

ತಿ.ನರಸೀಪುರ: ಅಂಬೇಡ್ಕರ್ ಅವರ ಸಂವಿಧಾನದ ಆಶಯ, ಚಿಂತನೆಗಳನ್ನು ಬುಡಮೇಲು ಮಾಡುವ ಪ್ರಯತ್ನಗಳು ನಡೆಯುತ್ತಿರುವ ಪ್ರಸ್ತುತ ಕಾಲಘಟ್ಟದಲ್ಲಿ ಸಂವಿಧಾನ ಉಳಿಸುವ ದಿಕ್ಕಿನಲ್ಲಿ ನಾವೆಲ್ಲರೂ ಜಾಗೃತರಾಗಬೇಕು ಎಂದು ದಲಿತ ಸಂಘರ್ಷ ಸಮಿತಿಯ ಹಿರಿಯ ಜಿಲ್ಲಾ ಸಂಚಾಲಕ ಬೆಟ್ಟಯ್ಯಕೋಟೆ ಕರೆ ನೀಡಿದರು.
ಪಟ್ಟಣದ ನಂಜನಗೂಡು ರಸ್ತೆಯಲ್ಲಿರುವ ಅಂಬೇಡ್ಕರ್ ಸಮುದಾಯ ಭವನದಲ್ಲಿ ಶನಿವಾರ ಡಾ.ಬಿ.ಆರ್.ಅಂಬೇಡ್ಕರ್ ಅವರ 134 ನೇ ಜನ್ಮದಿನಾಚರಣೆಯ ಅಂಗವಾಗಿ ದಲಿತ ಸಂಘರ್ಷ ಸಮಿತಿ ಆಯೋಜಿಸಿದ್ದ ಸ್ವಾತಂತ್ರ್ಯ ನಂತರ ಭಾರತದ 77 ವರ್ಷಗಳ ನಡೆಯಲ್ಲಿ ಸಂಕಿರಣಗೊಂಡ ಸಂವಿಧಾನದ ಆಶಯಗಳು ಕುರಿತು ಜನಜಾಗೃತಿ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಪ್ರಸಕ್ತ ಸನ್ನಿವೇಶದಲ್ಲಿ ಸಂವಿಧಾನದ ಆಶಯಗಳು ಈಡೇರಿವೆಯೇ ಎಂಬುದರ ಬಗ್ಗೆ ವಿಮರ್ಶೆ ಮಾಡಬೇಕಿದೆ ಎಂದರು.
ಸ್ವಾತಂತ್ರ್ಯ ಪೂರ್ವದಲ್ಲಿ ಜಾತೀಯ ಕಾರಣಗಳಿಂದಾಗಿ ಶಿಕ್ಷಣ ಹಾಗೂ ಹಕ್ಕುಗಳಿಂದ ವಂಚಿತರಾಗಿದ್ದ ಶೋಷಿತ ಸಮುದಾಯಗಳ ಬದುಕನ್ನು ಸುಧಾರಿಸಲು ತಮ್ಮ ಹೋರಾಟದ ಮೂಲಕ ಡಾ.ಬಿ.ಆರ್.ಅಂಬೇಡ್ಕರ್ ಅವರು ಈ ದೇಶಕ್ಕೆ ಸಂವಿಧಾನ ಕೊಡುಗೆ ನೀಡಿದರು. ಸಂವಿಧಾನದಡಿ ಸರ್ವರಿಗೂ ಸಮ ಬಾಳು, ಸರ್ವರಿಗೂ ಸಮಪಾಲು, ಶಿಕ್ಷಣ ಹಾಗೂ ಹಕ್ಕುಗಳನ್ನು ದೊರಕಿಸಿದರು. ಆದರೆ ಸ್ವಾತಂತ್ರೃ ಬಂದು 75 ವರ್ಷ ಕಳೆದರೂ ಸಹ ಈ ದೇಶದಲ್ಲಿ ಪೂರ್ಣ ಪ್ರಮಾಣದ ಸಂವಿಧಾನದ ಆಶಯಗಳು ಈಡೇರಿಲ್ಲ.
ಇದಕ್ಕೆ ಉದಾಹರಣೆಯಾಗಿ ತಿ.ನರಸೀಪುರ ಪಟ್ಟಣದಲ್ಲಿ ವಸತಿಗಾಗಿ ಕೊರಚರು ಅನೇಕ ವರ್ಷಗಳಿಂದ ಮನವಿ ಮಾಡುತ್ತಿದ್ದರೂ ಪ್ರಯೋಜನವಾಗಿರಲಿಲ್ಲ. ದಸಂಸ ಹೋರಾಟದ ಫಲವಾಗಿ ಈಗ ದೊರಕಿದೆ ಎಂದು ಬೆಟ್ಟಯ್ಯಕೋಟೆ ಶ್ಲಾಘಿಸಿದರು.
