

ಮೈಸೂರು: ಜಿಲ್ಲೆಯಲ್ಲಿ ಬರ ಪರಿಸ್ಥಿತಿ ಉಲ್ಬಣಗೊಳ್ಳುತಿದ್ದು, ಕುಡಿಯುವ ನೀರಿನ ಅಭಾವ ಕಂಡು ಬರುತ್ತಿರುವ ಜಿಲ್ಲೆಯ 108 ಹಳ್ಳಿಗಳಿಗೆ ಕುಡಿಯುವ ನೀರು ಒದಗಿಸಲು ತಕ್ಷಣ ಕಾರ್ಯಪ್ರವೃತ್ತರಾಗಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಸೂಚಿಸಿದರು.
ಜಿಲ್ಲಾಡಳಿತ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಜಿಲ್ಲಾ ವಿಪತ್ತು ನಿರ್ವಹಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನಗರಪಾಲಿಕೆ, ಸ್ಥಳೀಯ ಸಂಸ್ಥೆಗಳು, ಗ್ರಾಮ ಪಂಚಾಯಿತಿ ಹಾಗೂ ಕುಡಿಯುವ ನೀರು ಸರಬರಾಜು ಇಲಾಖೆಯ ಇಂಜಿನಿಯರ್‌ಗಳು ತಮ್ಮ ವ್ಯಾಪ್ತಿಯಲ್ಲಿ ಬರುವ ಜಲಮೂಲಗಳ ಸಂರಕ್ಷಣೆ, ನಿರ್ವಹಣೆ ಹಾಗೂ ದುರಸ್ತಿ ಕಾರ್ಯಗಳನ್ನು ಕೈಗೊಂಡು ಜನ, ಜಾನುವಾರುಗಳಿಗೆ ನೀರು ಒದಗಿಸಬೇಕು ಎಂದು ತಿಳಿಸಿದರು.
ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಇಲಾಖೆ ಕಾರ್ಯಪಾಲಕ ಇಂಜಿನಿಯರ್ ರಂಜಿತ್ ಮಾತನಾಡಿ, ನೀರಿನ ಕೊರತೆ ಇರುವ ಗ್ರಾಮಗಳಲ್ಲಿ ಖಾಸಗಿಯವರಿಂದ 9 ಬೋರ್‌ವೆಲ್‌ಗಳನ್ನು ಬಾಡಿಗೆಗೆ ತೆಗೆದುಕೊಳ್ಳಲಾಗಿದೆ. ಹಬ್ಬ, ವಿಶೇಷ ಜಾತ್ರೆ ಇರುವ ಹಳ್ಳಿಗಳಿಗೆ ಆ ಸಮಯದಲ್ಲಿ ಟ್ಯಾಂಕರ್ ಮೂಲಕ ನೀರು ಕೊಡಲಾಗಿದೆ. ಪಿರಿಯಾಪಟ್ಟಣದ 9 ವಾರ್ಡ್‌ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು ಟ್ಯಾಂಕರ್ ಮೂಲಕ ನೀರು ಕೊಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಬೋರ್‌ವೆಲ್ ಕೊರೆಸಲು ಅನುಮತಿ ಕಡ್ಡಾಯ: ಜಿಲ್ಲೆಯಲ್ಲಿ ಬೇಕಾಬಿಟ್ಟಿಯಾಗಿ ಕೊಳವೆಬಾವಿ ತೋಡಿಸಲಾಗುತ್ತದೆ ಎಂಬ ಮಾಹಿತಿ ಇದ್ದು, ಸಂಬಂಧಿಸಿದ ಪ್ರಾಧಿಕಾರಗಳ ಅನುಮತಿ ಇಲ್ಲದೆ ಬೋರ್‌ವೆಲ್ ಕೊರೆಸುವಂತಿಲ್ಲ. ಗ್ರಾಮ ಪಂಚಾಯಿತಿ, ಸ್ಥಳೀಯ ಸಂಸ್ಥೆಗಳಿಗೆ 25 ದಿನ ಮುಂಚಿತವಾಗಿ ಅನುಮತಿ ತೆಗೆದುಕೊಳ್ಳಬೇಕು ಹಾಗೂ ಖಾಸಗಿಯವರು ತೋಡಿಸುವ ಕೊಳವೆಬಾವಿಗಳು ಸಾರ್ವಜನಿಕ ಕೊಳವೆ ಬಾವಿಗಳಿಗಿಂತ 500 ಮೀ ಅಂತರದಲ್ಲಿರಬೇಕಾದುದು ಕಡ್ಡಾಯ ಎಂದು ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.
