

ಬೆಳಗಾವಿ: ಜಿಲ್ಲೆಯಲ್ಲಿ ಸಂಭವನೀಯ ಪ್ರವಾಹ ಹಿನ್ನೆಲೆಯಲ್ಲಿ ಈಗಾಗಲೇ ಮುಂಜಾಗ್ರತಾ ಕ್ರಮವಾಗಿ ಗುರುತಿಸಲಾಗಿರುವ 427 ಕಾಳಜಿ ಕೇಂದ್ರಗಳಿಗೆ ತಹಸೀಲ್ದಾರ್ ಭೇಟಿ ನೀಡಿ ಸಿದ್ಧತೆ ಪರಿಶೀಲಿಸಬೇಕು. ತುರ್ತು ಸಂದರ್ಭದಲ್ಲಿ ಗ್ರಾಮಸ್ಥರನ್ನು ತಕ್ಷಣ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಬೇಕು ಎಂದು ಜಿಲ್ಲಾಧಿಕಾರಿ ಮೊಹಮ್ಮದ ರೋಷನ್ ಸೂಚಿಸಿದರು.
ಜಿಲ್ಲೆಯಲ್ಲಿ ಉಂಟಾಗಬಹುದಾದ ಅತಿವೃಷ್ಟಿ/ಪ್ರವಾಹ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಜರುಗಿದ ಜಿಲ್ಲಾಮಟ್ಟದ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಅದಲ್ಲದೆ ಬೋಟ್‌ಗಳನ್ನು ಸದಾ ಸನ್ನದ್ಧವಾಗಿಡಬೇಕು. ಅಗತ್ಯ ಬಿದ್ದರೆ ಬಾಡಿಗೆ ಪಡೆಯಲು ಕ್ರಮ ವಹಿಸಬೇಕು ಎಂದರು. ಐದು ಬೋಟ್ ಖರೀದಿಸಿ ಅವುಗಳ ಬಳಕೆ ಕುರಿತು ಅಗ್ನಿಶಾಮಕ ದಳದ ಸಿಬ್ಬಂದಿಗೆ ತರಬೇತಿ ನೀಡಲಾಗುವುದು. ತುರ್ತು ಸಂದರ್ಭದಲ್ಲಿ ರಕ್ಷಣಾ ಕಾರ್ಯಾಚರಣೆಗೆ ಅನುಕೂಲವಾಗುವಂತೆ ಸರ್ಚ್‌ಲೈಟ್ ಒದಗಿಸಲಾಗುವುದು ಎಂದರು.
ನದಿ ತೀರದ ಗ್ರಾಮಗಳ ಕುರಿತು ತಹಸೀಲ್ದಾರ್‌ರಿಂದ ಮಾಹಿತಿ ಪಡೆದ ಜಿಲ್ಲಾಧಿಕಾರಿ, ಪ್ರವಾಹ ಬಾಧಿತಗೊಳ್ಳಲಿರುವ ಕೃಷ್ಣಾ, ಮಲಪ್ರಭಾ ಹಾಗೂ ಘಟಪ್ರಭಾ ನದಿತೀರದ ಗ್ರಾಮಗಳಲ್ಲಿ ತಹಸೀಲ್ದಾರ್, ನೋಡಲ್ ಅಧಿಕಾರಿಗಳು, ಅಗ್ನಿಶಾಮಕ ಮತ್ತು ಪೊಲೀಸ್ ಅಧಿಕಾರಿಗಳು ನಿರಂತರ ನಿಗಾವಹಿಸಬೇಕು ಎಂದು ತಿಳಿಸಿದರು.
ಮಂಗಾವತಿ, ಜುಗೂಳ, ಶಿರಗುಪ್ಪಿ, ಕುಸನಾಳ, ಬಳಜಿವಾಡ, ಮುಳವಾಡ, ಉಗಾರ್, ಯಡೂರ, ಮಾಂಜರಿ, ತಂಗಡಗಿ, ಶಿನಾಳ, ಝಂಜರವಾಡ, ಸತ್ತಿ, ಸವದಿ, ನಾಗನೂರ ಪಿ.ಕೆ., ಬಳವಾಡ, ಭಿಂವಶಿ, ಕೋಡಣಿ, ಭೋಜ, ಹೊನ್ನುರಗಿ ಹಾಗೂ ತೋಟದ ವಸತಿ ಸೇರಿ ಕಳೆದ ಬಾರಿ ಪ್ರವಾಹದಿಂದ ಬಾಧಿತಗೊಂಡಿದ್ದ ಗ್ರಾಮಗಳ ಮೇಲೆ ನಿರಂತರ ನಿಗಾವಹಿಸುವಂತೆ ತಿಳಿಸಿದರು. ಘಟಪ್ರಭಾ ನದಿ ಪ್ರವಾಹದಿಂದ ಬಾಧಿತಗೊಳ್ಳಲಿರುವ ಬಸನಾಳ, ಕೋಟನಾಳ, ಅದಲ್ಲದೆ ಸಂಕೇಶ್ವರದ ನದಿಗಲ್ಲಿ, ಕುಂಬಾರ ಓಣಿ ಮತ್ತಿತರ ಪ್ರದೇಶಗಳಲ್ಲಿಯೂ ನಿಗಾವಹಿಸಬೇಕು ಎಂದರು.
