

ಮಂಡ್ಯ: ಜಿಲ್ಲೆಯಲ್ಲಿರುವ ಅಂಧ ಮತ್ತು ಕಿವುಡ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಬಲ ಕೊಡುವ ನಿಟ್ಟಿನಲ್ಲಿ ಬೀಕನ್ ಗ್ರಂಥಾಲಯ ಪ್ರಾರಂಭಕ್ಕೆ ಜಿಲ್ಲಾ ಪಂಚಾಯಿತಿ ಮುಂದಾಗಿದೆ. ಇದಕ್ಕಾಗಿ ವಿಶೇಷ ಕಾರ್ಯಕ್ರಮ ರೂಪಿಸಿದೆ.
ವ್ಯಾಸಂಗ ಮಾಡುತ್ತಿರುವ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧಗೊಳ್ಳುತ್ತಿರುವ ಅಂಧ ಮತ್ತು ಕಿವುಡ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಲು ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ರೂಪುರೇಷೆ ಸಿದ್ಧಪಡಿಸಲಾಗುತ್ತಿದೆ. ಅಂತೆಯೇ ಮೊದಲ ಹಂತದಲ್ಲಿ ಗ್ರಂಥಾಲಯ ಮೇಲ್ವಿಚಾರಕರಿಗೆ ತರಬೇತಿ ನೀಡಲಾಗಿದೆ.
233 ಬೀಕನ್ ಲೈಬ್ರರಿ: ಜಿಲ್ಲೆಯಲ್ಲಿ 233 ಗ್ರಾಮ ಪಂಚಾಯಿತಿಗಳಿವೆ. ಅಂತೆಯೇ ಇಷ್ಟೂ ಗ್ರಾಪಂ ಕಚೇರಿಯಲ್ಲಿಯೇ ಈಗಾಗಲೇ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರ ಕಾರ್ಯ ನಿರ್ವಹಿಸುತ್ತಿವೆ. ಮಾತ್ರವಲ್ಲದೆ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆಯ ಸೂಚನೆ ಮೇರೆಗೆ ಕ್ರಿಯಾಶೀಲ ಚಟುವಟಿಕೆ ನಡೆಸುತ್ತಿದೆ. ಸರ್ಕಾರಿ ಶಾಲೆ ಮಕ್ಕಳಿಗೆ ಬೇಸಿಗೆ ಶಿಬಿರದಂತಹ ಕಾರ್ಯಕ್ರಮ ಆಯೋಜಿಸಲು ಸಹಕಾರ ನೀಡುತ್ತಿದೆ. ಈ ಪೈಕಿ ಹಲವು ವಿಭಿನ್ನ ವಿಶೇಷತೆ ಮೂಲಕ ಗುರುತಿಸಿಕೊಂಡಿವೆ.
ಮುಖ್ಯವಾಗಿ ಈ ಮಾಹಿತಿ ಕೇಂದ್ರ ಗ್ರಾಮೀಣ ಭಾಗದಲ್ಲಿನ ವಿದ್ಯಾರ್ಥಿಗಳು ಹಾಗೂ ಉದ್ಯೋಗಾಕಾಂಕ್ಷಿಗಳಿಗೆ ದೊಡ್ಟಮಟ್ಟದ ಅನುಕೂಲ ಮಾಡಿಕೊಡುತ್ತಿವೆ. ಮಕ್ಕಳು ಮಾತ್ರವಲ್ಲದೆ ಮಹಿಳೆಯರು, ವೃದ್ಧರು ಗ್ರಂಥಾಲಯಕ್ಕೆ ಬಂದು ಓದುವ ಹವ್ಯಾಸ ಬೆಳೆಸಿಕೊಳ್ಳುತ್ತಿದೆ. ಇದಲ್ಲದೆ ಆರ್ಥಿಕವಾಗಿ ಹಿಂದುಳಿದಿರುವ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಬಲ ನೀಡುತ್ತಿವೆ. ಈ ಹಿನ್ನೆಲೆಯಲ್ಲಿ ಮುಂದುವರೆದ ಭಾಗವಾಗಿ ಬೀಕನ್ ಲೈಬ್ರರಿ ಪ್ರಾರಂಭಿಸಲು ಜಿಪಂ ಮುಂದಾಗಿದೆ.
