

ಹೊಳೆಆಲೂರ: ಸಮಾಜದ ಮೇಲಾಗುತ್ತಿರುವ ಅನ್ಯಾಯ ಕಡಿಮೆಯಾಗಬೇಕಾದರೆ ಶಿಕ್ಷಣ, ಸಂಘಟನೆ ಹಾಗೂ ಹೋರಾಟ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ರೋಣ ತಾಲೂಕು ಮಹರ್ಷಿ ವಾಲ್ಮೀಕಿ ಸಮಾಜದ ಅಧ್ಯಕ್ಷ ಬಸವರಾಜ ತಳವಾರ ಹೇಳಿದರು.
ಸಮೀಪದ ಮೇಲ್ಮಠ ಗ್ರಾಮದಲ್ಲಿ ಮಹರ್ಷಿ ವಾಲ್ಮೀಕಿ ಸಂಘದ ವತಿಯಿಂದ ಶನಿವಾರ ಏರ್ಪಡಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಹಿಂದುಳಿದ ಸಮುದಾಯಗಳ ಅಭಿವೃದ್ಧಿಗೆ ಸರ್ಕಾರ ಅನುಷ್ಠಾನಗೊಳಿಸಿರುವ ಯೋಜನೆಗಳನ್ನು ಸಮರ್ಪಕವಾಗಿ ಬಳಸಿಕೊಂಡು ಮಕ್ಕಳನ್ನು ಶಿಕ್ಷಣ ಹಾಗೂ ಸಂಸ್ಕಾರವಂತರನ್ನಾಗಿ ಬೆಳೆಸಬೇಕು ಎಂದರು.
ಶಿಕ್ಷಕ ಎಸ್.ಕೆ. ಆಡಿನ ಉಪನ್ಯಾಸ ನೀಡಿದರು. ಸಮಾಜ ಕಲ್ಯಾಣ ಇಲಾಖೆಯ ಗೀತಾ ಆಲೂರ ವಿವಿಧ ಯೋಜನೆ ಕುರಿತು ಮಾಹಿತಿ ನೀಡಿದರು. ರಾಚಯ್ಯ ಕಾಡದೇವರಮಠ ಸಾನ್ನಿಧ್ಯ ವಹಿಸಿದ್ದರು. ಕಸಾಪ ಹೋಬಳಿ ಘಟಕದ ಅಧ್ಯಕ್ಷ ವೀರಯ್ಯ ವಸ್ತ್ರದ, ವಾಲ್ಮೀಕಿ ಸಮಾಜದ ಉಪಾಧ್ಯಕ್ಷ ವೀರಣ್ಣ ತಳವಾರ, ಎಸ್.ಐ. ನೀಲಪ್ಪಗೌಡ್ರ, ಕುಮಾರ ಗೌಡನ್ನವರ, ಮಲ್ಲಿಕಾರ್ಜುನ ರಾಮಣ್ಣವರ, ಮಂಜುನಾಥ ಬಸರಕೋಡ, ಎಸ್.ಟಿ.ವಾಲ್ಮೀಕಿ, ಶಿವರಾಜ ತಳವಾರ ಇತರರಿದ್ದರು.