ಮತ್ಸೃಹಾರಿಗಳಿಗೆ ಕಾದಿದೆ ಆಪತ್ತು! ಕಡಲ ಒಡಲಲ್ಲಿ ಅಪಾಯಕಾರಿ ತ್ಯಾಜ್ಯ, ಕಣ್ಮುಚ್ಚಿ ಕುಳಿತ ಇಲಾಖೆಗಳು!

ullala
ಅಳಿವೆ ಬಾಗಿಲು ಸಮುದ್ರ ತಟದಲ್ಲಿ ವಿಷಕಾರಿ ತ್ಯಾಜ್ಯ ರಾಶಿ
Published on

ಅನ್ಸಾರ್ ಇನೋಳಿ ಉಳ್ಳಾಲ

ಕಡಲ ಒಡಲಲ್ಲಿ ರಾಶಿ ಬಿದ್ದಿರುವ ತ್ಯಾಜ್ಯ… ಅದರಲ್ಲೂ ಅತ್ಯಂತ ಅಪಾಯಕಾರಿ ಎನಿಸಿರುವ ಮಣ್ಣಿನಲ್ಲೂ ಕರಗದ ಬೋಟುಗಳ ನಿರುಪಯುಕ್ತ ವಸ್ತುಗಳು… ಮತ್ಸೃಸಂಕುಲದಷ್ಟೇ ಮತ್ಸೃಹಾರಿಗಳ ಜೀವಕ್ಕೂ ಹಾನಿಯಾಗುವ ವಸ್ತುವಾದರೂ ಇಲಾಖೆಗಳು ಕ್ರಮ ಕೈಗೊಳ್ಳದೆ ಮೌನಕ್ಕೆ ಜಾರಿರುವುದು ಸಂಶಯಗಳಿಗೆ ಕಾರಣವಾಗಿದೆ. ಇಂಥ ದಯನೀಯ ದೃಶ್ಯ ಉಳ್ಳಾಲದ ಕೋಟೆಪುರ ಕಡಲ ತೀರದಲ್ಲಿ ಕಂಡು ಬರುತ್ತಿದೆ.

ಉಳ್ಳಾಲದ ಕೋಟೆಪುರ ಸಮುದ್ರ ಮತ್ತು ನೇತ್ರಾವತಿ ನದಿ ಸಂಗಮ ಸ್ಥಳ. ಇಲ್ಲಿಗೆ ಅಳಿವೆ ಬಾಗಿಲು, ‘ಎಂಡ್ ಪಾಯಿಂಟ್’ ಎಂದೂ ಕರೆಯುತ್ತಾರೆ. ಇಲ್ಲೇ ಮೀನುಗಾರಿಕಾ ಮತ್ತು ಇತರ ಬೋಟುಗಳು ನಿಲ್ಲುವ ವ್ಯವಸ್ಥೆ ಇದೆ. ನದಿತಟದಲ್ಲಿ ಬೋಟು, ಹಡಗುಗಳನ್ನು ತಯಾರಿಸಿ ಅಳಿವೆ ಬಾಗಿಲಿನ ಮೂಲಕ ಮಂಗಳೂರು ಹಾಗೂ ಇತರ ಭಾಗಗಳಿಗೆ ಸಾಗಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಎಂಡ್ ಪಾಯಿಂಟ್‌ನಲ್ಲಿ ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶ ಇದೆ. ಆದರೆ ಇಲ್ಲಿನ ದಯನೀಯ ಸ್ಥಿತಿ ಕಂಡರೆ ಯಾರೊಬ್ಬರೂ ಹತ್ತಿರಕ್ಕೆ ಬಾರದಂತಿದೆ.

