

ಮೈಸೂರು: ನಗರದ ಮೈಸೂರು-ಬನ್ನೂರು ರಸ್ತೆಯಲ್ಲಿರುವ ಎಟಿಎಂಇ ಇಂಜಿನಿಯರಿಂಗ್ ಕಾಲೇಜಿನ ಎನ್‌ಎಸ್‌ಎಸ್ ಘಟಕ, ಆಂತರಿಕ ದೂರು ಸ್ವೀಕಾರ ಸಮಿತಿ (ಸಿಐಸಿಸಿ) ಹಾಗೂ ಜಿಲ್ಲಾ ಪೊಲೀಸ್ ಸಹಯೋಗದಲ್ಲಿ ಅಪರಾಧ ತಡೆ ಮಾಸಾಚರಣೆ ಹಾಗೂ ಜಾಗೃತಿ ಅಭಿಯಾನ ನಡೆಯಿತು.
ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್ ಮಾತನಾಡಿ, ಇಂದಿನ ವಿದ್ಯಾರ್ಥಿ ಸಮೂಹ ಭಾರತದ ಭವಿಷ್ಯತ್ತಿನ ಪ್ರಜೆಗಳಾಗಿದ್ದು, ನೆಲದ ಕಾನೂನನ್ನು ಗೌರವಿಸಬೇಕು. ಸಾಮಾಜಿಕ ಜಾಲತಾಣಗಳ ಬಳಕೆಯ ಬಗ್ಗೆ ಎಚ್ಚರವಾಗಿರಬೇಕು. ಯಾವುದೇ ವೈಯಕ್ತಿಕ ಮಾಹಿತಿಗಳನ್ನು, ಕುಟುಂಬದವರ ಭಾವಚಿತ್ರಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಹಂಚಿಕೊಳ್ಳಬಾರದು. ಇವುಗಳನ್ನು ಕಿಡಿಗೇಡಿಗಳು ಅಪರಾಧ ಚಟುವಟಿಕೆಗಳಿಗೆ ಬಳಸಿಕೊಳ್ಳುವ ಸಾಧ್ಯತೆ ಹೆಚ್ಚು ಎಂದು ಸಲಹೆ ನೀಡಿದರು.
ಹೆಚ್ಚುವರಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ನಂದಿನಿ ಮಾತನಾಡಿ, ವಿದ್ಯಾರ್ಥಿಗಳು ದ್ವಿಚಕ್ರ ಚಾಲನೆ ಮಾಡುವಾಗ ಹಿಂಬದಿಯ ಸವಾರ ಸೇರಿದಂತೆ ಇಬ್ಬರು ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ಕೋವಿಡ್-19ನಲ್ಲಿ ಉಂಟಾದ ಸಾವು-ನೋವುಗಳಿಗಿಂತ ಹೆಚ್ಚಾಗಿ ರಸ್ತೆ ಅಪಘಾತಗಳಲ್ಲಿ ಸಾವೀಗೀಡಾಗುತ್ತಿರುವ ಸಂಖ್ಯೆಯೇ ಅಂಕಿ-ಅಂಶಗಳ ಪ್ರಕಾರ ಅಧಿಕವಾಗಿದೆ. ವಾಹನಗಳಿಗೆ ಸಂಬಂಧಿಸಿದ ನವೀಕರಿಸಿದ ವಾಹನ ವಿಮಾಪತ್ರ, ಚಾಲನಾ ಪರವಾನಗಿ ಸೇರಿದಂತೆ ಇತರ ಎಲ್ಲ ಅವಶ್ಯಕ ದಾಖಲಾತಿಗಳನ್ನು ಸರಿಯಾಗಿ ಇಟ್ಟುಕೊಂಡಿರಬೇಕು ಎಂದು ಸಲಹೆ ನೀಡಿದರು.
ದಕ್ಷಿಣ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ಶಿವಾನಂದಶೆಟ್ಟಿ, ವರುಣ ಠಾಣಾ ಉಪ ನಿರೀಕ್ಷಕ ಚೇತನ್ ಕಾನೂನು ಮತ್ತು ಅಪರಾಧಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಎಟಿಎಂಇ ಆಡಳಿತ ಮಂಡಳಿ ಕಾರ್ಯದರ್ಶಿ ಕೆ. ಶಿವಶಂಕರ್, ಪ್ರಾಂಶುಪಾಲ ಡಾ.ಎ.ಕೆ.ಮೂರ್ತಿ, ಐಕ್ಯೂಎಸಿ ನಿರ್ದೇಶಕ ಡಾ.ಬಸವರಾಜ್, ಆಡಳಿತಾಧಿಕಾರಿ ಡಾ.ಸಚ್ಚಿದಾನಂದಮೂರ್ತಿ, ಡೀನ್‌ಗಳಾದ ಡಾ.ಭಾಗ್ಯಶ್ರೀ, ಡಾ.ಎಂಎಸ್. ಗೋವಿಂದೇಗೌಡ, ಸಿಐಸಿಸಿ ಸದಸ್ಯ ಚಂದ್ರಶೇಖರ್, ಎನ್‌ಎಸ್‌ಎಸ್ ಅಧಿಕಾರಿ ರುದ್ರೇಶ್ ಇತರರಿದ್ದರು.