ದಾರಿದೀಪವಾಗಿವೆ ಆದರ್ಶಗಳು

12SND-01
Published on

ಸಿಂಧನೂರು: ನಿರಂತರ ಅಧ್ಯಯನ ಹಾಗೂ ಪ್ರಾರ್ಥನೆ ಉನ್ನತಿ ಎಡೆಗೆ ಕೊಂಡೊಯ್ಯುತ್ತದೆ ಎಂದು ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಸ್ವಾಮಿ ಸದಾನಂದ ಮಹಾರಾಜ್ ಹೇಳಿದರು.

ನಗರದ ರಾಮಕೃಷ್ಣ ವಿವೇಕಾನಂದ ಆಶ್ರಮ ಮೈದಾನದಲ್ಲಿ ಸ್ವಾಮಿ ವಿವೇಕಾನಂದರ ಜನ್ಮದಿನಾಚರಣೆ ಪ್ರಯುಕ್ತ ರಾಮಕೃಷ್ಣ ವಿವೇಕಾನಂದ, ನ್ಯಾಷನಲ್ ಪದವಿ ಮಹಾವಿದ್ಯಾಯ ಮತ್ತು ವಿಸಿಬಿ ಪದವಿಪೂರ್ವ ಕಾಲೇಜು ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಯುವ ಸಮ್ಮೇಳನದಲ್ಲಿ ಶುಕ್ರವಾರ ಮಾತನಾಡಿದರು. ಸ್ವಾಮಿ ವಿವೇಕಾನಂದರ ಆದರ್ಶಗಳು ಪ್ರತಿಯೊಬ್ಬರಿಗೂ ದಾರಿದೀಪವಾಗಿವೆ. ವಿವೇಕಾನಂದರ ಜನ್ಮದಿನವನ್ನು ವಿಶೇಷವಾಗಿ ಆಚರಿಸಿರುವುದು ಶ್ಲಾಘನೀಯ ಎಂದರು.

ಪತ್ರಕರ್ತ ಕಿರಣಕುಮಾರ ವಿವೇಕವಂಶಿ ಉಪನ್ಯಾಸ ನೀಡಿ, ಸ್ವಾಮಿ ವಿವೇಕಾನಂದ ಅವರು ಶತಮಾನಗಳ ಹಿಂದೆ ಹೇಳಿರುವಂತೆ ಯುವ ಸಮೂಹವೇ ಭಾರತದ ಭವಿಷ್ಯವಾಗಿದ್ದು, ಯುವಕರು ಸದ್ವಿಚಾರ, ತ್ಯಾಗ, ಸೇವೆಯ ಗುಣದೊಂದಿಗೆ ಜೀವನದಲ್ಲಿ ಉತ್ತಮ ಹಾದಿಯತ್ತ ಮುನ್ನಡೆಯಬೇಕು ಎಂದರು.
ಮೂವತ್ತೊಂಬತ್ತು ವರ್ಷ ಬದುಕಿದ್ದ ಸ್ವಾಮಿ ವಿವೇಕಾನಂದರು ವೇದಾಂತದ ಚಿಂತನೆ ಹಾಗೂ ಆದರ್ಶ ಬಿಟ್ಟು ಹೋಗಿದ್ದಾರೆ. ಎಲ್ಲರೂ ವಿವೇಕಾನಂದರ ಆದರ್ಶ ಪಾಲಿಸಿದರೆ ಭಾರತ ಜಗದ್ಗುರುವಾಗುತ್ತದೆ. ಇಂದಿನ ಯುವ ಸಮೂಹದಲ್ಲಿ ಚಿಂತನೆ ಹಾಳಾಗಿದೆ. ಇಚ್ಚಾಶಕ್ತಿ ಕೊರತೆಯಿಂದಾಗಿ ಬುದ್ಧಿಶಕ್ತಿ ನಶಿಸಿದೆ. ಯುವ ಸಮೂಹ ಇನ್ನಾದರೂ ಎಚ್ಚೆತ್ತು ಗುರಿಯೆಡೆಗೆ ಮುನ್ನುಗ್ಗಿ ಉತ್ತಮ ಬದುಕು ಕಟ್ಟಿಕೊಳ್ಳಬೇಕು ಎಂದು ಕಿರಣಕುಮಾರ ತಿಳಿಸಿದರು.

ಸ್ವಾಮಿ ವಿವೇಕಾನಂದ ಜಯಂತಿ ಪ್ರಯುಕ್ತ ಹಮ್ಮಿಕೊಂಡಿದ್ದ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ನ್ಯಾಷನಲ್ ಕಾಲೇಜಿನಿಂದ ಸ್ವಾಮಿ ವಿವೇಕಾನಂದ ಅವರ ಭಾವಚಿತ್ರದ ಮೆರವಣಿಗೆ ಜರುಗಿತು. ವಿಸಿಬಿ ಎಜುಕೇಷನ್ ಟ್ರಸ್ಟ್ ಉಪಾಧ್ಯಕ್ಷ ಚಂದ್ರಶೇಖರ, ನ್ಯಾಷನಲ್ ಕಾಲೇಜು ಪ್ರಾಚಾರ್ಯ ರಾಮಲಿಂಗಯ್ಯ, ಕಾರ್ಯದರ್ಶಿ ರವಿಕುಮಾರ ಮಸ್ಕಿ, ಡಾ.ಚನ್ನನಗೌಡ ಪಾಟೀಲ್, ರಾಜಶೇಖರರೆಡ್ಡಿ, ಕಳಕಪ್ಪ ಗಡಾದ, ಸುಜಿತ್ ಓಸ್ತವಾಲ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net