ಇಲ್ಲೇ ಹಲವು ಮೀನಿನ ಎಣ್ಣೆ ತೆಗೆಯುವ ಕಾರ್ಖಾನೆಗಳಿದ್ದು, ಅದರ ದುರ್ವಾಸನೆಯೂ ಸಹಿಸಲಸಾಧ್ಯ. ಜತೆಗೆ ಬೋಟು, ಹಡಗುಗಳಿಗೆ ಬಳಸಲಾಗುವ ಥರ್ಮೋಕೋಲ್, ಥರ್ಮೋಫೋಮ್ ಫೈಬರ್, ಪ್ಲಾಸ್ಟಿಕ್, ಫೈಬರ್ ಗ್ಲಾಸ್ ವ್ಹೀಲ್ ಮಾತ್ರವಲ್ಲದೆ ರಾಶಿ ರಾಶಿ ಪ್ಲಾಸ್ಟಿಕ್ ಹಾಗೂ ಇತರ ತ್ಯಾಜ್ಯ ಸಮುದ್ರದ ತಟದಲ್ಲಿ ರಾಶಿ ಹಾಕಲಾಗಿದೆ. ಒಂದೆಡೆ ಸಮುದ್ರ ಕಲುಷಿತವಾದರೆ ಮತ್ತೊಂದೆಡೆ ಮೀನುಗಳ ಹೊಟ್ಟೆ ಸೇರಿ ಮತ್ಸೃ ಸಂಪತ್ತಿಗೆ ಆಪತ್ತು ತಂದೊಡ್ಡಿದೆ. ಈ ಮತ್ಸೃ ಸೇವನೆ ಮಾಡುವ ಮನುಷ್ಯರ ಜೀವವೂ ಅಪಾಯಕ್ಕೆ ಸಿಲುಕುತ್ತದೆ.

ನದಿತಟವೂ ಅಪಾಯಕಾರಿ!

ಅಳಿವೆಬಾಗಿಲು ಸಮುದ್ರ ತಟ ಮಾತ್ರವಲ್ಲದೆ ನದಿತಟದಲ್ಲೂ ಅಪಾಯಕಾರಿ ತ್ಯಾಜ್ಯ ರಾಶಿಯಿದೆ. ಕೋಟೆಪುರ ನದಿತಟದಲ್ಲಿ ಹಿಂದೆ ಹಡಗು, ಬೋಟು ನಿರ್ಮಿಸಲಾಗುತ್ತಿತ್ತು. ಪ್ರಸ್ತುತ ದಿನಗಳಲ್ಲಿ ನಿರುಪಯುಕ್ತ ಬೋಟುಗಳ ವಸ್ತುಗಳನ್ನು ಪ್ರತ್ಯೇಕಿಸುವ ಸ್ಥಳವಾಗಿ ಪರಿವರ್ತನೆಯಾಗಿದೆ. ಬೋಟು, ಹಡಗುಗಳ ವಿವಿಧ ಭಾಗಗಳನ್ನು ಪ್ರತ್ಯೇಕಿಸುವಾಗ ತುಂಡಾಗಿ, ಹುಡಿಯಾಗಿಯೂ ಬೀಳುವ ಪ್ಲಾಸ್ಟಿಕ್, ಫೈಬರ್, ಥರ್ಮೋಕೋಲ್, ಫೈಬರ್ ಗ್ಲಾಸ್, ಥರ್ಮೋಫೋಮ್ ಅಲ್ಲೇ ರಾಶಿ ಹಾಕಿ, ಚೆಲ್ಲಾಪಿಲ್ಲಿಯಾಗಿ ಬಿಡಲಾಗುತ್ತಿದೆ. ಸನಿಹದಲ್ಲೇ ಪ್ರಾಥಮಿಕ, ಪ್ರೌಢಶಾಲೆಯೂ ಇದ್ದು, ಇಲ್ಲೇ ಮಕ್ಕಳು ಆಟವಾಡುತ್ತಾರೆ. ಇದು ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸುತ್ತಾರೆ.

ಕರಗದ ಸೈನೆಡ್ ಮಾದರಿಯ ವಸ್ತು!

ಥರ್ಮೋಕೋಲ್, ಫೈಬರ್ ಜತೆಗೆ ಪ್ಲಾಸ್ಟಿಕ್ ಕೂಡ ಬೋಟು, ಹಡಗುಗಳ ತಯಾರಿಗೆ ಬಳಸುತ್ತಾರೆ. ಇವೆಲ್ಲವೂ ಮಣ್ಣು, ನೀರಿನಲ್ಲಿ ಕರಗದ ವಸ್ತುಗಳಾಗಿದ್ದು, ಇವುಗಳನ್ನು ಬಳಸಿ ತಯಾರಿಸುವ ವಸ್ತುಗಳು ಸುದೀರ್ಘ ಬಾಳಿಕೆ ಬರುತ್ತವೆ. ಥರ್ಮೋಫೋಮ್ ರಸಾಯನಿಕ ಪದಾರ್ಥದಿಂದ ತಯಾರಿಸುವುದರಿಂದ ಇದರಲ್ಲಿ ಸೈನೆಡ್ ಮಾದರಿ ವಿಷದ ಅಂಶವಿದೆ. ಅದೇ ರೀತಿ ಫೈಬರ್ ಗ್ಲಾಸ್ ವ್ಹೀಲ್ ಮರಳಿನಿಂದ ತಯಾರಿಸಲಾಗುವುದರಿಂದ ಗಾಜಿನ ಮಾದರಿಯಲ್ಲಿರುತ್ತದೆ. ಫೈಬರ್ ಗ್ಲಾಸ್ ಕೂಡ ವಿಷಕಾರಿಯಾಗಿದ್ದು ಮಣ್ಣಿನಲ್ಲಿ ಕರಗದ ವಸ್ತು.