ಅದರಂತೆ ಅಂಧ ಮತ್ತು ಕಿವುಡ ವಿದ್ಯಾರ್ಥಿಗಳನ್ನೇ ಮುಖ್ಯಗುರಿಯನ್ನಾಗಿಸಿಕೊಂಡು ಬೀಕನ್ ಲೈಬ್ರರಿ ಆರಂಭವಾಗಲಿದೆ. 233 ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರದಲ್ಲಿಯೂ ಈ ವ್ಯವಸ್ಥೆಯಾಗಲಿದೆ. ಈ ಬೀಕನ್ ಲೈಬ್ರರಿಯಲ್ಲಿ ಅಂಧ ಮತ್ತು ಕಿವುಡ ವಿದ್ಯಾರ್ಥಿಗಳಿಗಾಗಿ ಬ್ರೈಲ್ ಲಿಪಿ ಸೇರಿದಂತೆ ವಿಶೇಷ ಸೌಲಭ್ಯ ಒದಗಿಸಿಕೊಡಲಾಗುತ್ತಿರುವುದರಿಂದ ಲಕ್ಷಾಂತರ ರೂ ಅಗತ್ಯವಿದೆ. ಇದಕ್ಕಾಗಿ ಖಾಸಗಿ ಸಂಸ್ಥೆಯ ನೆರವು ಪಡೆದುಕೊಳ್ಳಲಾಗುತ್ತಿದೆ. ಇನ್ನೊಂದು ವರ್ಷದಲ್ಲಿ ಎಲ್ಲ ಕಡೆಯೂ ಲೈಬ್ರರಿ ಅನುಷ್ಠಾನಕ್ಕೆ ಯೋಜಿಸಲಾಗಿದೆ.
ಒಟ್ಟಾರೆ ಅಂಧ ಮತ್ತು ಕಿವುಡ ವಿದ್ಯಾರ್ಥಿಗಳಿಗೆ ನೆರವಾಗಲೆಂದು ಜಿಪಂ ಉತ್ತಮ ಕಾರ್ಯಕ್ರಮ ಅನುಷ್ಠಾನಕ್ಕೆ ಮುಂದಾಗಿದೆ. ಗ್ರಾಮೀಣ ಭಾಗದಲ್ಲಿ ಸಾಕಷ್ಟು ಪ್ರತಿಭಾವಂತರಿದ್ದರೂ ಆರ್ಥಿಕ ಸಮಸ್ಯೆ, ನಗರ ಅಥವಾ ಪಟ್ಟಣಕ್ಕೆ ಹೋಗಬೇಕಾದ ಅನಿವಾರ್ಯ ಪರಿಸ್ಥಿತಿಯಿಂದಾಗಿ ಉದ್ಯೋಗಾವಕಾಶ ಪಡೆದುಕೊಳ್ಳುವಲ್ಲಿ ವಿಲರಾಗುತ್ತಿದ್ದರು. ಆದರೆ ಬೀಕನ್ ಲೈಬ್ರರಿ ಪ್ರಾರಂಭ ಅಂತಹವರಿಗೆ ಹೊಸ ಶಕ್ತಿ ತಂದು ಕೊಡಲಿದೆ. ಆದ್ದರಿಂದ ತ್ವರಿತವಾಗಿ ಈ ಯೋಜನೆ ಜಾರಿಯಾಗಬೇಕಿದೆ.
ಗ್ರಂಥಾಲಯ ಮೇಲ್ವಿಚಾರಕರಿಗೆ ಸಾಮರ್ಥ್ಯಾಭಿವೃದ್ಧಿ ಕಾರ್ಯಾಗಾರ
ಗ್ರಂಥಾಲಯಗಳು ಸಮುದಾಯ ಕಲಿಕಾ ಕೇಂದ್ರಗಳಂತೆ ಕಾರ್ಯನಿರ್ವಹಿಸುತ್ತಿವೆ. ಅಂತೆಯೇ ಮಹಿಳೆಯರು, ಮಕ್ಕಳು, ಯುವಕ, ಯುವತಿಯರು ಮತ್ತು ವೃದ್ಧರು ಕಲಿಕೆಯತ್ತ ತಮ್ಮ ಗಮನವನ್ನು ಕೇಂದ್ರೀಕರಿಸಲು ಸಹಕಾರಿಯಾಗಿವೆ. ಈ ಹಿನ್ನೆಲೆಯಲ್ಲಿ ಮುಂದಿನ ಒಂದು ವರ್ಷದ ಅವಧಿಯಲ್ಲಿ ಬೀಕನ್ ಗ್ರಂಥಾಲಯ ಪ್ರಾರಂಭಿಸಲು ಕ್ರಮ ವಹಿಸಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ತರಬೇತಿ ಕಾರ್ಯಾಗಾರ ಮೊದಲ ಹೆಜ್ಜೆಯಾಗಿದೆ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್.ನಂದಿನಿ ತಿಳಿಸಿದರು.
