

ವಿಜಯಪುರ:ಮೇಷ್ಟ್ರು ವೃತ್ತಿ ಮಾಡಲು ಪುಣ್ಯ ಮಾಡಿರಬೇಕು. ಅದರಲ್ಲೂ ಕನ್ನಡ ಮೇಷ್ಟ್ರಾಗಲು ಅದೃಷ್ಟ ಮಾಡಿರಬೇಕು. ಕನ್ನಡಕ್ಕೆ ಕುತ್ತು ಬಂದಾಗಲೆಲ್ಲ ಕನ್ನಡ ಮೇಷ್ಟ್ರುಗಳು ಧ್ವನಿ ಎತ್ತುವ ಮೂಲಕ ಕನ್ನಡಕ್ಕಾಗಿ ಕೈ ಎತ್ತಿ ತಮ್ಮ ಕೈಗಳನ್ನು ಕಲ್ಪವೃಕ್ಷವನ್ನಾಗಿ ಮಾಡಿದ್ದಾರೆ ಎಂದು ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿವಿಯ ಕನ್ನಡ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ. ಎಂ. ನಾಗರಾಜ್ ಹೇಳಿದರು.
ನಗರ ಹೊರ ವಲಯದ ರಾಜ್ಯ ಮಹಿಳಾ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಸಭಾ ಭವನದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಕಾಲೇಜು ಕನ್ನಡ ಅಧ್ಯಾಪಕರ ಸಂದ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ಕನ್ನಡದ ಕೆಲಸಕ್ಕೆ ಎಂದೂ ಹಿಂದೇಟು ಹಾಕಬಾರದು. ಅನ್ನ ಕೊಟ್ಟ ಕನ್ನಡಕ್ಕೆ ಸದಾ ಋಣಿಯಾಗಿರಬೇಕು ಎಂದು ಅವರು ಸಲಹೆ ನೀಡಿದರು.
ಸಂದ ನೂತನ ಅಧ್ಯಕ್ಷರಾಗಿ ನೇಮಕಗೊಂಡ ಡಾ. ಯಶವಂತ ಕೊಕ್ಕನವರ ಮಾತನಾಡಿ, ಕನ್ನಡವೆಂದರೆ ಬರಿ ನುಡಿಯಲ್ಲ. ಅದರ ಹಿಂದೆ ಹಿರಿದಾದ ಅರ್ಥವಿದೆ. ಕನ್ನಡ& ಕನ್ನಡಿಗ&ಕರ್ನಾಟಕಕ್ಕೆ ಕರುಳ ಸಂಬಂಧ ಮತ್ತು ಕೊರಳ ಸಂಬಂಧವಿದೆ. ಕನ್ನಡ ಭಾಷೆ ಬಳಸಿ ಬೆಳೆಸುವ ಜತೆಗೆ ರಾಜ್ಯವನ್ನು ಸಂವರ್ಧನೆಗೊಳಿಸಲು ಪ್ರತಿಯೊಬ್ಬ ಕನ್ನಡಿಗನು ಸದಾ ಸಿದ್ದರಾಗಬೇಕು ಎಂದು ಕರೆ ನೀಡಿದರು.
ಹಿರಿಯ ಪ್ರಾಧ್ಯಾಪಕ ಡಾ. ಮಹೇಶ ಚಿಂತಾಮಣಿ ಮಾತನಾಡಿ, ಕನ್ನಡ ಅಧ್ಯಾಪಕರು ಕೌಶಲ್ಯ ಮತ್ತು ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಪಾಠ ಮಾಡಬೇಕು. ಕಾಲಕ್ಕೆ ತಕ್ಕ ಅಗತ್ಯ ಬದಲಾವಣೆಗಳನ್ನು ಪ್ರಾಧ್ಯಾಪಕರು ಮಾಡಿಕೊಳ್ಳದಿದ್ರೆ ಶಿಕ್ಷಣ ಕ್ರಮ ದಾರಿ ತಪ್ಪುತ್ತದೆ ಎಂದು ಸಲಹೆ ನೀಡಿದರು.
ಪ್ರಾಧ್ಯಾಪಕ ಡಾ. ನಾರಾಯಣ ಪವಾರ ಹಾಗೂ ಅಧ್ಯಕ್ಷತೆ ವಹಿಸಿದ್ದ ಕನ್ನಡ ಮೌಲ್ಯಮಾಪನದ ಚೇರ್ಮನ್ ಡಾ. ಸಿ. ಕೊಟ್ರಪ್ಪ ಮಾತನಾಡಿದರು. ಕನ್ನಡ ಅಧ್ಯಾಪಕರ ಸಂದ ಅಧ್ಯಕ್ಷರಿಗೆ ಹಾಗೂ ಸದಸ್ಯರಿಗೆ ಅಧಿಕಾರ ಹಸ್ತಾಂತರಿಸಲಾಯಿತು. ನಿವೃತ್ತ ಪ್ರಾಧ್ಯಾಪಕರು, ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಸಾಧನೆಗೈದ, ಪಿಎಚ್.ಡಿ., ಪದವಿ ಸೇರದಂತೆ ಸಂದ ನೂತನ ಸದಸ್ಯರಿಗೆ ಸನ್ಮಾನಿಸಲಾಯಿತು.
ಪ್ರೊ. ಸಿದ್ದಣ್ಣ ಹುಗಾರ ಪ್ರಾರ್ಥಿಸಿದರು. ಎಸ್.ಬಿ. ಗಾಜೀಪುರ ಸ್ವಾಗತಿಸಿದರು. ಡಾ. ಮಲ್ಲಿಕಾರ್ಜುನ ಮೇತ್ರಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಡಾ. ಸುಭಾಷ ಕನ್ನೂರ ನಿರೂಪಿಸಿದರು. ಡಾ. ಶರಣಮ್ಮ ಪಾಟೀಲ ವಂದಿಸಿದರು. ಡಾ. ನಾಗೇಂದ್ರ ಮಸೂತಿ, ಡಾ. ಜಿ.ವೈ. ನಂದಿಕೋಲಮಠ, ಬಸಮ್ಮ ಶಿಗ್ಗಾವಿ, ಶ್ರೀಕಾಂತ ಬ್ಯಾಳಿ, ಶ್ರೀಕಾಂತ ಪಾಟೀಲ, ಬಸಮ್ಮ ಗಂಗನಳ್ಳಿ ಮತ್ತಿತರರಿದ್ದರು.
ವಿಜಯಪುರದ ರಾಜ್ಯ ಮಹಿಳಾ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಸಭಾ ಭವನದಲ್ಲಿ ಕಾಲೇಜು ಕನ್ನಡ ಅಧ್ಯಾಪಕರ ಸಂದ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ನಡೆಯಿತು. ಡಾ.ಎಂ. ನಾಗರಾಜ್, ಡಾ. ಯಶವಂತ ಕೊಕ್ಕನವರ, ಡಾ. ನಾರಾಯಣ ಪವಾರ ಮತ್ತಿತರರಿದ್ದಾರೆ.