

ಶಿವಮೊಗ್ಗ: ಪ್ರಸಕ್ತ ಸಾಲಿನಲ್ಲಿ ಕೆಎಫ್‌ಡಿ(ಮಂಗನ ಕಾಯಿಲೆ) ಪ್ರಕರಣಗಳು ವರದಿಯಾಗಿಲ್ಲ. ಆದರೂ ಮುಂಜಾಗ್ರತಾ ಕ್ರಮವಾಗಿ ಕೆಎಫ್‌ಡಿ ಕುರಿತು ಎಲ್ಲ ಪಂಚಾಯಿತಿಗಳಲ್ಲಿ ಕರಪತ್ರ, ಮಾಹಿತಿ, ಶಿಕ್ಷಣದ ಮೂಲಕ ಅರಿವು ಮೂಡಿಸಬೇಕು ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅಧಿಕಾರಿಗಳಿಗೆ ಸೂಚಿಸಿದರು.
ಡಿಸಿ ಕಚೇರಿ ಸಭಾಂಗಣದಲ್ಲಿ ಗುರುವಾರ ಆರೋಗ್ಯ ಇಲಾಖೆಯ ವಿವಿಧ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಕೆಎಫ್‌ಡಿ ರೋಗ ಲಕ್ಷಣಗಳಿದ್ದಲ್ಲಿ ಪರೀಕ್ಷೆ ನಡೆಸಲಾಗುತ್ತಿದೆ. ಸಾಗರ, ಸೊರಬ, ತೀರ್ಥಹಳ್ಳಿ, ಹೊಸನಗರ ತಾಲೂಕುಗಳಲ್ಲಿ ಇಲಾಖೆಯಿಂದ ಡಿಪಾ(ಡಿಇಪಿಎ) ತೈಲ ನೀಡಲಾಗಿದೆ. ಸಾರ್ವಜನಿಕರು ಕಾಡಿಗೆ ತೆರಳುವ ಮುನ್ನ ತೈಲವನ್ನು ಕೈಕಾಲುಗಳಿಗೆ ಲೇಪಿಸಿಕೊಂಡು ಹೋಗಬೇಕು ಹಾಗೂ ಪಶುಸಂಗೋಪನೆ ಇಲಾಖೆಯಿಂದ ಜಾನುವಾರುಗಳಿಗೆ ಉಣ್ಣೆಯಿಂದ ರಕ್ಷಿಸಿಕೊಳ್ಳಲು ಅಗತ್ಯವಾದ ಲಸಿಕೆ ನೀಡಬೇಕು ಎಂದರು.
ಡಿಎಸ್‌ಒ ಡಾ. ನಾಗರಾಜ್ ನಾಯ್ಕ್ ಮಾತನಾಡಿ, ಅರಣ್ಯದಲ್ಲಿರುವ ಸೋಂಕು ಪೀಡಿತ ಉಣ್ಣೆ(ಉಣುಗು)ಗಳು ಕಚ್ಚುವುದರಿಂದ ಕೆಎಫ್‌ಡಿ ಬರುತ್ತದೆ. ಕಾಡಿನಲ್ಲಿ ಮಂಗಗಳು ಸಾಯುವುದೇ ಈ ಕಾಯಿಲೆಯ ಲಕ್ಷಣ. ಹಾಗಾಗಿ ಮೃತಪಟ್ಟಿರುವ ಮಂಗಗಳು ಕಂಡುಬಂದರೆ ಆರೋಗ್ಯ ಇಲಾಖೆ ಅಥವಾ ಸ್ಥಳೀಯ ಗ್ರಾಪಂ, ಅರಣ್ಯ ಇಲಾಖೆಗೆ ತಿಳಿಸಬೇಕು ಹಾಗೂ ಆ ಪ್ರದೇಶಕ್ಕೆ ಸಾರ್ವಜನಿಕರು ಹೋಗದಂತೆ ನಿರ್ಬಂಧಿಸಬೇಕು ಎಂದು ತಿಳಿಸಿದರು.
ಕೆಎಫ್‌ಡಿ ಲಕ್ಷಣಗಳಾದ ಜ್ವರ, ವಿಪರೀತ ತಲೆನೋವು, ಕಣ್ಣು ಕೆಂಪಾಗುವುದು, ನಿಶ್ಯಕ್ತಿ ಮತ್ತಿತರ ಲಕ್ಷಣ ಕಂಡುಬಂದರೆ ಹತ್ತಿರದ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ಚಿಕಿತ್ಸೆ ಪಡೆಯಬೇಕು ಎಂದು ಸಲಹೆ ನೀಡಿದರು. ಜಿಪಂ ಉಪ ಕಾರ್ಯದರ್ಶಿ ಕೆ.ಆರ್.ಸುಜಾತಾ, ಎಎಸ್‌ಪಿ ಅನಿಲ್ಕುಮಾರ್ ಭೂಮರಡ್ಡಿ, ಡಿಎಚ್‌ಒ ಡಾ. ನಟರಾಜ್, ಜಿಲ್ಲಾ ಶಸ್ತಚಿಕಿತ್ಸಕ ಡಾ. ಸಿದ್ದನಗೌಡ ಪಾಟೀಲ್, ಜಿಲ್ಲಾ ಕ್ಷಯ ಮತ್ತು ಎಚ್‌ಐವಿ ನಿಯಂತ್ರಣಾಧಿಕಾರಿ ಡಾ. ಬಿ.ಪಿ.ನಾಗೇಶ್, ಡಿಎಸ್‌ಒ ಡಾ. ನಾಗರಾಜ್ ನಾಯ್ಕ್ ಇತರರಿದ್ದರು.