

ಮಂಗಳೂರು : ತಪಸ್ಯಾ ಫೌಂಡೇಶನ್ ವತಿಯಿಂದ ದ.ಕ. ಜಿಲ್ಲಾಡಳಿತ ಹಾಗೂ ವಿವಿಧ ಸಂಘಸಂಸ್ಥೆಗಳ ಸಹಯೋಗದಲ್ಲಿ ಜ.31ರಿಂದ ಫೆ.2ರವರೆಗೆ ತಣ್ಣೀರುಬಾವಿಯ ಮಂಗಳೂರು ಸರ್ಫ್ ಕ್ಲಬ್ ಬೀಚ್‌ನಲ್ಲಿ ಮಂಗಳೂರು ಬೀಚ್ ಫೆಸ್ಟಿವಲ್ ಹಾಗೂ ಮಂಗಳೂರು ಟ್ರಯಾಥ್ಲಾನ್ ಆಯೋಜಿಸಲಾಗಿದೆ.
ಜ.31ರಂದು ಸಾಯಂಕಾಲ 5.30ಕ್ಕೆ ಬೀಚ್ ಫೆಸ್ಟಿವಲ್ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಒಡಿಯೂರಿನ ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಉದ್ಘಾಟಿಸುವರು. ಸ್ಪೀಕರ್ ಯು.ಟಿ. ಖಾದರ್, ಸಚಿವರಾದ ಎಚ್.ಕೆ. ಪಾಟೀಲ್, ಎನ್. ಚಲುವರಾಯಸ್ವಾಮಿ, ಜಿಲ್ಲೆಯ ಸಂಸದರು, ಶಾಸಕರು, ಗಣ್ಯರು ಭಾಗವಹಿಸುವರು. ಶಾಸಕ ಡಾ.ವೈ.ಭರತ್ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ತಪಸ್ಯಾ ಫೌಂಡೇಶನ್‌ನ
ಸ್ಥಾಪಕಿ ಸಬಿತಾ ಶೆಟ್ಟಿ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಫೆ.1ರಂದು ಸಾಯಂಕಾಲ 5ಕ್ಕೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಟಾಟಾ ಸ್ಮಾರಕ ಆಸ್ಪತ್ರೆಯ ಉಪ ನಿರ್ದೇಶಕ ಡಾ. ಶೈಲೇಶ್ ಶ್ರೀಖಂಡೆ ಮತ್ತು ಕಟೀಲು ಸಂಜೀವಿನ ಆಸ್ಪತ್ರೆಯ ಡಾ. ಸುರೇಶ್ ರಾವ್ ಅವರಿಗೆ ಜೀವಮಾನ ಸಾಧನಾ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಕ್ಯಾನ್ಸರ್ ಪೀಡಿತರ ಆರೈಕೆ ಕೇಂದ್ರಕ್ಕೆ ನೆರವಾಗುವ ಉದ್ದೇಶದಿಂದ ದೇಣಿಗೆ ಸಂಗ್ರಹಕ್ಕಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಅವರು ತಿಳಿಸಿದರು.
