

ಮೈಸೂರು: ಆಧುನಿಕ ದಿನಗಳಲ್ಲಿ ಸೈಬರ್ ವಂಚನೆಗಳು ಹೆಚ್ಚಾಗುತ್ತಿದ್ದು, ಭದ್ರತೆ ಕುರಿತು ಸಾಕಷ್ಟು ಎಚ್ಚರಿಕೆ ವಹಿಸಬೇಕು ಎಂದು ಚೆನ್ನೈನ ಭಾರತೀಯ ಪೇಟೆಂಟ್ ಕಚೇರಿಯ ವಿನ್ಯಾಸ ಉಪ ನಿಯಂತ್ರಕ ಎಂ. ರಾಮ್ ಜವಾಹರ್ ಹೇಳಿದರು.
ಜೆಎಸ್‌ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದಿಂದ ಎಸ್‌ಜೆಸಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ್ದ ‘ಸೈಬರ್ ಭದ್ರತೆ ಮತ್ತು ಬೌದ್ಧಿಕ ಆಸ್ತಿ ಹಕ್ಕುಗಳ ಒಳನೋಟ’ ಕುರಿತ ವಿಚಾರಸಂಕಿರಣದಲ್ಲಿ ಅವರು ಮಾತನಾಡಿದರು.
ದಿನದಿಂದ ದಿನಕ್ಕೆ ಸೈಬರ್ ವಂಚನೆ ಹೆಚ್ಚಾಗುತ್ತಿವೆ. ಇದಕ್ಕೆ ವಿದ್ಯಾವಂತರೇ ಹೆಚ್ಚು ಬಲಿಯಾಗುತ್ತಿದ್ದಾರೆ. ವಿದೇಶಗಳಲ್ಲಿ ಸೈಬರ್ ಭದ್ರತೆ ಹೆಚ್ಚಾಗಿರುತ್ತದೆ. ಅದೇ ಮಾದರಿಯಲ್ಲಿ ನಾವೂ ಸೈಬರ್ ಭದ್ರತೆಗೆ ಹೆಚ್ಚಿನ ಒತ್ತು ನೀಡಿ, ಅದರಲ್ಲಿ ಹೂಡಿಕೆಯೂ ಹೆಚ್ಚಾಗುವಂತೆ ಮಾಡಬೇಕಿದೆ ಎಂದು ರಾಮ್ ಅಭಿಪ್ರಾಯಪಟ್ಟರು.
ಆರ್ಥಿಕ ಬೆಳವಣಿಗೆಗೆ ಪೂರಕ: ಇತರ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಬೌದ್ಧಿಕ ಹಕ್ಕು ಹೂಡಿಕೆ ಪ್ರಮಾಣವನ್ನು ಏರಿಕೆ ಮಾಡಿದರೆ ದೇಶದ ಆರ್ಥಿಕ ಬೆಳವಣಿಗೆಗೆ ಪೂರಕವಾಲಿದೆ. ಸೈಬರ್ ಅಪರಾಧ ತಡೆಗಟ್ಟುವಲ್ಲಿ ಇನ್ನಷ್ಟು ಸಂಶೋಧನೆಗಳು ನಡೆಯಬೇಕು ಎಂದು ರಾಮ್ ಹೇಳಿದರು.
ಜಾಗೃತಿ ಮೂಡಿಸಿ: ಜೆ.ಎಸ್.ಎಸ್. ಮಹಾವಿದ್ಯಾಪೀಠದ ಟಿಇಡಿ ನಿರ್ದೇಶಕ ಡಾ.ಬಿ. ಸುರೇಶ ಮಾತನಾಡಿ, ನಾವು ಡಿಜಿಟಲ್ ಯುಗದಲ್ಲಿ ಇರುವುದರಿಂದ ಸೈಬರ್ ಭದ್ರತೆ ಬಹಳ ಮುಖ್ಯವಾಗಿದೆ. ತರಕಾರಿ ಮಾರುವವರೂ ಡಿಜಿಟಲ್ ತಂತ್ರಜ್ಞಾನ ಬಳಸುತ್ತಿದ್ದಾರೆ. ಅದರೆ ಮಾಹಿತಿ ಕೊರತೆ ಕಡಿಮೆ ಇರುವುದರಿಂದ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದರು.
ಸೈಬರ್ ವಂಚನೆಗೆ ಹೆಚ್ಚಾಗಿ ವಿದ್ಯಾವಂತರು ಹಾಗೂ ಸೆಲಬ್ರೆಟಿಗಳೇ ಬಲಿಯಾಗುತ್ತಿದ್ದಾರೆ. ವಂಚಕರ ಜಾಲಕ್ಕೆ ಸಿಲುಕಿ ಹಣ ಕಳೆದುಕೊಳ್ಳ್ಳುತ್ತಿದ್ದಾರೆ. ಈ ಕುರಿತು ಜಾಗೃತಿ ಮೂಡಿಸಬೇಕು. ಸೈಬರ್ ಭದ್ರತೆ, ಸುರಕ್ಷತೆ ತಿಳಿಸಿಕೊಡಬೇಕು ಎಂದು ಹೇಳಿದರು.
ಜೆ.ಎಸ್.ಎಸ್. ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದ ಕುಲಪತಿ ಡಾ.ಎ.ಎನ್. ಸಂತೋಷ್‌ಕುಮಾರ್, ಕುಲಸಚಿವ ಡಾ.ಎಸ್.ಎ. ಧನರಾಜ್, ಬೆಂಗಳೂರಿನ ಜೆ.ಎಸ್.ಎಸ್.ವಿಜ್ಞಾನ ಮತ್ತು ತಂತ್ರಜ್ಞಾನ ಎಟಿಇ ಕಾಲೇಜು ಪ್ರಾಂಶುಪಾಲ ಡಾ.ಭೀಮ್‌ಸೇನ್ ಸೋರಾಗಾಂವ್, ಎಸ್‌ಜೆಸಿಇ ಪ್ರಾಂಶುಪಾಲ ಡಾ. ಸಿ ನಟರಾಜ್, ಕಾರ್ಯಕ್ರಮ ಸಂಯೋಜಕರಾದ ಡಾ.ಎಚ್.ಆರ್.ಚೆನ್ನಮ್ಮ, ಡಾ.ಕೆ.ಎನ್.ಸೌಮ್ಯಾ, ಡಾ.ಕೆ.ಆರ್.ಭಾರತಿ, ಡಾ.ವಿ.ಬಾಲಮುರಳೀಧರ ಇತರರು ಇದ್ದರು.