

ಹುಕ್ಕೇರಿ: ಕಳೆದ ನಾಲು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ತಾಲೂಕಿನ ಬಹುತೇಕ ನದಿ ತೀರದ ಗ್ರಾಮಗಳಿಗೆ ಪ್ರವಾಹ ಎದುರಾಗುವ ಸಂಭವ ಇದೆ. ಅಕಾರಿಗಳು ತಾಲೂಕು ಕೇಂದ್ರಗಳಲ್ಲಿ ವಾಸವಿದ್ದು ಪ್ರವಾಹ ಎದುರಿಸಲು ಸಕಲ ಸಿದ್ಧತೆ ಕೈಗೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಇಲ್ಲಿನ ತಾಪಂ ಸಭಾಭವನದಲ್ಲಿ ಮಂಗಳಾವಾರ ಜರುಗಿದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅವರು ಮಾತನಾಡಿ, ನೆರೆಹಾವಳಿಗೆ ಜನರು ತುತ್ತಾದಲ್ಲಿ ಕೂಡಲೇ ಕಾಳಜಿ ಕೇಂದ್ರ, ಜಾನುವಾರುಗಳಿಗೆ ಮೇವಿನ ವ್ಯವಸ್ಥೆ ಮಾಡಬೇಕು. ಕೆಲವು ಗ್ರಾಮದಲ್ಲಿ ಮಳೆಯಿಂದ ಮನೆಗಳು ಬಿದ್ದಿರುವ ವರಿದಯಾಗಿದೆ. ಪಿಡಿಒಗಳು ಪರೀಶಿಲಿಸಿ ಸೂಕ್ತ ಕ್ರಮಕ್ಕೆ ಮುಂದಾಗಬೇಕು.
ಸಂಕೇಶ್ವರ ಮತ್ತು ಹುಕ್ಕೇರಿ ಪಟ್ಟಣ ಹಾಗೂ ಗ್ರಾಮಗಳಲ್ಲಿರುವ ಗ್ರಂಥಾಲಯಗಳಿಗೆ ದಿನಪತ್ರಿಕೆ ವಿತರಣೆ ಆಗುತ್ತಿಲ್ಲ. ಗ್ರಂಥಪಾಲಕರು ನಕಲಿ ಬಿಲ್
ಸೃಷ್ಟಿಸಿ ಹಣ ಪಡೆದುಕೊಳ್ಳುತ್ತಿದ್ದಾರೆ. ಪಿಡಿಒಗಳು ಪರೀಶಿಲಿಸಿ ಬಿಲ್ ಸಂದಾಯ ಮಾಡಬೇಕೆಂದು ಸೂಚಿಸಿದರು. ಸರ್ಕಾರದ ವಿವಿಧ ಯೋಜನೆಗಳ ಅರ್ಜಿ ಸಲ್ಲಿಸುವುದಕ್ಕೆ ಗ್ರಾಪಂ ವ್ಯಾಪ್ತಿಯಲ್ಲಿ ತೆರೆಯಲಾಗಿದ್ದ, ಗ್ರಾಮ ಒನ್ ಕೇಂದ್ರಗಳು ಸ್ಥಗಿತವಾಗಿವೆ. ಕೆಲವಡೆ ಸಾರ್ವಜನಿಕರಿಗೆ ಸೇವೆ ಲಭ್ಯವಾಗುತ್ತಿಲ್ಲ. ಇದರಿಂದ ಖಾಸಗಿ ಕಂಪ್ಯೂಟರ್ ಕೇಂದ್ರದವರು ಜನರಿಂದ ಹೆಚ್ಚು ಹಣ ಪಡೆದುಕೊಳ್ಳುತ್ತಿದ್ದಾರೆ. ತಕ್ಷಣ ಎಲ್ಲ ಗ್ರಾಮಗಳಲ್ಲಿ ಗ್ರಾಮ ಒನ್ ಕೇಂದ್ರ ಆರಂಭಿಸಬೇಕು.
ಮಳೆಯಿಂದಾಗಿ ತಾಲೂಕಿನ ವಿವಿಧ ಕಡೆ ರಸ್ತೆಗಳಲ್ಲಿ ತಗ್ಗು-ಗುಂಡಿಗಳು ಬಿದ್ದಿದ್ದು, ರಾತ್ರಿ ವೇಳೆಯಲ್ಲಿ ಬೈಕ್
ಸವಾರರು ಸಂಚರಿಸುವುದು ಕಷ್ಟವಾಗುತ್ತಿದೆ. ಕೂಡಲೇ ಲೋಕೋಪಯೋಗಿ ಇಲಾಖೆ ಅಕಾರಿಗಳು ರಸ್ತೆ ದುರಸ್ತಿ ಮಾಡಿಸಬೇಕೆಂದು ಆದೇಶಿಸಿದರು.
ಜಿಪಂ ಉಪಕಾರ್ಯದರ್ಶಿ ಬಸವರಾಜ ಹೆಗ್ಗನಾಯಕ, ತಹಸೀಲ್ದಾರ್ ಸಂಜಯ ಇಂಗಳೆ, ಸಿಪಿಐ ಬಿ.ಆರ್.ಛಾಯಾಗೋಳ ಇತರರಿದ್ದರು.