

ಗೋಕರ್ಣ: ಅನೇಕಾನೇಕ ತಲೆಮಾರುಗಳಿಂದ ಹಲವು ವೈಶಿಷ್ಟ್ಯಗಳನ್ನು ಬಳುವಳಿಯಾಗಿ ಪಡೆದ ಹೆಮ್ಮೆ ಹವ್ಯಕ ಸಂಸ್ಕೃತಿಯದಾಗಿದೆ. ಆದರೆ ಇಂತಹ ಸಮಾಜ ಇಂದು ಕ್ಷೀಣಿಸುವ ಅಪಾಯದಲ್ಲಿದೆ. ಜತೆಗೆ ಸಾಂಸ್ಕೃತಿಕವಾಗಿಯೂ ಕ್ಷಯಿಸುತ್ತಿದೆ. ಈ ಭವ್ಯ ಸಂಸ್ಕೃತಿ ಮತ್ತು ಪರಂಪರೆಯನ್ನು ಸಂರಕ್ಷಿಸಿ ಅದರ ವಾರಸುದಾರರಾಗಬೇಕು ಎಂದು ವಿಷ್ಣುಗುಪ್ತ ವಿಶ್ವವಿದ್ಯಾಪೀಠದಲ್ಲಿ ಸಂಘಟನಾ ಚಾತುರ್ಮಾಸ್ಯದಲ್ಲಿ ನಿರತ ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿ ನುಡಿದರು.
ಮಂಗಳವಾರ ಉಪ್ಪಿನಂಗಡಿ ಮಂಡಲದ ಪುತ್ತೂರು, ಧರ್ಬೆ, ಕಬಕ ಮತ್ತು ಮಾಣಿ ವಲಯಗಳ ಶಿಷ್ಯಭಕ್ತರ ಭಿಕ್ಷಾಸೇವೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮಾಣಿಮಠದಲ್ಲಿ ಆಯೋಜಿತವಾದ ಪ್ರಸಕ್ತ ವರ್ಷದ ನವರಾತ್ರಿ ಉತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಅವರು ಆಶೀರ್ವಚನ ನೀಡಿದರು.
ವಿಶೇಷವಾಗಿ ಯುವಜನತೆಯಲ್ಲಿ ಈ ಕುರಿತಾಗಿ ಜಾಗೃತಿ ಮೂಡಿಸಿ ಸಂಸ್ಕೃತಿಯ ಸಂರಕ್ಷಣೆಗೆ ಪ್ರೇರೇಪಿಸಬೇಕು. ಮಕ್ಕಳಿಗೆ ಹವ್ಯಕ ಸಂಸ್ಕೃತಿಯ ಮೂಲ ಸಂಸ್ಕಾರ ನೀಡದವರು ಉತ್ತಮ ತಂದೆ ತಾಯಿ ಪಟ್ಟಕ್ಕೆ ಅರ್ಹರಾಗಲು ಸಾಧ್ಯವಿಲ್ಲ. ಉತ್ತಮ, ಆಧುನಿಕ ಶಿಕ್ಷಣದ ಜತೆಗೆ ಸದಾಚಾರ ಸಂಪನ್ನ ನಮ್ಮ ಸಂಸ್ಕೃತಿಯ ಪಾಠ ಮಾಡುವ ಉದ್ದೇಶದಿಂದ ಪ್ರಾರಂಭಿಸಲಾದ ವಿಷ್ಣುಗುಪ್ತ ವಿಶ್ವವಿದ್ಯಾಪೀಠ ಭವಿಷ್ಯದಲ್ಲಿ ಬೃಹತ್ ಸ್ವರೂಪ ಪಡೆಯಲಿದ್ದು, ಸಮಾಜದ ಎಲ್ಲ ಮಕ್ಕಳೂ ಇಲ್ಲಿ ಅಧ್ಯಯನ ಕೈಗೊಳ್ಳುವಂತಾಗಬೇಕು. ತನ್ಮೂಲಕ ನಮಗಿಂತ ನಮ್ಮ ಭವಿಷ್ಯದ ತಲೆಮಾರು ಸಕಲ ಉತ್ತಮತ್ವದ ಪ್ರತಿನಿಧಿಗಳಾಗಲಿ ಎಂದು ಶ್ರೀಗಳು ಆಶಿಸಿದರು.
