

ವಿಜಯಪುರ: ಭಾರತ ಸೇವಾದಳ, ಎನ್‌ಎಸ್‌ಎಸ್, ಎನ್‌ಸಿಸಿಯಂತಹ ಸಂಸ್ಥೆಗಳು ರಾಷ್ಟ್ರದ ಏಕತೆಯ ಜತೆಗೆ ಬಲಿಷ್ಠ ರಾಷ್ಟ್ರ ನಿರ್ಮಿಸಲು ನೆರವಾಗುತ್ತವೆ ಎಂದು ಶಾಲಾ ಶಿಕ್ಷಣ ಇಲಾಖೆ ಪ್ರಭಾರ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಎಸ್.ಜೆ. ಬಿರಾದಾರ ಹೇಳಿದರು.
ಭಾರತ ಸೇವಾದಳ ಜಿಲ್ಲಾ ಸಮಿತಿ ಹಾಗೂ ತಾಲೂಕು ಸಮಿತಿ ಮತ್ತು ಶಾಲಾ ಶಿಕ್ಷಣ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ನಗರದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ನಂ.24 ರಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಭಾರತ ಸೇವಾದಳ ಶಿಕ್ಷಕರ ಪುನಃಶ್ಚೇತನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಸೇವಾದಳದ ಮೂಲಕ ಶಾಲೆ, ಕಾಲೇಜು ವಿದ್ಯಾರ್ಥಿಗಳಲ್ಲಿ ದೇಶಪ್ರೇಮ, ಶಿಸ್ತು ಹಾಗೂ ರಾಷ್ಟ್ರ ಭಕ್ತಿ ಮೂಡಿಸುವಲ್ಲಿ ಸೇವಾದಳ ತರಬೇತಿ ಪಡೆದ ಶಿಕ್ಷಕರು ಕಾರ್ಯಪ್ರವೃತ್ತರಾಗಬೇಕು ಎಂದು ಸಲಹೆ ನೀಡಿದರು.
ಗ್ರಾಮೀಣ ವಲಯದ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಸೋಮಶೇಖರ ಬಿರಾದಾರ ಮಾತನಾಡಿ, ಮಕ್ಕಳಲ್ಲಿ ಸೇವಾ ಮನೋಭಾವದ ಮಾನವೀಯ ಪ್ರಜ್ಞೆ ಬೆಳೆಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದರು.
ಭಾರತ ಸೇವಾದಳದ ತಾಲೂಕು ಅಧ್ಯಕ್ಷ ಶಿವನಗೌಡ ಪಾಟೀಲ(ಬಬಲಾದ) ಅಧ್ಯಕ್ಷತೆ ವಹಿಸಿ ಮಾತನಾಡಿ, ಶಾಲಾ ಶಿಕ್ಷಣ ಇಲಾಖೆಯ ಅಂಗ ಸಂಸ್ಥೆಯಾದ ಭಾರತ ಸೇವಾದಳವು ವಿದ್ಯಾರ್ಥಿಗಳಲ್ಲಿ ಶಿಸ್ತು, ಸಮಯ ಪ್ರಜ್ಞೆ, ರಾಷ್ಟ್ರ ರಕ್ಷಣೆಯ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಜಿಲ್ಲೆಯ ವಿವಿಧೆಡೆ ಹಲವಾರು ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ ಎಂದು ಮಾಹಿತಿ ನೀಡಿದರು.
ಶಿಕ್ಷಣ ಸಂಯೋಜಕ ಎಲ್.ಎಸ್. ಬಿರಾದಾರ ಮಾತನಾಡಿದರು. ತಾಲೂಕು ಕಾರ್ಯದರ್ಶಿ ಎಸ್.ಎಸ್. ಬ್ಯಾಕೋಡ, ಸೇವಾದಳ ವಲಯ ಸಂಘಟಕ ನಾಗೇಶ ಡೋಣೂರ, ಶಾಲಾ ಮುಖ್ಯ ಶಿಕ್ಷಕ ವಿ.ಆರ್. ಹಾಲವರ, ಮತ್ತಿತರರಿದ್ದರು.
ಆರ್.ವಿ, ಚವಾಣ ಸ್ವಾಗತಿಸಿದರು. ಎಂ.ಎಂ. ತೆಲಗಿ ನಿರೂಪಿಸಿದರು. ಅನೀಲ ಖುದಾನಪುರ ವಂದಿಸಿದರು. ಶಿಬಿರದಲ್ಲಿ 50 ಜನ ಸೇವಾದಳ ಶಿಕ್ಷಕರು ಭಾಗವಹಿಸಿದ್ದರು.