ಹುಲಿಗಳ ಹತ್ಯೆ ತಡೆಗೆ ಎಚ್ಚರ ವಹಿಸಿ

13 HANUR 3
ಮಲೆಮಹದೇಶ್ವರ ಬೆಟ್ಟದಲ್ಲಿ ಮಾನವ ವನ್ಯಜೀವಿ ಸಂಘರ್ಷ ತಡೆಗಟ್ಟುವ ಸಂಬಂಧ ಶಾಸಕ ಎಂ.ಆರ್ ಮಂಜುನಾಥ್ ಅಧ್ಯಕ್ಷತೆಯಲ್ಲಿ ಅಧಿಕಾರಿಗಳ ಸಭೆ ಆಯೋಜಿಸಲಾಗಿತ್ತು. ಎ.ಈ ರಘು, ಭಾಸ್ಕರ್, ಉಮೇಶ್, ಡಾ. ಸಿದ್ದರಾಜು, ಡಾ.ಮಂಜುನಾಥ್ ಇತರರು ಇದ್ದರು.
Published on

ಹನೂರು: ಜಾನುವಾರು ಮೇಲಿನ ದಾಳಿಯ ಪ್ರತಿಕಾರಕ್ಕೆ ಹುಲಿಗಳ ಹತ್ಯೆ ನಡೆಯುತ್ತಿರುವುದು ಇನ್ನು ಮುಂದೆ ಯಾವುದೇ ಕಾರಣಕ್ಕೂ ಮರುಕಳಿಸಬಾರದು. ಈ ಬಗ್ಗೆ ಮುಂಜಾಗ್ರತೆ ಕ್ರಮ ಕೈಗೊಂಡು ಮಾನವ-ವನ್ಯಜೀವಿ ಸಂಘರ್ಷ ತಡೆಗಟ್ಟಬೇಕು ಎಂದು ಶಾಸಕ ಎಂ.ಆರ್-ಮಂಜುನಾಥ್ ಸೂಚಿಸಿದರು.

ತಾಲೂಕಿನ ಮಲೆಮಹದೇಶ್ವರ ಬೆಟ್ಟದ ನಾಗಮಲೆ ಭವನದಲ್ಲಿ ಸೋಮವಾರ ಮಾನವ ವನ್ಯಜೀವಿ ಸಂಘರ್ಷ ತಡೆಗಟ್ಟುವ ಸಲುವಾಗಿ ಕೈಗೊಳ್ಳಬೇಕಾದ ಅಗತ್ಯ ಕ್ರಮದ ಕುರಿತು ಆಯೋಜಿಸಿದ್ದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.

ಹನೂರು ಕ್ಷೇತ್ರವು ಹೆಚ್ಚು ಅರಣ್ಯ ಪ್ರದೇಶದಿಂದ ಕೂಡಿದ್ದು, ಅರಣ್ಯ ಹಾಗೂ ಕಾಡಂಚಿನಲ್ಲಿ ಜನವಸತಿ ಪ್ರದೇಶ ಹೊಂದಿದೆ. ಹಾಗಾಗಿ ಅರಣ್ಯ ಹಾಗೂ ಮನುಷ್ಯರನ್ನು ಬೇರ್ಪಡಿಸಲು ಸಾಧ್ಯವಿಲ್ಲ. ಇಲ್ಲಿನ ಜನರು ಕೃಷಿಯ ಜತೆಗೆ ಹೈನುಗಾರಿಕೆಯನ್ನೇ ನಂಬಿ ಜೀವನ ನಡೆಸುತ್ತಿದ್ದು, ಜಾನುವಾರುಗಳನ್ನು ಸಾಕುತ್ತಿದ್ದಾರೆ. ಜಾನುವಾರುಗಳು ಕಾಡು ಪ್ರಾಣಿಗಳ ದಾಳಿಗೆ ಒಳಗಾದರೆ ವ್ಯಕ್ತಿ ಪ್ರತಿಕಾರಕ್ಕೆ ಮುಂದಾಗುತ್ತಾನೆ. ಇದಕ್ಕೆ ಮಲೆಮಹದೇಶ್ವರ ವನ್ಯಜೀವಿ ಧಾಮದಲ್ಲಿ 6 ಹುಲಿಗಳು ವಿಷಪ್ರಾಶನದಿಂದ ಮೃತಪಟ್ಟಿರುವುದೇ ಸಾಕ್ಷಿ. ದೇಶಕ್ಕೆ ಋಣಾತ್ಮಕ ಸಂದೇಶ ರವಾನೆಯಾಗಿದೆ. ಹಾಗಾಗಿ ಹುಲಿ ಹತ್ಯೆಗೆ ಕಡಿವಾಣ ಹಾಕಬೇಕಿದೆ. ಆದ್ದರಿಂದ ಈ ಬಗ್ಗೆ ಪ್ರತಿಯೊಬ್ಬರೂ ಮನದಟ್ಟು ಮಾಡಿಕೊಂಡು ಇಂತಹ ದುಷ್ಕೃತ್ಯ ಮತ್ತೇ ಮರುಕಳಿಸದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕಿದೆ ಎಂದು ತಿಳಿಸಿದರು.