ವಿಫಲ ಕೊಳವೆ ಬಾವಿ ಮುಚ್ಚಿ
ವಿಫಲ ಕೊಳವೆ ಬಾವಿಗಳನ್ನು ತಕ್ಷಣ ಮುಚ್ಚಲು ಕ್ರಮವಹಿಸಬೇಕು. ವಿಜಯಪುರದಲ್ಲಿ ಆದಂತಹ ಘಟನೆಗಳು ಎಲ್ಲಿಯೂ ಮರುಕಳಿಸಬಾರದು. ಒಂದು ಗ್ರಾಮಕ್ಕೆ ಕೊಳವೆ ಬಾವಿ ತೋಡುವ ಲಾರಿ ಪ್ರವೇಶವಾದಾಗಲೇ ಅನುಮತಿ ಪಡೆದಿದ್ದಾರೆಯೇ ಎಂದು ಪರೀಕ್ಷಿಸಬೇಕು. ಒಂದು ವೇಳೆ ಕೊಳವೆ ಬಾವಿ ವಿಫಲವಾದರೆ ಅದನ್ನು ಸಂಪೂರ್ಣವಾಗಿ ಮುಚ್ಚುವ ಜವಾಬ್ದಾರಿ ಮಾಲೀಕರದೇ ಆಗಿರುತ್ತದೆ. ವಿಫಲ ಕೊಳವೆ ಬಾವಿ ಮುಚ್ಚದೇ ಅನಾಹುತಗಳು ಸಂಭವಿಸಿದರೆ ಸಂಬಂಧಿಸಿದ ವ್ಯಾಪ್ತಿಯ ಅಧಿಕಾರಿಗಳನ್ನು ನೇರ ಹೊಣೆಗಾರರನ್ನಾಗಿ ಮಾಡಿ ಅವರ ತಲೆದಂಡವಾಗಲಿದೆ ಎಂದು ಎಚ್ಚರಿಕೆ ನೀಡಿದರು.
ಕಾಲರಾ ತಡೆಯಲು ಕ್ರಮ
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕುಮಾರಸ್ವಾಮಿ ಮಾಹಿತಿ ನೀಡಿ, ಜಿಲ್ಲೆಯಲ್ಲಿ ಒಂದು ಕಾಲರಾ ಪ್ರಕರಣ ವರದಿಯಾಗಿದ್ದು, ಸುತ್ತಲಿನ 600 ಮನೆಗಳ ತಪಾಸಣೆ ಮಾಡಲಾಗಿದೆ. ಅಲ್ಲದೇ ಸುತ್ತಲಿನ ಪರಿಸರವನ್ನು ಸ್ವಚ್ಛತೆಯಿಂದಿಟ್ಟುಕೊಳ್ಳುವಂತೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ಮೇವು ಹೊರರಾಜ್ಯಗಳಿಗೆ ಹೋಗಬಾರದು: ಪಶುಸಂಗೋಪನಾ ಇಲಾಖೆಯ ಜಂಟಿ ನಿರ್ದೇಶಕ ಡಾ.ನಾಗರಾಜು ಮಾಹಿತಿ ನೀಡಿ, 3 ರಿಂದ 4 ವಾರಗಳಿಗಾಗುವಷ್ಟು ಮೇವಿನ ಲಭ್ಯತೆ ಇದ್ದು, ಈಗಾಗಲೇ 36 ಸಾವಿರ ಮೇವಿನ ಕಿಟ್ ನೀಡಲಾಗಿದೆ. ಮತ್ತೆ 36 ಸಾವಿರ ಕಿಟ್ ಬಂದಿದ್ದು ವಿತರಿಸಲು ಕ್ರಮಕೈಗೊಳ್ಳಲಾಗುವುದು ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ರೈತ ಮುಖಂಡರು ಕೆಲ ಗ್ರಾಮಗಳಲ್ಲಿ ಮೇವಿನ ಕೊರತೆಯಿದೆ ಎಂದು ಹೇಳುತ್ತಾರೆ. ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಮಸ್ಯೆಯಿರುವ ಹಳ್ಳಿಗಳಿಗೆ ಭೇಟಿ ನೀಡಬೇಕು. ಗಡಿ ಭಾಗಗಳಲ್ಲಿ ಮೇವು ಹೊರರಾಜ್ಯಗಳಿಗೆ ಹೋಗದಂತೆ ನೋಡಿಕೊಳ್ಳಿ ಎಂದು ನಿರ್ದೇಶನ ನೀಡಿದರು.
ಬಿಸಿಲಿನ ತೀವ್ರತೆ ಹಿನ್ನೆಲೆಯಲ್ಲಿ ಅನುಸರಿಸಬೇಕಾದ ಕ್ರಮಗಳ ಕುರಿತು ವ್ಯಾಪಕ ಪ್ರಚಾರ ಮಾಡಿಸಿ, ಹೊರಗಿನ ಬೀದಿ ಬದಿಯ ಆಹಾರ ಸೇವಿಸದಂತೆ ಅರಿವು ಮೂಡಿಸಿ, ಹೆಚ್ಚು ನೀರು ಕುಡಿಯುವುದು, ಹತ್ತಿ ಬಟ್ಟೆ ಧರಿಸುವಂತೆ ಮಾಹಿತಿ ನೀಡಿ. ಜನನಿಬಿಡ ಸ್ಥಳಗಳಲ್ಲಿ ಸಂಘ, ಸಂಸ್ಥೆಗಳಿಂದ ನೀರಿನ ಅರವಟ್ಟಿಗೆಗಳ ವ್ಯವಸ್ಥೆ ಮಾಡಿಕೊಡುವಂತೆ ಮನವಿ ಮಾಡಿ ಎಂದರು.
ಬರ ಪರಿಸ್ಥಿತಿ ಇರುವುದರಿಂದ ಬ್ಯಾಂಕಿನವರು ಸಾಲ ವಸೂಲಾತಿಯಲ್ಲಿ ಅಮಾನವೀಯವಾಗಿ ನಡೆದುಕೊಳ್ಳಬಾರದು ಎಂದು ಬ್ಯಾಂಕ್ ಸಿಬ್ಬಂದಿಗೆ ಸೂಚಿಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎಂ.ಗಾಯತ್ರಿ, ಅಪರ ಜಿಲ್ಲಾಧಿಕಾರಿ ಪಿ.ಶಿವರಾಜು ಇತರರು ಇದ್ದರು.