ಈ ವಸ್ತುಗಳನ್ನೇ ಕೋಟೆಪುರದ ನದಿ ಮತ್ತು ಅಳಿವೆ ಬಾಗಿಲು ಸಮುದ್ರ ತಟದಲ್ಲಿ ಕಡಲ್ಕೊರೆತ ತಡೆಗೋಡೆಯಾಗಿ ಹಾಕಲಾಗಿರುವ ಕಲ್ಲುಗಳ ಮೇಲೆ ರಾಶಿ ಹಾಕಲಾಗಿದೆ. ಜತೆಗೆ ಪ್ಲಾಸ್ಟಿಕ್, ಇತರ ತ್ಯಾಜ್ಯ ರಾಶಿಯೂ ಇದೆ. ಈ ವಸ್ತುಗಳು ಹಂತ ಹಂತವಾಗಿ ಸಮುದ್ರ ಸೇರಿದರೆ, ಕೆಲವೊಮ್ಮೆ ಅಧಿಕಾರಿಗಳು, ಸಾರ್ವಜನಿಕರ ಕಣ್ಣಿನಿಂದ ತಪ್ಪಿಸುವ ನಿಟ್ಟಿನಲ್ಲಿ ಸಂಬಂಧಪಟ್ಟವರೇ ಸಮುದ್ರ ಸೇರುವಂತೆ ಮಾಡುತ್ತಾರೆ. ಇದರಿಂದ ಮತ್ಸೃ ಸಂತತಿ ಕ್ಷೀಣಿಸುತ್ತದೆ. ಈ ಮೀನುಗಳನ್ನು ಸೇವಿಸುವ ಮನುಷ್ಯರ ಮೇಲೂ ಗಂಭೀರ ಪರಿಣಾಮ ಬೀರುತ್ತದೆ ಎನ್ನುತ್ತಾರೆ ತಜ್ಞರು..!

ಇಷ್ಟೆಲ್ಲಾ ಆದರೂ ಇದನ್ನು ನಿಯಂತ್ರಿಸುವ ಹೊಣೆ ಯಾರದ್ದು ಎನ್ನುವ ಪ್ರಶ್ನೆಯೂ ಇದೆ. ಪರಿಸರ ಇಲಾಖೆ, ಮೀನುಗಾರಿಕಾ ಇಲಾಖೆ, ಸಿಆರ್‌ಜೆಡ್ ಮುಂತಾದ ಇಲಾಖೆಗಳು, ಹಲವು ಅಧಿಕಾರಿಗಳೂ ಇದ್ದಾರೆ. ಆದರೆ ಇವರಿಗೆ ಈ ಬಗ್ಗೆ ಮಾಹಿತಿ ಇಲ್ಲವೇ? ಈ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೆ ಮೌನವಾಗಿರಲು ಕಾರಣವೇನು? ಕಾರ್ಖಾನೆಗಳಿಂದ ಪರಿಸರಕ್ಕೆ ಹಾನಿಯಾಗುತ್ತಿದೆ. ಸ್ಥಳೀಯರಿಗೆ ಮಾರಕ ಕಾಯಿಲೆ ಬರುತ್ತಿದೆ ಎಂದು ಪ್ರತಿಭಟಿಸುವ ಸಂಘಟನೆಗಳು, ಪರಿಸರ ಪ್ರೇಮಿಗಳೆಂದು ಹೇಳಿಕೊಂಡು ತಿರುಗಾಡುವವರಿಗೆ ಸಮುದ್ರ ಸೇರುವ ತ್ಯಾಜ್ಯ ಸಮಸ್ಯೆಯಲ್ಲವೇ? ಇವರೆಲ್ಲರ ಮೌನದ ಹಿಂದಿನ ಗುಟ್ಟೇನು ಎನ್ನುವ ಪ್ರಶ್ನೆ ನೈಜ ಪರಿಸರ ಪ್ರೇಮಿಗಳದ್ದಾಗಿದೆ.

