ಕೆಲಸದಲ್ಲಿ ಸಮಯ ಪ್ರಜ್ಞೆ, ತಾಳ್ಮೆಯಿರಲಿ: ಬಿಸಿಎಂ ಇಲಾಖೆಯ ಜಿಲ್ಲಾ ಅಧಿಕಾರಿ ರಾಘವೇಂದ್ರ

10
Published on

ಮೈಸೂರು: ನಿಲಯಪಾಲಕರು, ಅಡುಗೆಯವರು ನಿಮ್ಮ ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಸಮಯಪ್ರಜ್ಞೆಯಿಂದ, ತಾಳ್ಮೆಯಿಂದ ಆದರ್ಶ ವ್ಯಕ್ತಿಗಳಾಗಿ ಆತ್ಮತೃಪ್ತಿಯಿಂದ ಕೆಲಸ ಮಾಡಬೇಕು. ಸರ್ಕಾರಕ್ಕೆ ಇಲಾಖೆಗೆ ಒಳ್ಳೆಯ ಹೆಸರು ತರಬೇಕು ಎಂದು ಬಿಸಿಎಂ ಇಲಾಖೆಯ ಜಿಲ್ಲಾ ಅಧಿಕಾರಿ ರಾಘವೇಂದ್ರ ಹೇಳಿದರು.

ಯಾದವಗಿರಿಯ ಶ್ರೀರಾಮಕೃಷ್ಣ ಆಶ್ರಮದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಡುಗೆಯವರು ಹಾಗೂ ನಿಲಯಪಾಲಕರಿಗಾಗಿ ಮೂರು ದಿನಗಳ ಕಾಲ ಆಯೋಜಿಸಿದ್ದ ವಿಶೇಷ ಪುನಶ್ಚೇತನ ಕಾರ್ಯಾಗಾರದ ಸಮಾರೋಪದಲ್ಲಿ ಪ್ರಮಾಣ ಪತ್ರ ವಿತರಿಸಿ ಅವರು ಮಾತನಾಡಿದರು.

ಶಿಬಿರದಲ್ಲಿ 300ಕ್ಕೂ ಹೆಚ್ಚು ಜನರು ಭಾಗವಹಿಸಿದ್ದು, ಶಿಬಿರದಲ್ಲಿ ನೀಡಿದ ತರಬೇತಿಯನ್ನು ಚಾಚೂ ತಪ್ಪದೆ ಅಳವಡಿಸಿಕೊಳ್ಳಬೇಕು. ಈ ಮೂಲಕ ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಸಮಯ ಪ್ರಜ್ಞೆ, ತಾಳ್ಮೆಯಿಂದ ಕಾರ್ಯ ನಿರ್ವಹಿಸಿ ಎಂದರು.

ಕಾರ್ಯಾಗಾರದಲ್ಲಿ ದಾಖಲೆಗಳ ನಿರ್ವಹಣೆ, ಆಸ್ತಿಗಳ ನಿರ್ವಹಣೆ, ಸಮಯಪ್ರಜ್ಞೆ, ವಿದ್ಯಾರ್ಥಿಗಳು ಮತ್ತು ನಿಲಯಪಾಲಕರ ನಡುವಿನ ಆರೋಗ್ಯಕರ ಸಂಬಂಧ, ನಿಲಯದ ನಿರ್ವಹಣೆ, ಸ್ವಚ್ಛತೆ, ಕೈತೋಟ ನಿರ್ವಹಣೆ, ಆರೋಗ್ಯ ತಪಾಸಣೆ, ಗುಣಮಟ್ಟದ ಪೌಷ್ಠಿಕ ಆಹಾರ, ಸಾಂಕ್ರಾಮಿಕ ರೋಗ, ಅಗ್ನಿ ಅವಘಡ ತಡೆಗಟ್ಟುವಿಕೆ ಮತ್ತು ಸುರಕ್ಷತಾ ಕ್ರಮಗಳು, ಮಕ್ಕಳ ಹಕ್ಕುಗಳು, ಪೋಕ್ಸೋ ಕಾಯ್ದೆ ಮತ್ತು ಮಲ ಹೊರುವ ಪದ್ಧತಿ ನಿಷೇಧ ಕಾಯ್ದೆ ಕುರಿತು ನುರಿತ ವಿಷಯ ತಜ್ಞರು 3 ದಿನಗಳ ಕಾಲ ತರಬೇತಿ ನೀಡಿದ್ದಾರೆ ಎಂದು ವಿವರಿಸಿದರು.

ರಾಮಕೃಷ್ಣ ಆಶ್ರಮದ ಸಂಚಾಲಕರಾದ ಸ್ವಾಮಿ ಮಹಾಮೇದಾನಂದಜಿ ಮಾತನಾಡಿ, ನಿಲಯಪಾಲಕರು ಮಕ್ಕಳನ್ನು ತಾಯಿಯಂತೆ ನೋಡಿಕೊಳ್ಳಬೇಕು, ತಂದೆಯಂತೆ ದಂಡಿಸಬೇಕು, ವಿದ್ಯಾರ್ಥಿಗಳ ಮುಂದೆ ಅಹಂಕಾರ ತೋರಿಸಬಾರದು. ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ಅದ್ಭುತವಾದ ಶಕ್ತಿ ಇರುತ್ತದೆ. ಅದನ್ನು ಗುರುತಿಸಬೇಕು ಎಂದರು.

ತಾಲೂಕು ಕಲ್ಯಾಣಾಧಿಕಾರಿಗಳಾದ ಚಂದ್ರಕಲಾ, ಸ್ವರ್ಣಲತಾ, ಸತೀಶ್, ಸುಚೇಂದ್ರಕುಮಾರ್, ಸುಕನ್ಯಾ, ಶಶಿಕಲಾ, ಕೃಷ್ಣೇಗೌಡ, ಪ್ರೇಮ್‌ಕುಮಾರ್, ಮೇಘನಾ, ರಾಜಣ್ಣ, ನಿಲಯಪಾಲಕರಾದ ಜಗದೀಶ್‌ಕೋರಿ, ಮಹಾಲಕ್ಷ್ಮಿ, ವೀರಬಸಪ್ಪ, ರಮ್ಯಾ, ವಿನೋದ, ಪರಶುರಾಂ, ನಾಗರತ್ನ, ಪೂರ್ಣಿಮಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net