

ಹುನಗುಂದ: ಸಾಲದ ಸುಳಿಯಲ್ಲಿ ಸಿಕ್ಕು ನವಜೀವನದ ಸಂತಸವನ್ನು ಕಳೆದುಕೊಳ್ಳಬಾರದು. ಸನಾತನ ಕಾಲದಿಂದ ದೇವರ ಮೇಲೆ ನಂಬಿಕೆ ಇಟ್ಟ ನಾವು ಜಾತ್ರೆ ಹಬ್ಬ ಹರಿದಿನಗಳಲ್ಲಿ ನಡೆಸುವ ಸಾಮೂಹಿಕ ವಿವಾಹದಲ್ಲಿ ಮದುವೆಯಾಗಿ ಸುಂದರ ಬದುಕು ರೂಪಿಸಿಕೊಂಡು ಚಿಕ್ಕ ಚೊಕ್ಕ ಸಂಸಾರ ನಡೆಸಬೇಕು ಎಂದು ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು.
ಸಮೀಪದ ಅಮರಾವತಿ ಗ್ರಾಮದ ಬೈಲ ಬಸವೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ಹಮ್ಮಿಕೊಂಡ ಸಾಮೂಹಿಕ ವಿವಾಹ ಸಮಾರಂಭವನ್ನು ಅವರು ಉದ್ಘಾಟಿಸಿ ಮಾತನಾಡಿದ ಅವರು, ಹಿರಿಯರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಜಾತ್ರೆ ಮತ್ತು ವಿವಿಧ ಕಾರ್ಯಕ್ರಮಗಳಲ್ಲಿ ಹಮ್ಮಿಕೊಳ್ಳುವ ಉಚಿತ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಮದುವೆಯಾಗಿ ನಾಡಿನ ಹರಗುರು ಚರಮೂರ್ತಿಗಳ ಆಶೀರ್ವಾದ ಪಡೆಯುತ್ತಿರುವವರು ನಿಜವಾಗಿ ಪುಣ್ಯವಂತರು ಎಂದು ತಿಳಿಸಿದರು.
ವಿಶ್ರಾಂತ ಬ್ಯಾಂಕ್ ವ್ಯವಸ್ಥಾಪಕ ಟಿ.ಎಸ್. ಎಡ್ಡೇರ ಮಾತನಾಡಿದರು. ಹರಸೂರ ಪರ್ವತಲಿಂಗೇಶ್ವರ ಸಂಸ್ಥಾನಮಠದ ಸಿದ್ದರಾಮ ಶಿವಾಚಾರ್ಯರು, ಎಪಿಎಂಸಿ ಮಾಜಿ ಸದಸ್ಯ ಅಂದಾನೆಪ್ಪ ಹವಾಲ್ದಾರ, ತಾಪಂ ಮಾಜಿ ಅಧ್ಯಕ್ಷ ಅಮೀನಪ್ಪ ಸಂದಿಗವಾಡ, ಬಸವರಾಜ ಗೌಡರ, ಶರಣಬಸಪ್ಪ ಬಂಡೆಪ್ಪನವರ, ಮೃತ್ಯುಂಜಯ ಕೊಪ್ಪರದ, ನಿಂಗಪ್ಪ ಅಮರಾವತಿ ಉಪಸ್ಥಿತರಿದ್ದರು.
5 ನವ ಜೋಡಿಗಳು ದಾಂಪತ್ಯ ಜೀವನಕ್ಕೆ ಪ್ರವೇಶಿಸಿದರು. ಗ್ರಾಮದಲ್ಲಿ ನವ ಜೋಡಿಗಳನ್ನು ಮೆರವಣಿಗೆ ಮಾಡಲಾಯಿತು. ನಿವೃತ್ತ ಶಿಕ್ಷಕ ಜಗದೀಶ ಪತ್ತಾರ ಸ್ವಾಗತಿಸಿ ವಂದಿಸಿದರು.