ಪರಿಸರ, ನದಿ, ಸಮುದ್ರಕ್ಕೆ ಹಾನಿ ಮಾಡುವ ತ್ಯಾಜ್ಯ ಉಳ್ಳಾಲ ವ್ಯಾಪ್ತಿಯಲ್ಲಿರುವುದರಿಂದ ನಗರಸಭೆಯಿಂದ ಕ್ರಮ ಕೈಗೊಳ್ಳಬೇಕು. ಹಿಂದೆಯೂ ಇದೇ ರೀತಿ ದೂರು ಬಂದಿದ್ದು, ನಗರಸಭೆಗೆ ಪತ್ರ ಬರೆದಿದ್ದರಿಂದ ಸ್ವಚ್ಛಗೊಳಿಸಿದ್ದರು. ಮತ್ತೆ ಮಾಹಿತಿ ಬಂದಿರುವ ಹಿನ್ನೆಲೆಯಲ್ಲಿ ಇನ್ನೊಮ್ಮೆ ಪತ್ರ ಬರೆಯುತ್ತೇನೆ.ಮಹೇಶ್ವರಿ ಸಿಂಗ್, ಜಿಲ್ಲಾ(ಪ್ರಭಾರ) ಅಧಿಕಾರಿ,ಪರಿಸರ ನಿಯಂತ್ರಣಾ ಮಂಡಳಿ

ಸಮುದ್ರ, ನದಿ ಒಂದುಗೂಡುವ ಎಂಡ್ ಪಾಯಿಂಟ್ ಪ್ರವಾಸಿಗರ ಆಕರ್ಷಕ ತಾಣ. ಇಲ್ಲಿಗೆ ಪ್ರವಾಸಿಗರನ್ನು ಸೆಳೆದು ಪ್ರವಾಸೋದ್ಯಮಕ್ಕೆ ಆದ್ಯತೆ ನೀಡಬೇಕಿತ್ತು. ಆದರೆ ಪರಿಸರ, ನೀರು, ಮತ್ಸೃ ಮತ್ತು ಮಾನವ ಸಂಕುಲಕ್ಕೆ ಅಪಾಯಕಾರಿ ಎನಿಸಿರುವ ಥರ್ಮೋಫೋಮ್, ಫೈಬರ್ ಗ್ಲಾಸ್, ಪ್ಲಾಸ್ಟಿಕ್, ಥರ್ಮೋಕೋಲ್‌ನಂಥ ತ್ಯಾಜ್ಯ ಹಾಕಿ ಅಸಹ್ಯ ವಾತಾವರಣ ಸೃಷ್ಟಿಸಲಾಗಿದೆ.ದಿನೇಶ್ ನಡಾರ್ಪ್ರವಾಸೋದ್ಯಮ ವಿನ್ಯಾಸಗಾರ

ನಗರಸಭೆಗೆ ಬಂದು ತಿಂಗಳು ಮಾತ್ರ ಆಗಿದೆ. ಯಾವ ಪ್ರದೇಶದಲ್ಲಿ ತ್ಯಾಜ್ಯ ಸಮಸ್ಯೆ ಇದೆ ಎನ್ನುವ ಬಗ್ಗೆ ಮಾಹಿತಿಯನ್ನಾಧರಿಸಿ ತಕ್ಷಣ ಕ್ರಮ ಕೈಗೊಳ್ಳಲಾಗುವುದು.ರಾಘವೇಂದ್ರ, ಉಳ್ಳಾಲ ನಗರಸಭೆ,ಪ್ರಭಾರ ಮುಖ್ಯಾಧಿಕಾರಿ

ಫೈಬರ್ ಗ್ಲಾಸ್ ಕಣ್ಣಿನ ಉರಿ, ಚರ್ಮದ ತುರಿಕೆಯಂಥ ಸಮಸ್ಯೆ ಬರುತ್ತದೆ. ಮಾನವ ನಿರ್ಮಿತ ವಸ್ತುಗಳು ಯಾವತ್ತೂ ಒಳ್ಳೆಯದಲ್ಲ, ಪ್ರಕೃತಿಗೆ ಯಾವುದೇ ಲಾಭವಿಲ್ಲ. ಸಮರ್ಪಕವಾಗಿ ವಿಲೇವಾರಿ ಮಾಡುವ ವ್ಯವಸ್ಥೆ ಅಗತ್ಯ. ಇಲ್ಲದಿದ್ದರೆ ಅಪಾಯ ಖಂಡಿತ.ಡಾ.ಪ್ರವೀಣ್ ರಾಜ್,ಹೋಮಿಯೋಪಥಿ ತಜ್ಞರು https://www.vijayavani.net/youth-suicide-by-head-to-train https://www.vijayavani.net/sullia-lorry-palty

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net