

ಹುಕ್ಕೇರಿ: ಪಟ್ಟಣದ ಸಮಗ್ರ ಅಭಿವೃದ್ಧಿಗೆ ಸದಸ್ಯರು ಕೈಜೋಡಿಸಬೇಕು. ಬಾಕಿ ಉಳಿದಿರುವ ಕಾರ್ಯಗಳನ್ನು 15 ದಿನದೊಳಗಾಗಿ ಸರಿಪಡಿಸಿ ಜನರಿಗೆ ಬೇಕಾದ ದಾಖಲೆಗಳನ್ನು ಒದಗಿಸಬೇಕು. ತಪ್ಪಿದಲ್ಲಿ ಸಂಬಂಧಿಸಿದವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ನಿಖಿಲ್ ಕತ್ತಿ ಎಚ್ಚರಿಸಿದರು.
ಇಲ್ಲಿನ ಪುರಸಭೆ ಸಭಾಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿ, ಸಂಭವನೀಯ ಪ್ರವಾಹ ಪರಿಸ್ಥಿತಿ ಎದುರಿಸಲು ಅಧಿಕಾರಿಗಳು ಸನ್ನದ್ಧರಾಗಬೇಕು. ಹಿರಣ್ಯಕೇಶಿ ನದಿಯಿಂದ ನೆರೆ ಹಾವಳಿಗೆ ತುತ್ತಾಗುವ 26 ಗ್ರಾಮಗಳಲ್ಲಿ ಪ್ರದೇಶ ಗುರುತಿಸಿ ಜನ-ಜಾನುವಾರು ಸ್ಥಳಾಂತರಕ್ಕೆ ಕ್ರಮ ವಹಿಸಬೇಕು. ಕಾಳಜಿ ಕೇಂದ್ರ, ಗೋಶಾಲೆ ತೆರೆಯಬೇಕು ಎಂದು ಸೂಚಿಸಿದರು.
ಸದಸ್ಯರ ಆರೋಪ: ಸ್ಥಳೀಯ ನಿವಾಸಿಗಳ ಮನೆ ಪಹಣಿ, ತೆರಿಗೆ, ಕಟ್ಟಡ ಪರವಾನಿಗೆ ಸೇರಿ ಹಲವಾರು ಕೆಲಸಗಳಿಗೆ ಪುರಸಭೆ ಅಧಿಕಾರಿ ಮತ್ತು ಸಿಬ್ಬಂದಿ ಸರಿಯಾಗಿ ಸ್ಪಂದಿಸದೆ ಕಾಲಹರಣ ಮಾಡುತ್ತಿದ್ದಾರೆ. ಸಾರ್ವಜನಿಕರನ್ನು ವಿನಾಕಾರಣ ಸತಾಯಿಸುತ್ತಿದ್ದಾರೆ. ಅಧಿಕಾರಿ ಮತ್ತು ಸಿಬ್ಬಂದಿ ವರ್ತನೆಯಿಂದ ತೆರಿಗೆ ವಸೂಲಿಯಲ್ಲಿ ಹಿನ್ನಡೆ ಆಗಿದೆ. ಪೌರ ಕಾರ್ಮಿಕರು ಮತ್ತು ಹೊರಗುತ್ತಿಗೆ ನೌಕರರಿಗೆ ಸಮಯ ಪರಿಪಾಲನೆ ಇಲ್ಲದಂತಾಗಿದೆ. ಸಮರ್ಪಕ ಕಸ ವಿಲೇವಾರಿ ಕಾರ್ಯ ನಡೆಯುತ್ತಿಲ್ಲ. ಜನನ-ಮರಣ ಪತ್ರ ನೀಡಲು ಸತಾಯಿಸುತ್ತಿದ್ದಾರೆ. ಅಭಿವೃದ್ಧಿ ಕೆಲಸಗಳಿಗೆ ಗ್ರಹಣ ಹಿಡಿದಂತಾಗಿದೆ ಎಂದು ದೂರಿದರು.\
ಪಟ್ಟಣದ ವಿವಿಧ ಕಡೆಗಳಲ್ಲಿ ಅತಿಕ್ರಮಣ ಆಗಿರುವ ಜಾಗವನ್ನು ತೆರವುಗೊಳಿಸಬೇಕು. ಪುರಸಭೆಯಲ್ಲಿ ಏಜೆಂಟರ ಹಾವಳಿ ಮೀತಿಮೀರಿದೆ. 15ನೇ ಹಣಕಾಸು ಆಯೋಗ, ನಗರೋತ್ಥಾನ ಯೋಜನೆ, ಎಸ್‌ಡಿಪಿ ಯೋಜನೆಯಡಿ ಕೈಗೆತ್ತಿಕೊಂಡ ವಿವಿಧ ಕಾಮಗಾರಿಗಳನ್ನು ಪುರಸಭೆ ಅಧಿಕಾರಿಗಳು ಆರಂಭಿಸುತ್ತಿಲ್ಲ ಎಂದು ಆರೋಪಿಸಿದರು.
ತಹಸೀಲ್ದಾರ್ ಮಂಜುಳಾ ನಾಯಕ, ಇಒ ಪ್ರವೀಣ ಕಟ್ಟಿ, ಸಿಪಿಐ ಮಹಾಂತೇಶ ಬಸಾಪುರ, ವ್ಯವಸ್ಥಾಪಕ ಅವಿನಾಶ ಹೊಳೆಪ್ಪಗೋಳ, ಯೋಜನಾಧಿಕಾರಿ ಪ್ರಶಾಂತ ಮುನ್ನೋಳಿ, ನರೇಗಾ ಸಹಾಯಕ ನಿರ್ದೇಶಕ ರಾಜು ಢಾಂಗೆ, ಮುಖ್ಯಾಧಿಕಾರಿ ಕಿಶೋರ ಬೆಣ್ಣಿ, ಮಾಜಿ ಅಧ್ಯಕ್ಷ ಎ.ಕೆ.ಪಾಟೀಲ, ಮಾಜಿ ಉಪಾಧ್ಯಕ್ಷ ಆನಂದ ಗಂಧ, ಸದಸ್ಯರಾದ ರಾಜು ಮುನ್ನೋಳಿ, ಮಹಾಂತೇಶ ತಳವಾರ, ಇಮ್ರಾನ್ ಮೋಮಿನ್, ಚಂದು ಮುತ್ನಾಳೆ, ಗಜಬರ ಮುಲ್ಲಾ, ಶಬನಾ ಡಲಾಯತ್, ಪರೀದಾ ಮುಲ್ಲಾ, ರುಕ್ಮಿಣಿ ಹಳಿಜೋಳ, ರೇಖಾ ಚಿಕ್ಕೋಡಿ ಇತರರಿದ್ದರು.