ಪರಿಹಾರ ನೀಡುವ ಕೆಲಸವಾಗಲಿ: ಜಾನುವಾರುಗಳು ರೈತರ ಜೀವನಾಡಿಯಾಗಿದ್ದು, ಹತ್ಯೆಗೊಳಗಾದರೆ ವ್ಯಕ್ತಿ ದ್ವೇಷದ ಪ್ರತಿಕಾರಕ್ಕೆ ದುಷ್ಕೃತ್ಯದ ಸಂಚು ನಡೆಸಲು ಮುಂದಾಗುತ್ತಾನೆ. ಆದ್ದರಿಂದ ಕಾಡುಪ್ರಾಣಿಗಳ ದಾಳಿಗೆ ಒಳಗಾದ ಜಾನುವಾರುಗಳಿಗೆ ಸರ್ಕಾರದಿಂದ ಪರಿಹಾರ ನೀಡಬೇಕಿದೆ. ಇದರಿಂದ ರೈತನಿಗೆ ಕೊಂಚ ಸಮಾಧಾನ ತರಿಸುತ್ತದೆ. ಕಾಡು ಪ್ರಾಣಿಗಳ ಹತ್ಯೆಗೆ ಮುಂದಾಗುವುದಿಲ್ಲ. ಇದರಿಂದ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ. ಹಾಗಾಗಿ ತಾಲೂಕಿನಲ್ಲಿರುವ ಜಾನುವಾರುಗಳ ಅಂಕಿ-ಅಂಶ ಅಗತ್ಯವಾಗಿದೆ. ಮುಂದಿನ ದಿನಗಳಲ್ಲಿ ರಾಸುಗಳಿಗೆ ಕಿವಿಯೋಲೆ ಹಾಕುವುದು ಅತ್ಯಗತ್ಯವಾಗಿದೆ. ಈ ಬಗ್ಗೆ ಸಮರ್ಪಕವಾಗಿ ಸರ್ವೇ ಕಾರ್ಯ ನಡೆಸಿ ರೂಪುರೇಷೆ ಸಿದ್ಧಪಡಿಸಬೇಕು. ಈ ಬಗ್ಗೆ ಸಚಿವರು ಹಾಗೂ ಮುಖ್ಯಮಂತ್ರಿ ಅವರ ಗಮನಕ್ಕೆ ತಂದು ಅಗತ್ಯ ಕ್ರಮ ವಹಿಸುವುದಾಗಿ ಶಾಸಕರು ಮಾಹಿತಿ ನೀಡಿದರು.

