಶೀಲನೆ ನಡೆಸಿದ್ದು, ಪುರಸಭೆ ರಸ್ತೆಯನ್ನು ನಾಶ ಮಾಡಿರುವುದರ ಬಗ್ಗೆ ನೋಟಿಸ್ ನೀಡಲಾಗಿದೆ. ಮೂರು ದಿನದಲ್ಲಿ ರಸ್ತೆಯನ್ನು ಯಥಾಸ್ಥಿತಿಗೆ ತಂದು ಕೊಡದಿದ್ದಲ್ಲಿ ಪುರಸಭೆಯಿಂದ ಅಕ್ರಮ ಕಾಮಗಾರಿಯನ್ನು ತೆರವುಗೊಳಿಸಿ ಸಂಬಂಧಿಸಿದವರಿಂದಲೇ ಅದರ ಖರ್ಚನ್ನು ಭರಿಸಿ ಪ್ರಕರಣ ದಾಖಲಿಸಲಾಗುವುದು ಎಂದು ಪುರಸಭೆ ಮುಖ್ಯಾಧಿಕಾರಿಕೆ. ಎಂ.ಸತ್ಯನಾರಾಯಣ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net