ನಗರದ ಜಿಲ್ಲಾ ಪಂಚಾಯಿತಿ ಕಚೇರಿಯ ಕಾವೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಗ್ರಾಮ ಪಂಚಾಯಿತಿ ಗ್ರಂಥಾಲಯ ಮೇಲ್ವಿಚಾರಕರಿಗೆ ಪುನಶ್ಚೇತನ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಮೊದಲಿಗೆ ಜಿಲ್ಲೆಯ ಎಲ್ಲ ಗ್ರಂಥಾಲಯಗಳ ಸಮೀಕ್ಷೆ ನಡೆಸಲಾಗುವುದು. ನಂತರ ಅವುಗಳ ಅವಶ್ಯಕತೆಗೆ ಅನುಗುಣವಾಗಿ ಮೂಲ ಸೌಕರ್ಯ ಒದಗಿಸಲು ಕ್ರಮ ವಹಿಸಲಾಗುವುದು. ನಂತರ ಹಂತ ಹಂತವಾಗಿ ಗ್ರಂಥಾಲಯಗಳಲ್ಲಿ ಬೀಕನ್ ಸೌಲಭ್ಯವನ್ನು ಕಲ್ಪಿಸಲು ಕ್ರಿಯಾ ಯೋಜನೆ ಸಿದ್ದಪಡಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಗ್ರಂಥಾಲಯ ಮೇಲ್ವಿಚಾರಕರು ಕ್ಷಮತೆ, ದಕ್ಷತೆ ಮತ್ತು ಶ್ರದ್ಧೆಯಿಂದ ಕಾರ್ಯನಿರ್ವಹಿಸಬೇಕು ಎಂದು ಕಿವಿಮಾತು ಹೇಳಿದರು.
ಗ್ರಾಮಾಂತರ ಪ್ರದೇಶದಲ್ಲಿ ಬದಲಾವಣೆ ತರಲು ಶಿಕ್ಷಣ ಮತ್ತು ಕೌಶಲಾಭಿವೃದ್ಧಿಯಿಂದ ಮಾತ್ರ ಸಾಧ್ಯವಿದೆ. ಇದರಲ್ಲಿ ಗ್ರಂಥಾಲಯಗಳು ಮೂಲ ಕೇಂದ್ರ ಬಿಂದುವಿನಂತೆ ಕೆಲಸ ನಿರ್ವಹಿಸುತ್ತಿವೆ. ಗ್ರಾಮಾಂತರ ಪ್ರದೇಶದ ಮಹಿಳೆಯರು, ಮಕ್ಕಳು, ವೃದ್ಧರು, ಅಂಗವಿಕಲರು, ನಿರುದ್ಯೋಗಿ ಯುವಕ ಯುವತಿಯರು ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಲಭ್ಯವಿರುವ ಗ್ರಂಥಾಲಯಗಳನ್ನು ಸದ್ಭಳಕೆ ಮಾಡಿಕೊಂಡು ಅವರ ಕೌಶಲ ಮತ್ತು ಶಿಕ್ಷಣದ ಮಟ್ಟವನ್ನು ಅಭಿವೃದ್ಧಿಪಡಿಸಿಕೊಳ್ಳಬಹುದಾಗಿರುತ್ತದೆ. ಆದ್ದರಿಂದ, ಜಿಲ್ಲೆಯ ಎಲ್ಲ ಗ್ರಂಥಾಲಯ ಮೇಲ್ವಿಚಾರಕರು ತಮ್ಮ ಕಾರ್ಯನಿರ್ವಹಣಾ ಸಾಮರ್ಥ್ಯವನ್ನು ವೃದ್ಧಿಸಿಕೊಳ್ಳಲು ಈ ರೀತಿಯ ತರಬೇತಿ ಅತ್ಯಾವಶ್ಯಕ. ಜಿಲ್ಲೆಯಲ್ಲಿನ ಗ್ರಂಥಾಲಯಗಳಲ್ಲಿ ಬೀಕನ್ ಗ್ರಂಥಾಲಯ ಸ್ಥಾಪನೆ ಮಾಡುವ ನಿಟ್ಟಿನಲ್ಲಿ ಮಂಡ್ಯ ಜಿಲ್ಲಾ ಪಂಚಾಯಿತಿ ಮೊದಲ ಹೆಜ್ಜೆ ಇಟ್ಟಿದೆ. ಅಂತೆಯೇ ಅಜೀಂ ಪ್ರೇಮ್ ಜೀ ಫೌಂಡೇಷನ್‌ನ ಸಹಯೋಗದೊಂದಿಗೆ ಬೀಕನ್ ಗ್ರಂಥಾಲಯಗಳನ್ನು ಸ್ಥಾಪನೆ ಮಾಡುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.
ಕಾರ್ಯಾಗಾರದಲ್ಲಿ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿಗಳಾದ ಎಂ.ಬಾಬು, ಲಕ್ಷ್ಮೀ ಸೇರಿದಂತೆ ಇತರೆ ಅಧಿಕಾರಿಗಳು ಹಾಜರಿದ್ದರು.