

ಕೂಡ್ಲಿಗಿ: ಗುಡೇಕೋಟೆ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭಾನುವಾರ ಭೇಟಿ ನೀಡಿದ್ದ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ, ಆಸ್ಪತ್ರೆಯ ಸುತ್ತಮುತ್ತಲಿನ ಸ್ವಚ್ಛತೆ, ಸೌಲಭ್ಯ, ರೋಗಿಗಳ ದಾಖಲಾತಿ, ಔಷಧಗಳ ಲಭ್ಯತೆ ಪರಿಶೀಲಿಸಿದರು.
ಇದನ್ನೂ ಓದಿ: ಸುಸಜ್ಜಿತ ಲ್ಯಾಬ್ ನಿರ್ಮಾಣದಿಂದ ರೋಗಿಗಳಿಗೆ ಅನುಕೂಲ
ವೈದ್ಯರು ಹಾಗೂ ಸಿಬ್ಬಂದಿ ಸರಿಯಾಗಿ ಸ್ಪಂದಿಸುತ್ತಿದ್ದಾರೆ ಎಂದು ರೋಗಿಗಳನ್ನು ಡಿಸಿ ಪ್ರಶ್ನಿಸಿದರು. ನಮ್ಮೊಂದಿಗೆ ವೈದ್ಯರು ಹಾಗೂ ಸಿಬ್ಬಂದಿ ಸರಿಯಾಗಿ ಮಾತನಾಡುವುದಿಲ್ಲ. ಸಕಾಲದಲ್ಲಿ ಬರುವುದಿಲ್ಲ ಎಂದು ರೋಗಿಯೊಬ್ಬರು ದೂರಿದರು.
ರೋಗಿಗಳೊಂದಿಗೆ ಸೌಜನ್ಯದಿಂದ ವರ್ತಿಸಿ, ಚಿಕಿತ್ಸೆ ನೀಡಬೇಕು. ಸರ್ಕಾರದಿಂದ ಪೂರೈಕೆಯಾಗುವ ಮಾತ್ರೆಗಳನ್ನು, ಚುಚ್ಚುಮದ್ದುಗಳನ್ನು ಸಮರ್ಪಕವಾಗಿ ನೀಡಬೇಕು. ಯಾವುದೇ ಕಾರಣಕ್ಕೂ ಹೊರಗಡೆ ತರಲು ಚೀಟಿ ಬರೆಯಬಾರದು ಎಂದು ಸಿಬ್ಬಂದಿಗೆ ಎಚ್ಚರಿಕೆ ನೀಡಿದರು.
ಜಿಲ್ಲಾ ಆರೋಗ್ಯಾಧಿಕಾರಿಗೆ ದೂರವಾಣಿ ಮೂಲಕ ಮಾತನಾಡಿ, ಸರ್ಕಾರಿ ಕೆಲಸದಲ್ಲಿ ಲೋಪವೆಸಗಿರುವ ಹಾಗೂ ರೋಗಿಗಳೊಂದಿಗೆ ಸೌಜನ್ಯದೊಂದಿಗೆ ವರ್ತನೆ ಮಾಡದ ಸಿಬ್ಬಂದಿಗೆ ಕಾರಣ ಕೇಳಿ ನೋಟೀಸ್ ನೀಡುವಂತೆ ನಿರ್ದೇಶನ ನೀಡಿದರು. ಗುಡೇಕೋಟೆ ಅತ್ಯಂತ ಹಿಂದುಳಿದ ಹೋಬಳಿ ಕೇಂದ್ರವಾಗಿದ್ದು,
ಕೂಲಿ ಕಾರ್ಮಿಕರು, ರೈತಾಪಿ ವರ್ಗದವರು ಅಧಿಕ ಸಂಖ್ಯೆಯಲ್ಲಿದ್ದಾರೆ. ವೈದ್ಯರು ಹಾಗೂ ಸಿಬ್ಬಂದಿ ರೋಗಿಗಳೊಂದಿಗೆ ಸರಿಯಾಗಿ ವರ್ತಿಸಲು ಸೂಚನೆ ನೀಡಬೇಕು. ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಬೇಕು ಎಂದು ಡಿಸಿ ಸೂಚನೆ ನೀಡಿದರು.