

ಮೈಸೂರು: ವೇಗವಾಗಿ ಬೆಳೆಯುತ್ತಿರುವ ತಂತ್ರಜ್ಞಾನವನ್ನು ಮಾನವ ಸೂಕ್ತವಾಗಿ ಬಳಸಿಕೊಳ್ಳುವ ಜ್ಞಾನಿಯಾಗಬೇಕೇ ಹೊರತು, ತಂತ್ರಜ್ಞಾನದ ಉತ್ಪನ್ನದಂತೆ ಆಗಬಾರದು ಎಂದು ಇಸ್ರೋ ಮಾಜಿ ಅಧ್ಯಕ್ಷ ಎ.ಎಸ್.ಕಿರಣ್‌ಕುಮಾರ್ ಅಭಿಪ್ರಾಯಪಟ್ಟರು.
ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಹಾಗೂ ಎಂಎಂಸಿ ಅಲುಮ್ನಿ ಅಸೋಸಿಯೇಷನ್‌ನಿಂದ ಕರ್ನಾಟಕ ರಾಜ್ಯ ಮುಕ್ತ ವಿಶ್ವದ್ಯಾಲಯದ ಘಟಿಕೋತ್ಸವ ಭವನದಲ್ಲಿ ಭಾನುವಾರ ಆಯೋಜಿಸಿದ್ದ 95ನೇ ಪದವೀಧರರ ದಿನಾಚರಣೆ ‘ಸಮ್ಮರ್ ಡ್ರೀಮ್ಸ್’ ನಲ್ಲಿ ಮಾತನಾಡಿದರು.
ಇಂದು ತಂತ್ರಜ್ಞಾನ ಡಿಜಿಟಲ್ ಕ್ಷೇತ್ರವನ್ನೂ ದಾಟಿ ಕ್ವಾಂಟಮ್ ಕ್ಷೇತ್ರದತ್ತ ಸಾಗುತ್ತಿದೆ. ಹಲವಾರು ಸಂಗತಿಗಳ, ಅನುಭವಗಳನ್ನು ಶೋಧಿಸಿ ಅನುಮಾನಗಳಿಗೆ ಉತ್ತರ, ಸಮಸ್ಯೆಗಳಿಗೆ ಸಲಹೆ ಒದಗಿಸುವ ವ್ಯವಸ್ಥೆ ಬಂದಿದೆ. ಹಾಗಾಗಿ ವೇಗವಾಗಿ ಬೆಳೆಯುತ್ತಿರುವ ತಂತ್ರಜ್ಞಾನದ ಉತ್ಪನ್ನವಾಗಬೇಡಿ, ಅದನ್ನು ಸೂಕ್ತವಾಗಿ ಬಳಸಿಕೊಳ್ಳುವ ಜ್ಞಾನಿಗಳಾಗಿ ಎಂದು ಸಲಹೆ ನೀಡಿದರು.
ಮನುಷ್ಯ ತನ್ನೆಲ್ಲ ಕಲಿಕೆಯಲ್ಲೂ ಸುತ್ತಲಿನ ವಾತಾವರಣವನ್ನು ಅನುಕರಿಸುತ್ತಾನೆ. ಈ ಅನುಕರಣೆ ಮನುಕುಲದ ಒಳಿತಿಗೆ ಪೂರಕವಾಗಿರಬೇಕು. ತಂತ್ರಜ್ಞಾನ ಎಷ್ಟೇ ಮುಂದುವರಿದಿದ್ದರೂ ನಮ್ಮ ಸುತ್ತಲಿನ ಜೀವಿಗಳ ಬದುಕನ್ನ್ನೂ ಉತ್ತಮಗೊಳಿಸುವ ಉದ್ದೇಶ ಮಾತ್ರ ನಮ್ಮೊಳಗಿನಿಂದಲೇ ಹುಟ್ಟಬೇಕು ಎಂದರು.
ತಂತ್ರಜ್ಞಾನದ ಬಳಕೆಯ ನಡುವೆ ಸ್ವಯಂ ವಿವೇಚನೆ ಮತ್ತು ಸೇವಾ ಮನೋಭಾವ ಕಳೆದುಕೊಳ್ಳಬೇಡಿ. ಹಾಗಾಗಿ ತಂತ್ರಜ್ಞಾನವೂ ಮನುಷ್ಯ ನೀಡುವ ಮಾಹಿತಿಗಳನ್ನು ಅನುಕರಿಸಿ ಕಾರ್ಯನಿರ್ವಹಿಸಬೇಕೇ ಹೊರತು ನಾವು ತಂತ್ರಜ್ಞಾನಕ್ಕೆ ಅಡಿಯಾಳಾಗಬಾರದು ಎಂದರು.