ತಪಸ್ಯಾ ಫೌಂಡೇಶನ್‌ನ ನಿರ್ದೇಶಕ ನವೀನ್ ಹೆಗ್ಡೆ ಮಾತನಾಡಿ ಬೀಚ್ ಫೆಸ್ಟಿವಲ್ನ ಜತೆಗೆ ವಿವಿಧ ಮನೋರಂಜನಾ ಕಾರ್ಯಕ್ರಮಗಳು
ನಡೆಯಲಿವೆ. ಜ.31ರಂದು ಬೆಳಗ್ಗೆ 10ರಿಂದ ಕೃಷಿ ಮೇಳ, ಮಹಿಳಾ ಉದ್ಯಮಿಗಳ ಎಕ್ಸ್‌ಪೋ ನವನಾರಿ ಉದ್ಯಮಿ, ಫುಡ್ ಫೆಸ್ಟಿವಲ್, ವಿಜ್ಞಾನ ಮಾದರಿ ಪ್ರದರ್ಶನ ಪ್ರಾರಂಭಗೊಳ್ಳಲಿದೆ. ಬೆಳಗ್ಗೆ 9ರಿಂದ ರಾಷ್ಟ್ರೀಯ ಮಟ್ಟದ ಬೀಚ್ ವಾಲಿಬಾಲ್ ಹಾಗೂ ಸಾಯಂಕಾಲ 5ರಿಂದ ರಾಜ್ಯ ಮಟ್ಟದ ಕುಸ್ತಿ ಪಂದ್ಯಾಟ ಏರ್ಪಡಿಸಲಾಗಿದೆ. ರಾತ್ರಿ 8ಕ್ಕೆ ಮಲ್ಲಕಂಬ ಪ್ರದರ್ಶನವಿದೆ ಎಂದರು.
ಫೆ.1ರಂದು ಬೆಳಗ್ಗೆ 10ರಿಂದ ಕೃಷಿ ಮೇಳ, ನವನಾರಿ ಉದ್ಯಮಿ, ಆಹಾರ ಉತ್ಸವ, ವಿಜ್ಞಾನ ಮಾದರಿ ಪ್ರದರ್ಶನ, ಬೆಳಗ್ಗೆ 10ರಿಂದ ಸಂಜೆ 6ರವರೆಗೆ ಉಚಿತ ಕ್ಯಾನ್ಸರ್ ತಪಾಸಣೆ ಆಯೋಜಿಸಲಾಗಿದೆ. ಸಾಯಂಕಾಲ 5ಕ್ಕೆ ಬೈಕ್ ಸ್ಟಂಟ್, 7.15ಕ್ಕೆ ಕಳರಿಪಯಟ್ಟು ಪ್ರದರ್ಶನ, ರಾತ್ರಿ 8ಕ್ಕೆ ಮೂಸಿಕಲ್ ನೈಟ್ ಕಾರ್ಯಕ್ರಮ ನಡೆಯಲಿದೆ . ಫೆ.2ರಂದು ಮುಂಜಾನೆ 4.30ಕ್ಕೆ ಮ್ಯಾರಥಾನ್ ಆರಂಭಗೊಳ್ಳಲಿದೆ. ಬೆಳಗ್ಗೆ 6.30ಕ್ಕೆ ಮಂಗಳೂರು ಟ್ರಯಾಥ್ಲಾನ್ ನಡೆಯಲಿದ್ದು, 5 ಸಾವಿರ ಮಂದಿ ನೋಂದಣಿ ಮಾಡಿಕೊಂಡಿದ್ದಾರೆ. ಸಾಯಂಕಾಲ 5ಕ್ಕೆ
ಸ್ವಾರ್ಟ್ ಅಫ್ ಫೆಸ್ಟ್ , 7ಕ್ಕೆ ಸಾಂಪ್ರದಾಯಿಕ ಫ್ಯಾಶನ್ ಶೋ, ರಾತ್ರಿ 8ಕ್ಕೆ ನಿಹಾಲ್ ತಾವ್ರೊ ಅವರಿಂದ ಸಂಗೀತ ಕಾರ್ಯಕ್ರಮ, ರಾತ್ರಿ 10ಕ್ಕೆ ಸಿಡಿಮದ್ದು ಪ್ರದರ್ಶನ ಆಯೋಜಿಸಲಾಗಿದೆ ಎಂದು ಅವರು ತಿಳಿಸಿದರು. ಫೌಂಡೇಶನ್‌ನ ಸದಸ್ಯರಾದ ವಿಶಾಲ್ ರಾವ್, ಅರವಿಂದ್, ಮೋಹನ್ ಶೆಟ್ಟಿ ಉಪಸ್ಥಿತರಿದ್ದರು.