ಸಕಾರಾತ್ಮಕ ಚಿಂತನೆ ಜತೆ ಅಧ್ಯಯನಶೀಲರಾಗಿ

mdl 29-2a samarambha
ಮುಧೋಳದ ನಗರದ ಸಾಯಿ ನಿಕೇತನ ಸಮೂಹ ಶಿಕ್ಷಣ ಸಂಸ್ಥೆ ಮೈದಾನದಲ್ಲಿ ಭಾನುವಾರ ಆಯೋಜಿಸಿದ್ದ ಸಕಾರಾತ್ಮಕ ಚಿಂತನೆ ಮೂಲಕ ಸರಳ ಕಲಿಕೆ ಕಾರ್ಯಾಗಾರ ಸಾಯಿ ಸ್ಫೂರ್ತಿಗೆ ಗಣ್ಯರು ಚಾಲನೆ ನೀಡಿದರು. ರಾಜೇಶ ವಾಲಿ, ವಿದ್ಯಾ ವಾಲಿ, ಸಮೀರ ಮುಲ್ಲಾ, ಸಂಗಮೇಶ ನೀಲಗುಂದ, ವೆಂಕಟೇಶ ಪಾಟೀಲ ಮತ್ತಿತರರಿದ್ದಾರೆ.
Published on

ಮುಧೋಳ: ವಿದ್ಯಾರ್ಥಿಗಳು ಸಕಾರಾತ್ಮಕ ಚಿಂತನೆಗಳ ಮೂಲಕ ಮನಸ್ಸನ್ನು ಹತೋಟಿಯಲ್ಲಿಟ್ಟುಕೊಂಡು ಆಧುನಿಕ ಜಗತ್ತಿನ ಹೊಸ ಸವಾಲುಗಳನ್ನು ಸುಲಭವಾಗಿ ಎದುರಿಸಿ ಯಶಸ್ಸು ಸಾಧಿಸಬೇಕು ಎಂದು ಶಿಕ್ಷಣ ತಜ್ಞ ರಾಜೇಶ ವಾಲಿ ಹೇಳಿದರು.

ನಗರದ ಸಾಯಿನಿಕೇತನ ಸಮೂಹ ಶಿಕ್ಷಣ ಸಂಸ್ಥೆಯ ಮೈದಾನದಲ್ಲಿ ಭಾನುವಾರ ಆಯೋಜಿಸಿದ್ದ ಸಕಾರಾತ್ಮಕ ಚಿಂತನೆ ಮೂಲಕ ಸರಳ ಕಲಿಕೆ ಕಾರ್ಯಾಗಾರ ಸಾಯಿ ಸ್ಫೂರ್ತಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಮಕ್ಕಳು ಸಕಾರಾತ್ಮಕ ವಿಚಾರದ ಮೂಲಕ ಅಧ್ಯಯನದಲ್ಲಿ ತೊಡಗಿ ಉಂಟಾಗುವ ಸಂದೇಹಗಳನ್ನು ಪರಿಹರಿಸಿಕೊಳ್ಳಬೇಕು. ವಿದ್ಯಾರ್ಥಿ ಜೀವನ ವಿಲಾಸಿಯಾದರೆ ಬದುಕು ದುಸ್ತರವಾಗುತ್ತದೆ. ಆದ್ದರಿಂದ ಉತ್ತಮ ವಿಚಾರಗಳೊಂದಿಗೆ ಅಧ್ಯಯನಶೀಲಾರಾಗಬೇಕು. ವಿದ್ಯಾರ್ಥಿಗಳ ಆಶೋತ್ತರ ಈಡೇರಿಸಲು ಇಂತಹ ವ್ಯಕ್ತಿತ್ವ ವಿಕಸನ ಕಾರ್ಯಾಗಾರ ಪೂರಕವಾಗಿದೆ ಎಂದರು.

ಬಿಇಓ ಸಮೀರ ಮುಲ್ಲಾ ಮಾತನಾಡಿ, ನಾಡಿನ ಹೆಸರಾಂತ ಶಿಕ್ಷಣ ತಜ್ಞರು ಭಾಗವಹಿಸಿ ಮಾರ್ಗದರ್ಶನ ನೀಡುತ್ತಿರುವ ಈ ಕಾರ್ಯಾಗಾರದಿಂದ ವಿದ್ಯಾರ್ಥಿಗಳು ಅಧ್ಯಯನ ಕೌಶಲ ಹೆಚ್ಚಿಸಿಕೊಂಡು ಪ್ರಯೋಜನ ಪಡೆಯಬೇಕು ಎಂದರು.

ಮಂಗಳೂರ ಯುನಿವರ್ಸಲ್ ನಾಲೆಜ್‌ನ ಎಸ್. ಸುಬ್ರಮಣ್ಯಂ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.

ಸಿಆರ್‌ಪಿಒ ಅಡಿವೆಪ್ಪ ಛಬ್ಬಿ, ಶ್ರೀ ಶಿರಡಿ ಸಾಯಿ ಶಿಕ್ಷಣ ಸಂಸ್ಥೆ ಅಧ್ಯಕ್ಷೆ ವಿದ್ಯಾ ವಾಲಿ, ಬಿಆರ್‌ಪಿ ಸಂಗಮೇಶ ನೀಲಗುಂದ, ಪ್ರಾಚಾರ್ಯ ಶಿವಕುಮಾರ, ಸಾಯಿನಿಕೇತನ ಕನ್ನಡ ಮಾಧ್ಯಮ ಶಾಲೆ ಮುಖ್ಯಸ್ಥ ವೆಂಕಟೇಶ ಪಾಟೀಲ, ಸಿಆರ್‌ಪಿ ಮಲ್ಲಿಕಾರ್ಜುನ ಹುಲಸೂರ ಇದ್ದರು.

ಮುಧೋಳ ಹಾಗೂ ರಬಕವಿ-ಬನಹಟ್ಟಿ ತಾಲೂಕಿನ 2,800ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net