ನಮ್ಮ ಜಿಲ್ಲೆಯ ನದಿಗಳಿಂದ ಆಲಮಟ್ಟಿ ಜಲಾಶಯಕ್ಕೆ 1.80 ಲಕ್ಷ ಕ್ಯೂಸೆಕ್ ನೀರಿನ ಒಳಹರಿವು ಇದ್ದು, ಆಲಮಟ್ಟಿಯಿಂದ ಇಂದಿನಿಂದ 2 ಲಕ್ಷ ಕ್ಯೂಸೆಕ್ ನೀರು ಬಿಡುಗಡೆಗೊಳಿಸಲಿದ್ದಾರೆ. ಘಟಪ್ರಭಾ ಜಲಾಶಯದಲ್ಲಿ ಸದ್ಯದ ಶೇ.80 ಸಂಗ್ರಹ ಮಟ್ಟ ಆಧರಿಸಿ ಬುಧವಾರ 10 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ ಎಂದರು.
ಭೂಕುಸಿತದ ಬಗ್ಗೆ ಎಚ್ಚರಿಕೆ ವಹಿಸಲಿ:
ಭೂಕುಸಿತ ಉಂಟಾಗಿ ಅನಾಹುತ ಸಂಭವಿಸುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪಕ್ಕದ ಕಾರ್ಮಿಕರ ವಸತಿ ಶೆಡ್, ಡಾಬಾ, ಸಣ್ಣಪುಟ್ಟ ಅಂಗಡಿಗಳನ್ನು ತಕ್ಷಣ ತೆರವುಗೊಳಿಸಬೇಕು. ಬೆಳಗಾವಿ ನಗರದಲ್ಲಿಯೂ ಚರಂಡಿ, ಗಟಾರ ಸ್ವಚ್ಛಗೊಳಿಸಿ ನೀರು ಸರಾಗವಾಗಿ ಹರಿಯುವಂತೆ ಕ್ರಮಕೈಗೊಳ್ಳಬೇಕು. ನಗರ ಸೇರಿ ಪಾಶ್ವಾಪುರ, ಹಗೇದಾಳ, ಬಗರನಾಳ, ಅಂಕಲಗಿ ಮತ್ತಿತರ ಕಡೆ ಬಳ್ಳಾರಿ ನಾಲಾದಿಂದ ಉಂಟಾಗುವ ಸಮಸ್ಯೆಗಳ ಬಗ್ಗೆ ಅರಿತುಕೊಂಡು ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕು ಎಂದು ಡಿಸಿ ನಿರ್ದೇಶನ ನೀಡಿದರು.
ತುರ್ತು ಕಾರ್ಯಾಚರಣೆ;
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ಮಾತನಾಡಿ, ನದಿತೀರದ ಅನೇಕ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲಿಸಲಾಗಿದೆ. ಎನ್‌ಡಿಆರ್‌ಎಫ್, ಅಗ್ನಿಶಾಮಕದಳ ಹಾಗೂ ಪೊಲೀಸ್ ಅಧಿಕಾರಿಗಳಿಗೆ ಅಗತ್ಯ ಕ್ರಮಕ್ಕೆ ಸೂಚಿಸಲಾಗಿದೆ. ಕೆಲವು ಕಡೆ ಮೊಸಳೆಗಳು ಕಂಡುಬಂದಿವೆ. ಸಾರ್ವಜನಿಕರಲ್ಲಿ ಈ ಬಗ್ಗೆ ಅರಿವು ಮೂಡಿಸಬೇಕು. ನಾಗರಿಕರು ನೀರಿಗೆ ಇಳಿಯದಂತೆ ಎಚ್ಚರಿಕೆ ವಹಿಸಬೇಕು ಎಂದು ತಿಳಿಸಿದರು.
ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ಪ್ರೊಬೇಷನರಿ ಐಎಎಸ್ ಅಧಿಕಾರಿ ದಿನೇಶಕುಮಾರ್ ಮೀನಾ, ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ, ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಲ್ಲಿಕಾರ್ಜುನ ಕಲಾದಗಿ, ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು. ಉಪ ವಿಭಾಗಾಧಿಕಾರಿಗಳು, ತಹಸೀಲ್ದಾರ್‌ಗಳು, ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆಯಲ್ಲಿ ಪಾಲ್ಗೊಂಡಿದ್ದರು.