

ಕಲಬುರಗಿ ಡಾ.ಚೆನ್ನಣ್ಣ ವಾಲೀಕಾರ ವೇದಿಕೆ: ಪದೇಪದೆ ಉತ್ತರ ಕರ್ನಾಟಕದಲ್ಲಿ ಬರ ಆವರಿಸುತ್ತಿದೆ. ನೀರಿನ ಬವಣೆ ನೀಗಿ ನಾವೆಲ್ಲರೂ ಸಂಪೂರ್ಣವಾಗಿ ಜಲ ವಿಷಯದಲ್ಲಿ ಸ್ವಾವಲಂಬಿ, ಸ್ವಾರ್ಥಿಗಳಾಗಬೇಕು ಎಂದು ಕೃಷಿ ತಜ್ಞ ಶಿವಾನಂದ ಕಳವೆ ಮನವಿ ಮಾಡಿದರು.
ಕೃಷಿ ಮತ್ತು ನೀರಾವರಿ ಗೋಷ್ಠಿಯಲ್ಲಿ ಜಲಸಂವರ್ಧನೆ ಮತ್ತು ನಿರ್ವಹಣೆ ಬಗ್ಗೆ ವಿಚಾರ ಮಂಡಿಸಿದ ಅವರು, ಪ್ರಸ್ತುತ ನಾವು ಅತ್ಯಂತ ಸಂದಿಗ್ಧ ಸ್ಥಿತಿಯಲ್ಲಿದ್ದೇವೆ. ಅದನ್ನು ಮೆಟ್ಟಿ ನಿಲ್ಲಬೇಕಿದೆ. ಭವಿಷ್ಯವನ್ನು ಇನ್ನಷ್ಟು ಸುಭದ್ರಗೊಳಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕಾದ ಅನಿವಾರ್ಯ ಸ್ಥಿತಿ ಎದುರಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ತೀವ್ರ ಬರದಿಂದ ಬಳಲುತ್ತಿರುವ ನಾವು ಮಳೆ ನೀರನ್ನೇ ಬಹುತೇಕ ಅವಲಂಬಿಸಿದ್ದೇವೆ. ಅಂತರ್ಜಲ ಮಟ್ಟ ಪಾತಾಳಕ್ಕಿಳಿದಿದೆ. ನೀರಿಗಾಗಿ ನಮ್ಮ ನೆಮ್ಮದಿ ಹಾಳಾಗುತ್ತಿದೆ. ಆದ್ದರಿಂದ ಓಡುವ ನೀರನ್ನು ತಡೆಯುವಂತೆ ಮಾಡಬೇಕು. ನಿಂತ ನೀರು ಇಂಗಿಸುವಂತೆ ಮಾಡಬೇಕು. ಆಗಲೇ ನಮ್ಮ ನಾಳೆಗಳು ನೆಮ್ಮದಿಯಿಂದ ಕೂಡಿರುತ್ತವೆ ಎಂದರು. ಅನ್ನದಾತರ ಸಮಸ್ಯೆ ಬಗ್ಗೆ ಸರ್ಕಾರ ಮಾತನಾಡಿದರೆ ಸಾಲದು. ಶಿಕ್ಷಕರು, ಉಪನ್ಯಾಸಕರು, ಮಠಾಧೀಶರು, ವಿದ್ಯಾರ್ಥಿಗಳು ಗಮನ ಹರಿಸಬೇಕು. ಸಾಮೂಹಿಕ ಪ್ರಯತ್ನದಿಂದ ಮಾತ್ರ ರೈತನ ಸಮಸ್ಯೆಗೆ ಪರಿಹಾರ ಸಿಗಲು ಸಾಧ್ಯ ಎಂದು ತಿಳಿಸಿದರು.