ಗ್ರಾಹಕರ ಜತೆ ತಾಳ್ಮೆಯಿಂದ ವರ್ತಿಸಿ

20bhr 6
Published on

ಬಾಳೆಹೊನ್ನೂರು: ಮೆಸ್ಕಾಂ ಸಿಬ್ಬಂದಿ ಗ್ರಾಹಕರೊಂದಿಗೆ ತಾಳ್ಮೆಯಿಂದ ವರ್ತಿಸಬೇಕು ಎಂದು ಮೆಸ್ಕಾಂ ಸೂಪರಿಟೆಂಡೆಂಟ್ ಎಂಜಿನಿಯರ್ ಮಂಜುನಾಥ್ ಸಲಹೆ ನೀಡಿದರು.
ಪಟ್ಟಣದ ಮೆಸ್ಕಾಂ ಕಚೇರಿಯಲ್ಲಿ ಆಯೋಜಿಸಿದ್ದ ಗ್ರಾಹಕರ ಜನಸಂಪರ್ಕ ಸಭೆಯಲ್ಲಿ ಮಾತನಾಡಿದ ಅವರು, ಮೆಸ್ಕಾಂ ಕಾರ್ಯವ್ಯಾಪ್ತಿಯಲ್ಲಿ ಕೆಲವೊಂದು ಸಮಸ್ಯೆಗಳು ಎದುರಾದಾಗ ಸಿಬ್ಬಂದಿಗಳು ಏರುಧ್ವನಿಯಲ್ಲಿ ಮಾತನಾಡಿರುವ ಸಾಧ್ಯತೆಯಿದೆ. ತಮ್ಮ ಸಿಟ್ಟು ಕೋಪವನ್ನು ನಿಯಂತ್ರಣದಲ್ಲಿ ಇಟ್ಟುಕೊಂಡು ಗ್ರಾಹಕರೊಂದಿಗೆ ತಾಳ್ಮೆಯಿಂದ ಇರಬೇಕು. ಜನಸಂಪರ್ಕ ಸಭೆಯಲ್ಲಿ ಬಂದಿರುವ ವಿವಿಧ ದೂರುಗಳನ್ನು ದಾಖಲಿಸಿಕೊಂಡು ಅವುಗಳಿಗೆ ಪರಿಹಾರ ಒದಗಿಸುವ ಕಾರ್ಯ ಮಾಡಲಾಗುವುದು ಎಂದು ಹೇಳಿದರು.
ನಾಗರಿಕ ವೇದಿಕೆಯ ಹಿರಿಯಣ್ಣ ಮಾತನಾಡಿ, ಪಟ್ಟಣದ ಮೆಸ್ಕಾಂ ವ್ಯಾಪ್ತಿಯ ಹಲವು ಟಿಸಿಗಳು ಓವರ್‌ಲೋಡ್‌ನಿಂದ ಪದೇಪದೇ ವಿದ್ಯುತ್ ಕಡಿತಗೊಳ್ಳುತ್ತಿದೆ. ಇದರಿಂದ ಗ್ರಾಹಕರಿಗೆ ಸಮಸ್ಯೆಯಾಗುತ್ತಿದೆ. ಮೆಸ್ಕಾಂ ಕಚೇರಿ ಮುಂಭಾಗದ ಟಿಸಿಯಲ್ಲಿಯೇ ಇಂತಹ ಸಮಸ್ಯೆ ಹೆಚ್ಚಾಗಿದೆ ಎಂದು ದೂರಿದರು.
ಕಳೆದ ಎರಡು ತಿಂಗಳ ಹಿಂದೆ ವಸ್ತಾರೆ ಸಮೀಪ ವಿದ್ಯುತ್ ಟವರ್ ತುಂಡಾಗಿ ಆರು ದಿನ ವಿದ್ಯುತ್ ಇರಲಿಲ್ಲ. ಇದಕ್ಕೆ ಟವರ್ ಉಪಕರಣಗಳು ಇಲ್ಲದೇ ಇರುವುದು ಕಾರಣನಾ ಅಥವಾ ಸಿಬ್ಬಂದಿ ಕೊರತೆಯೇ ಕಾರಣಾನ ಎಂದು ಹಿರಿಯಣ್ಣ ಪ್ರಶ್ನಿಸಿದರು?ಉಪಕರಣಗಳ ಕೊರತೆ ಇದ್ದರೆ ಸಮಸ್ಯೆ ಹೇಳಿಕೊಳ್ಳಿ ನಾವು ಇಂಧನ ಸಚಿವರ ಬಗ್ಗೆ ಪ್ರಶ್ನಿಸಿ ಅಂತಹ ಸಮಸ್ಯೆ ಬಗೆಹರಿಸುತ್ತೇವೆ ಎಂದರು.
ಬಿ.ಕಣಬೂರು ಗ್ರಾಪಂ ಸದಸ್ಯ ಬಿ.ಸಿ.ಸಂತೋಷ್‌ಕುಮಾರ್ ಮಾತನಾಡಿ, ಜನಸಂಪರ್ಕ ಸಭೆ ಬಗ್ಗೆ ಗ್ರಾಪಂನವರಿಗೆ ಮೆಸ್ಕಾಂನವರು ಸರಿಯಾಗಿ ಮಾಹಿತಿ ನೀಡುತ್ತಿಲ್ಲ. ಜನರಿಗೂ ಕೂಡ ಸರಿಯಾದ ಮಾಹಿತಿ ದೊರೆಯುತ್ತಿಲ್ಲ. ಹೀಗಾದರೆ ವಿದ್ಯುತ್ ಸಮಸ್ಯೆ ಬಗ್ಗೆ ಜನರು ಅಧಿಕಾರಿಗಳ ಬಳಿ ಹೇಗೆ ಹೇಳಿಕೊಳ್ಳುವುದು.
ಮೆಸ್ಕಾಂ ಎಕ್ಸಿಕ್ಯೂಟಿವ್ ಎಂಜಿನಿಯರ್ ಸಿದ್ದೇಶ್, ಎಇಇ ಎಚ್.ಪಿ.ಗೌತಮ್, ಜೆಇ ಗಣೇಶ್, ಸಹಾಯಕ ಲೆಕ್ಕಾಧಿಕಾರಿ ಸತೀಶ್, ಗ್ರಾಪಂ ಸದಸ್ಯರಾದ ಸುಬ್ಬೇಗೌಡ, ಮಧುಸೂದನ್, ಪಿಡಿಓ ಪ್ರಸನ್ನ, ವಿದ್ಯುತ್ ಗುತ್ತಿಗೆದಾರ ಮಂಜುನಾಥ್ ತುಪ್ಪೂರು, ನಿರಂಜನ್, ರಾ.ವೆಂಕಟೇಶ್, ಸಂತೋಷ್ ಕ್ರಾಸ್ತಾ ಮತ್ತಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net