ಬಳ್ಳಾರಿ ; ಇಲ್ಲಿನ ಬಳ್ಳಾರಿ ಕೋಟೆಯ ಮೇಲೆ ಅಡಗಿದ್ದ ಕರಡಿಯನ್ನು ಬುಧವಾರ ಬೆಳಗಿನ ಜಾವ ಅರಣ್ಯ ಅಧಿಕಾರಿಗಳು ಸೆರೆ ಹಿಡಿದಿದ್ದಾರೆ.
ಅಂದಾಜು ಐದು ವರ್ಷದ ಹೆಣ್ಣು ಕರಡಿಯಾಗಿದೆ. ಪಶು ವೈದ್ಯರ ಪ್ರಾಥಮಿಕವಾಗಿ ಪರೀಕ್ಷಿಸಿ ಗುರುತಿಗಾಗಿ ಮೈಕ್ರೋ ಚಿಪ್ ಅಳವಡಿಸಲಾಗಿದೆ. ಅಲ್ಲದೆ, ಹೆಚ್ಚಿನ ಚಿಕಿತ್ಸೆ ಮತ್ತು ಪರೀಕ್ಷೆಗಾಗಿ ಕಮಲಾಪುರದ ಅಟಲ್ ಬಿಹಾರಿ ವಾಜಪೇಯಿ ಮೃಗಾಲಯಕ್ಕೆ ಕಳುಹಿಸಲಾಗಿದೆ. ಮಂಗಳವಾರ ತಡರಾತ್ರಿ ನಗರದ ಕಂಟೋನ್ಮೆಂಟ್ ಪ್ರದೇಶದಲ್ಲಿ ಕರಡಿ ಅಲೆದಾಡಿರುವ ದೃಶ್ಯ ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆಯಾಗಿತ್ತು ಸ್ಥಳೀಯರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು.
ವಲಯ ರಕ್ಷಣಾಧಿಕಾರಿ ಡಿ.ಕೆ.ಗಿರೀಶ್ ಕುಮಾರ ಹಾಗೂ ಸಿಬ್ಬಂದಿ ನೇತೃತ್ವದಲ್ಲಿ ಕಾರ್ಯಾಚರಣೆ ಆರಂಭಿಸಿದ ವೇಳೆ ಮಂಗಳವಾರದಂದು ಕರಡಿ ಕೋಟೆ ಪ್ರದೇಶದಲ್ಲೇ ಉಳಿದಿತ್ತು. ರಾತ್ರಿ 9.00 ಗಂಟೆಗೆ ಕರಡಿ ನಿಧಾನವಾಗಿ ಕೋಟೆಯಿಂದ ಕೆಳಕ್ಕೆ ಇಳಿಯಲು ಪ್ರಾರಂಭಿಸಿದಾಗ ಸೆರೆ ಕಾರ್ಯಾಚರಣೆ ಆರಂಭಿಸಲಾಯಿತು. ರಾತ್ರಿ ಇಡೀ ಕಾರ್ಯಾಚರಣೆ ನಡೆಸಿ ಬೆಳಗಿನ ಜಾವ 3ಗಂಟೆ ವೇಳೆಗೆ ಯಶಸ್ವಿಯಾಗಿ ಸೆರೆ ಹಿಡಿಯಲಾಯಿತು ಎಂದು ಉಪ ಸಂರಕ್ಷಣಾಧಿಕಾರಿ ಡಾ.ಕೆ.ಎನ್.ಬಸವರಾಜ್ ತಿಳಿಸಿದ್ದಾರೆ.