ಜೂ ವಾಹನ ಚಾಲಕರೊಬ್ಬರ ಮೇಲೆ ಕರಡಿ ದಾಳಿ, ತಲೆಗೆ ತೀವ್ರ ಗಾಯ; ತಪ್ಪಿಸಿಕೊಂಡಿರುವ ಕರಡಿಗಾಗಿ ಹುಡುಕಾಟ

Untitled
ತಲೆಗೆ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿರುವ ಚಾಲಕ ಜಯಶಂಕರ್
Published on

ಬನ್ನೇರುಘಟ್ಟ: ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದಲ್ಲಿ ಪಂಜರದಿಂದ ತಪ್ಪಿಸಿಕೊಂಡ ಕರಡಿಯೊಂದು ಜೂ ವಾಹನ ಚಾಲಕರೊಬ್ಬರ ಮೇಲೆ ದಾಳಿ ನಡೆಸಿದ್ದು, ಅವರ ತಲೆಗೆ ತೀವ್ರ ಗಾಯವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಜೂ ವಾಹನದ ಚಾಲಕ ಜಯಶಂಕರ್ ಗಾಯಗೊಂಡವರು.

ಗಂಭೀರವಾಗಿ ಗಾಯಗೊಂಡಿರುವ ಜಯಶಂಕರ್ ಅವರನ್ನು ಜಿಗಣಿಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಹಲವಾರು ವರ್ಷಗಳಿಂದ ಜೈವಿಕ ಉದ್ಯಾನವನದ ಚಾಲಕರಾಗಿರುವ ಶಿವಮೊಗ್ಗ ಮೂಲದ ಜಯಶಂಕರ್ ಅವರನ್ನು ಜೈವಿಕ ಉದ್ಯಾನದ ವನಶ್ರೀ ವಿಪಿನ ಸಿಂಗ್ ಅವರು ಭೇಟಿ ನೀಡಿ ಯೋಗಕ್ಷೇಮ ವಿಚಾರಿಸಿದ್ದಾರೆ.

ತುಮಕೂರಿನ ಸಿದ್ದಗಂಗಾ ಮಠದ ಬಳಿ ಕಾಣಿಸಿಕೊಂಡಿದ್ದ ಕರಡಿಯನ್ನು ಸೆರೆ ಹಿಡಿದು, ನಂತರ ಅದನ್ನು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನಕ್ಕೆ ರವಾನೆ ಮಾಡಲಾಗಿತ್ತು. 9 ವರ್ಷದ ಈ ಗಂಡು ಕರಡಿ 120 ಕೆ.ಜಿ.ಗೂ ಅಧಿಕ ತೂಕ ಇತ್ತು. ಶಕ್ತಿಶಾಲಿಯಾಗಿದ್ದ ಕರಡಿ ಪಂಜರದ ಕೆಳಭಾಗವನ್ನು ಹಾನಿಗೊಳಿಸಿತ್ತು. ಆದರೆ ಈ ಬಗ್ಗೆ ಗೊತ್ತಾಗದೆ ಪಂಜರವನ್ನು ಹಿಂದಕ್ಕೆ ಎಳೆದಾಗ ತಪ್ಪಿಸಿಕೊಂಡ ಕರಡಿ, ಜಯಶಂಕರ್ ಮೇಲೆ ದಾಳಿ ನಡೆಸಿ, ಗಾಯಗೊಳಿಸಿ ಪರಾರಿಯಾಗಿದೆ.

ತಪ್ಪಿಸಿಕೊಂಡಿರುವ ಕರಡಿಗಾಗಿ ಹುಡುಕಾಟ ಮುಂದುವರಿದಿದೆ. ಕರಡಿ ಪತ್ತೆಗೆಂದೇ ಎರಡು ತಂಡಗಳನ್ನು ರಚಿಸಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಪಂಜರ ಹಾನಿಗೊಂಡಿರುವುದು ಗೊತ್ತಿದ್ದೂ ತುಮಕೂರಿನಿಂದ ಅದರಲ್ಲೇ ಕರಡಿಯನ್ನು ಕಳುಹಿಸಿದ್ದಾರೆ ಎನ್ನಲಾಗಿದೆ. ಸದ್ಯ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಹುಚ್ಚನ ಕುಂಟೆ ಕೆರೆ ಸುತ್ತಮುತ್ತ ಕಾರ್ಯಾಚರಣೆ ನಡೆಯುತ್ತಿದ್ದು, ಇದುವರೆಗೂ ಕರಡಿಯ ಸುಳಿವು ಸಿಕ್ಕಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net