ಶ್ರೀಮಠದ ಪ್ರಧಾನ ದೇವತೆಗಳಲ್ಲೊಂದಾದ ಶ್ರೀರಾಜರಾಜೇಶ್ವರಿ ನವರಾತ್ರಿ ಮಹೋತ್ಸವ ವೈಭವಯುತವಾಗಿ ಆಚರಿತವಾಗಬೇಕು. ಮಠದ ಅವಿಚ್ಛಿನ್ನ ಪರಂಪರೆ, ಸ್ವರ್ಣಮಂಟಪ, ಹಸ್ತಿದಂತ ಸಿಂಹಾಸನದಂತಹ ಸರ್ವ ಶ್ರೇಷ್ಠ ಕೊಡುಗೆಗಳಿಗೆ ನವರಾತ್ರಿ ಮುಕುಟಪ್ರಾಯವಾಗಿ ಅದ್ಭುತ ಯಶಸ್ಸಿಗೆ ಕಾರಣವಾಗಲಿ ಎಂದು ಶ್ರೀಗಳು ಹರಸಿದರು. ಈ ನವರಾತ್ರಿ ಮಹೋತ್ಸವ ಅ.15ರಿಂದ ಪ್ರಾರಂಭವಾಗಿ 24ರಂದು ಸಂಪನ್ನವಾಗಲಿದೆ.
ಹವ್ಯಕ ಮಹಾಮಂಡಲ ಪ್ರ. ಕಾರ್ಯದರ್ಶಿ ಉದಯಶಂಕರ ಭಟ್ಟ ಮಿತ್ತೂರು, ಮಂಗಳೂರು ಪ್ರಾಂತ ಕಾರ್ಯದರ್ಶಿ ವೇಣುಗೋಪಾಲ ಕೆದ್ಲ, ಉಪ್ಪಿನಂಗಡಿ ಮಂಡಲಾಧ್ಯಕ್ಷ ಈಶ್ವರ ಪ್ರಸನ್ನ ಪೆರ್ನೆಕೋಡಿ, ಕಾರ್ಯದರ್ಶಿ ಮಹೇಶ ಕುದುಪುಲ, ಮಾಣಿಮಠ ಕ್ರಿಯಾ ಸಮಿತಿ ಅಧ್ಯಕ್ಷ ಹಾರಕೆರೆ ನಾರಾಯಣ ಭಟ್ಟ, ಕೋಶಾಧ್ಯಕ್ಷ ಮೈಕೆ ಗಣೇಶ ಭಟ್ಟ, ಸದಸ್ಯರಾದ ಶೈಲಜಾ ಕೊಂಕೋಡಿ, ಸತೀಶ ಬನಾರಿ, ಲೋಕ ಸಂಪರ್ಕಾಧಿಕಾರಿ ಜಿ.ಕೆ. ಹೆಗಡೆ, ಚಾತುರ್ಮಾಸ್ಯ ಸಮಿತಿ ಅಧ್ಯಕ್ಷ ಯುಎಸ್‌ಜಿ ಭಟ್ಟ ಮತ್ತು ಕಾರ್ಯದರ್ಶಿ ಜಿ.ವಿ. ಹೆಗಡೆ ಉಪಸ್ಥಿತರಿದ್ದರು.
ಸಾಗರ ಮಾಜಿ ಶಾಸಕ ಹರತಾಳು ಹಾಲಪ್ಪ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶ್ರೀಗಳಿಂದ ಅನುಗ್ರಹ ಮಂತ್ರಾಕ್ಷತೆ ಸ್ವೀಕರಿಸಿದರು.