ಡಿಸಿಎಫ್ ಭಾಸ್ಕರ್ ಮಾತನಾಡಿ, ಮಲೆಮಹದೇಶ್ವರ ವನ್ಯಜೀವಿ ಧಾಮದಲ್ಲಿ ನಡೆದ 2 ಪ್ರತ್ಯೇಕ ಹುಲಿ ಹತ್ಯೆ ಪ್ರಕರಣ ಋಣಾತ್ಮಕ ಸಂದೇಶ ರವಾನಿಸಿದೆ. ಈ ಸಂಬಂಧ ಸುಪ್ರೀಂಕೋರ್ಟ್‌ನಲ್ಲಿ ದಾವೆ ಹೂಡಲಾಗಿದ್ದು, ವರದಿ ನೀಡಲಾಗಿದೆ. ತಾಲೂಕಿನಲ್ಲಿ ಬಿಆರ್‌ಟಿ ಹೊಂದಿಕೊಂಡಂತೆ ಮಲೆ ಮಹದೇಶ್ವರ ಹಾಗೂ ಕಾವೇರಿ ವನ್ಯಜೀವಿ ಧಾಮವಿದ್ದು, ಸುಮಾರು 2 ಸಾವಿರ ಚದರ ಕಿ.ಮೀ. ವಿಸ್ತೀರ್ಣವನ್ನು ಹೊಂದಿದೆ. ಇಲ್ಲಿ ಹುಲಿ, ಆನೆ, ಚಿರತೆ, ಸೀಳುನಾಯಿ, ತೋಳ, ನರಿ, ಗುಳ್ಳೆನರಿ ಇನ್ನು ಕೆಲವು ಪ್ರಾಣಿಗಳಿವೆ. ಮಲೆಮಹದೇಶ್ವರ ವನ್ಯಜೀವಿ ಧಾಮದಲ್ಲಿ ಜನವಸತಿ ಪ್ರದೇಶವಿದ್ದು, ಹಿಂದಿನಿಂದಲೂ ಇಲ್ಲಿನ ಜನರು ಜಾನುವಾರುಗಳನ್ನು ಮೇವಿಗಾಗಿ ಕಾಡಿಗೆ ಬಿಡುವ ಪದ್ಧತಿ ಇದೆ. ಈ ಹಿಂದೆ ಈ ಧಾಮದಲ್ಲಿ ಹುಲಿಗಳ ಸಂಖ್ಯೆ ಕಡಿಮೆ ಇತ್ತು. ಆದರೆ ಇದೀಗ ಹುಲಿಗಳ ಸಂಖ್ಯೆ ಹೆಚ್ಚಿವೆ. ಹಾಗಾಗಿ ಕಾಡಿನೊಳಗೆ ತೆರಳುವ ಜಾನುವಾರುಗಳು ಹುಲಿ ದಾಳಿಗೆ ಒಳಗಾಗುತ್ತಿವೆ. ಇದಕ್ಕೆ ಜನರು ಪ್ರತಿಕಾರಕ್ಕೆ ಮುಂದಾಗುತ್ತಿದ್ದಾರೆ. ಹಾಗಾಗಿ ವನ್ಯಜೀವಿಗಳು ಹಾಗೂ ಜಾನುವಾರುಗಳ ಹಿತದೃಷ್ಟಿಯಿಂದ ಮುಂಜಾಗ್ರತಾ ಕ್ರಮ ವಹಿಸುವುದು ಅಗತ್ಯವಾಗಿದೆ ಎಂದರು.

ಇದೇ ವೇಳೆ ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಸಿದ್ದರಾಜು, ತಾಲೂಕಿನಲ್ಲಿರುವ ಜಾನುವಾರುಗಳು, ಕಿವಿಯೋಲೆ ಹಾಕುವ ಸಂಬಂಧ ಕೈಗೊಳ್ಳಬೇಕಾದ ಕಾರ್ಯದ ಬಗ್ಗೆ ಮಾಹಿತಿ ತಿಳಿಸಿದರು.

ಸಭೆಯಲ್ಲಿ ಕಾಡಂಚಿನ ಜನರಿಗೆ ಮಿಶ್ರತಳಿ ನೀಡುವಿಕೆ, ಮೇವು ಒದಗಿಸುವಿಕೆ, ಡೇರಿ ಸ್ಥಾಪನೆ, ಜನರಲ್ಲಿ ಅರಿವು ಸೇರಿದಂತೆ ಮಾನವ ವನ್ಯಜೀವಿ ಸಂಘರ್ಷ ಸಂಬಂಧಿಸಿದಂತೆ ಇನ್ನಿತರ ವಿಷಯದ ಬಗ್ಗೆ ಚರ್ಚಿಸಲಾಯಿತು. ಜತೆಗೆ ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವುದು. ರೈತರಿಗೆ ನೀರಾವರಿ ಸೌಕರ್ಯ ಸಂಬಂಧ ಶಾಸಕರು ಮಾಹಿತಿ ತಿಳಿಸಿದರು.

ಈ ಸಂದರ್ಭದಲ್ಲಿ ಶ್ರೀ ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎ.ಈ ರಘು, ಎಸಿಎಫ್‌ಗಳಾದ ವಿರಾಜ್ ಹೊಸೂರ್, ಮನೋಹರ್ ಸ್ವಪ್ನಿಲ್ ಅಹಿರೆ, ಪಶುಪಾಲನಾ ಇಲಾಖೆಯ ಉಪ ನಿರ್ದೇಶಕ ಡಾ. ಮಂಜುನಾಥ್, ತಾಪಂ ಇಒ ಉಮೇಶ್, ಪಿಡಿಒ, ಗ್ರಾಮ ಆಡಳಿತ ಅಧಿಕಾರಿಗಳು ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net