ಭಾರತ ಬಾಹ್ಯಾಕಾಶ ಕ್ಷೇತ್ರ ಪ್ರವೇಶಿಸುವಾಗ ನಮ್ಮಲ್ಲಿಯೂ ಹಸಿವು, ಬಡತನ ಸಮಸ್ಯೆಗಳು ಇದ್ದವು. ಆದರೂ ವಿಜ್ಞಾನಿ ವಿಕ್ರಂ ಸಾರಾಭಾಯಿ ಅವರು ಬಾಹ್ಯಾಕಾಶ ಕ್ಷೇತ್ರವನ್ನು ಜನರ ಒಳಿತಿಗೆ ಅಗತ್ಯ ಎನ್ನುವ ಕಾರಣಕ್ಕೆ ಸಂಶೋಧನೆ ಮುಂದುವರಿಸಿದರು. ತಿರುವನಂತಪುರಂ ಬಳಿಯ ತುಂಬ ಗ್ರಾಮದಲ್ಲಿ ಮೀನುಗಾರರ ಮನವೊಲಿಸಿ ರಾಕೆಟ್ ಉಡಾವಣೆ ಕೇಂದ್ರ ಆರಂಭಿಸಿದರು ಎಂದು ಹೇಳಿದರು.
ಈಗ ಉಪಗ್ರಹಗಳ ಮೂಲಕ ಮೀನುಗಾರರಿಗೆ ಮುನ್ನೆಚ್ಚರಿಕೆ ಸುರಕ್ಷತೆ ಸಂದೇಶ, ಮೀನುಗಳ ಲಭ್ಯತೆ ಮಾಹಿತಿ ನೀಡಲಾಗುತ್ತಿದೆ. ಜೀವ ರಕ್ಷಣೆಯೊಂದಿಗೆ ಸಾವಿರಾರು ಕೋಟಿ ರೂ.ಲಾಭವಾಗಿದೆ. ಇದು ನಮ್ಮ ಕೆಲಸಗಳಲ್ಲಿ ಭವಿಷ್ಯದ ಮುನ್ನೋಟ ಹೇಗೆ ಇರಬೇಕು ಎನ್ನುವುದಕ್ಕೆ ಉದಾಹರಣೆ ಎಂದು ತಿಳಿಸಿದರು.
ವೈದ್ಯಕೀಯ ಕ್ಷೇತ್ರದಲ್ಲಿ ಹಲವು ನೂತನ ತಂತ್ರಜ್ಞಾನಗಳು ಬಂದಿವೆ. ರೋಬೋಟ್ ಬಳಸಿ ಮಹತ್ವದ ಕಾರ್ಯಗಳನ್ನು ಮಾಡಲಾಗುತ್ತಿದೆ. ಈ ಎಲ್ಲದರ ನಡುವೆಯೂ ಸಮಗ್ರ ಚಿಂತನೆಗಳೊಂದಿಗೆ ಕಾರ್ಯನಿರ್ವಹಿಸುವ ಸಮರ್ಥ ವೈದ್ಯರ ಅಗತ್ಯವಿದೆ ಎಂದು ಒತ್ತಿ ಹೇಳಿದರು.
ವೈದ್ಯಕೀಯ ಮಹಾವಿದ್ಯಾಲಯದಲ್ಲಿ 151 ವಿದ್ಯಾರ್ಥಿಗಳಿಗೆ ವೈದ್ಯಕೀಯ ಪದವಿ ಪ್ರದಾನ ಮಾಡಲಾಯಿತು. 10 ವಿದ್ಯಾರ್ಥಿಗಳಿಗೆ 16 ನಗದು ಪುರಸ್ಕಾರ ಪಡೆದುಕೊಂಡರು.
ಸಂಸ್ಥೆ ಡೀನ್ ಡಾ.ಕೆ.ಆರ್.ದಾಕ್ಷಾಯಿಣಿ, ಅಲುಮಿನಿಯಂ ಅಸೋಸಿಯೇಷನ್ ಅಧ್ಯಕ್ಷ ಡಾ.ಎಚ್.ಎನ್.ದಿನೇಶ್, ಗೌರವಾಧ್ಯಕ್ಷ ಡಾ.ಸಿ.ಡಿ.ಶ್ರೀನಿವಾಸಮೂರ್ತಿ, ಕಾರ್ಯದರ್ಶಿ ಡಾ.ಎಚ್.ಬಿ.ಶಶಿಧರ್, ಸಂಸ್ಥೆ ಟೀಚರ್ಸ್ ಅಸೋಸಿಯೇಷನ್ ಅಧ್ಯಕ್ಷ ಡಾ.ಪಿ.ಎಲ್.ಬಸವಣ್ಣ, ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಡಾ.ಎಸ್.ಚಂದ್ರಶೇಖರ್ ಇತರರು ಇದ್ದರು.