ಜಿಲ್ಲಾ ಸಂಚಾಲಕ ಆಲಗೂಡು ಶಿವಕುಮಾರ್ ಮಾತನಾಡಿ, ಜಗತ್ತಿನ ಶೋಷಿತರ ಏಕೈಕ ವಿಮೋಚಕ ಡಾ.ಬಿ.ಆರ್.ಅಂಬೇಡ್ಕರ್ ಆಗಿದ್ದಾರೆ. ಅವರ ಹೋರಾಟದ ಫಲವಾಗಿ ಸಮಾಜದಲ್ಲಿ ತುಳಿತಕ್ಕೊಳಗಾಗಿದ್ದ ಕೋಟ್ಯಂತರ ಜನರು ಬದುಕನ್ನು ಕಟ್ಟಿಕೊಂಡು ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಮಹಿಳೆಯರಿಗೂ ಕೌಟುಂಬಿಕ ಮತ್ತು ಸಮಾಜದಲ್ಲಿ ಸಮಾನ ಅವಕಾಶಗಳನ್ನು ಬೇಕೆಂದು ಸಚಿವ ಹುದ್ದೆಯನ್ನೇ ತೊರೆದು, ಕಾರ್ಮಿಕರ ಶ್ರೇಯೋಭಿವೃದ್ಧಿಗೆ ಹೋರಾಟ ನಡೆಸಿದ ಮಹಾ ಮಾನವತವಾದಿ ಅಂಬೇಡ್ಕರ್ ಎಂಬುದನ್ನು ಪ್ರತಿಯೊಬ್ಬರೂ ಅರಿಯಬೇಕು. ಸಂವಿಧಾನದ ಉಳಿವಿಗೆ, ಅಂಬೇಡ್ಕರ್ ಅವರ ಕನಸನ್ನು ನನಸಾಗಿಸುವ ದಿಕ್ಕಿನಲ್ಲಿ ನಾವೆಲ್ಲರೂ ಸಂಘಟಿತರಾಗಬೇಕು ಎಂದು ಕಿವಿಮಾತು ಹೇಳಿದರು.
ವಕೀಲರ ಬಿ.ಆರ್.ರಂಗಸ್ವಾಮಿ ಹಾಗೂ ಸಂಶೋಧನಾ ಸಹಾಯಕ ಪ್ರಾಧ್ಯಾಪಕಿ ಎಚ್.ಕೆ.ಕಲಾವತಿ ಅವರು ಅಂಬೇಡ್ಕರ್ ಜೀವನ ಚರಿತ್ರೆ ಕುರಿತು ಮಾತನಾಡಿದರು.
ದಸಂಸ ಜಿಲ್ಲಾ ಸಂಚಾಲಕರಾದ ಶಂಭುಲಿಂಗಸ್ವಾಮಿ, ಹೆಗ್ಗನೂರು ನಿಂಗರಾಜು, ಬಿ.ಡಿ.ಶಿವಬುದ್ದಿ, ಉಪವಿಭಾಗೀಯ ಸಂಘಟನಾ ಸಂಚಾಲಕ ಮಂಜು ಶಂಕರಪುರ, ತಾಲೂಕು ಸಂಚಾಲಕರಾದ ಕುಕ್ಕೂರು ರಾಜು, ಯಾಚೇನಹಳ್ಳಿ ಸೋಮಶೇಖರ್, ಮುಖಂಡರಾದ ಆಳಗೂಡು ನಾಗರಾಜ ಮೂರ್ತಿ, ಶಾಂತಕುಮಾರ್, ಬನ್ನಹಳ್ಳಿಹುಂಡಿ ಉಮೇಶ್, ಕರೋಹಟ್ಟಿ ನಾಗೇಶ, ಹ್ಯಾಕನೂರು ಶಿವಕುಮಾರ್, ಮಹೇಶ್, ಇಂಡವಾಳು ನಾಗರಾಜು, ಹೊನ್ನಯ್ಯ, ಉಕ್ಕಲಗೆರೆ ರಾಜು, ಸುಜ್ಜಲೂರು ಶಿವಯ್ಯ, ಕೊರಚರ ರಾಜು, ಕೃಷ್ಣಮೂರ್ತಿ ಬಸವಟ್ಟಿಗೆ, ರವಿ ಆಕಳ, ಸುರೇಶ್ ಸಿದ್ದೇಗೌಡನಹುಂಡಿ, ಗಜೇಂದ್ರ ಗೋಣಹಳ್ಳಿ, ಮರಿಸ್ವಾಮಿ ಸರಗೂರು, ಹೊಳೆಯಪ್ಪ ಏಚಗಳ್ಳಿ, ನಟರಾಜು ಮಾಕನಪುರ, ಮಹೇಶ್ ಬೆಳಲೆ ಇತರರು ಇದ್ದರು.