

ಗದಗ: ಜಿಲ್ಲೆಯಲ್ಲಿ ನಿಂರತರವಾಗಿ ಸುರಿಯುತ್ತಿರುವ ಮಳೆಯಿಂದ ಪ್ರವಾಹ ಹಾಗೂ ಅತಿವೃಷ್ಟಿ ಪರಿಸ್ಥಿತಿಯನ್ನು ಕೇಂದ್ರ ಸ್ಥಾನದಲ್ಲಿಯೇ ಇದ್ದು ಸಮರ್ಪಕವಾಗಿ ನಿರ್ವಹಿಸುವಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಅವರು ಸೂಚನೆ ನೀಡಿದರು.
ಜಿಲ್ಲೆಯ ಎಲ್ಲ ಪಿಡಿಒಗಳು, ತಾಪಂ ಹಾಗೂ ಜಿಪಂ ಅಧಿಕಾರಿಗಳೊಂದಿಗೆ ಶುಕ್ರವಾರ ವಿಡಿಯೋ ಸಂವಾದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ನಿರಂತರ ಮಳೆಯಿಂದಾಗಿ ತೆಗ್ಗು ಪ್ರದೇಶಗಳಿಗೆ ನೀರು ನುಗ್ಗುವ ಸಂಭವವಿರುತ್ತದೆ. ತೆಗ್ಗು ಪ್ರದೇಶದಲ್ಲಿನ ಜನ-ಜಾನುವಾರುಗಳನ್ನು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸಂದರ್ಭಾನುಸಾರ ಪಿಡಿಒಗಳು ತಿಳಿವಳಿಕೆ ನೀಡಬೇಕು. ಶಿಥಿಲಾವಸ್ಥೆ ಯಲ್ಲಿರುವ ಮನೆಗಳಲ್ಲಿ ವಾಸಿಸುವವರನ್ನು ಗುರುತಿಸಿ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಮನ ಒಲಿಸುವುದರ ಮೂಲಕ ಸಂಭವನೀಯ ಜೀವ ಹಾನಿ ತಡೆಗಟ್ಟಲು ಅಗತ್ಯವಿರುವ ಎಲ್ಲ ಮುಂಜಾಗ್ರತೆ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ತಿಳಿಸಿದರು.
ಸಾಂಕ್ರಾಮಿಕ ರೋಗಗಳು ಹರುಡುವ ಸಂಭವವಿದ್ದು ಜನ ಸಾಮಾನ್ಯರು ಶುದ್ಧ ಕುಡಿಯುವ ನೀರಿನ ಬಳಕೆ ಮಾಡುವಂತೆ ಅರಿವು ಮೂಡಿಸಬೇಕು. ಕುಡಿಯುವ ನೀರಿನ ಶುದ್ಧತೆ ಕುರಿತು ಅನುಮಾನವಿದ್ದಲ್ಲಿ ತಕ್ಷಣವೇ ನೀರನ್ನು ಪರೀಕ್ಷೆಗೊಳಪಡಿಸಬೇಕು. ಮಳೆ ನೀರು ಸರಾಗವಾಗಿ ಹರಿದು ಹೋಗಲು ಗ್ರಾಮಗಳಲ್ಲಿನ ಚರಂಡಿ, ಕಾಲುವೆಗಳನ್ನು ಸ್ವಚ್ಛಗೊಳಿಸಬೇಕು.
ರೈತರು ಜಾನುವಾರುಗಳನ್ನು ವಿದ್ಯುತ್ ಕಂಬಗಳಿಗೆ ಕಟ್ಟದಂತೆ ಹಾಗೂ ಗ್ರಾಮಗಳಲ್ಲಿನ ಕೆರೆ, ನದಿ ದಡಕ್ಕೆ ಜಾನುವಾರುಗಳನ್ನು ಒಯ್ಯದಂತೆ ಜಾಗೃತಿ ವಹಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ತಾಪಂ ಇಒಗಳು ಆಯಾ ವ್ಯಾಪ್ತಿಯ ಗ್ರಾಪಂಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ವಹಣೆಗೆ ಯೋಜನೆ ರೂಪಿಸಿಕೊಂಡು ಎಲ್ಲ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಬೇಕು. ಹಾಗೂ ಗ್ರಾಮಗಳ ಪ್ರವಾಹ ಪರಿಸ್ಥಿತಿ ಕುರಿತು ಮೇಲಧಿಕಾರಿಗಳಿಗೆ ಕಾಲ ಕಾಲಕ್ಕೆ ಮಾಹಿತಿ ನೀಡಬೇಕು ಎಂದು ಸೂಚಿಸಿದರು.
ಜಿಪಂ ಉಪಕಾರ್ಯದರ್ಶಿ ಸಿ.ಆರ್. ಮುಂಡರಗಿ, ಮುಖ್ಯ ಯೋಜನಾಧಿಕಾರಿ ವಾಗೀಶ, ಯೋಜನಾ ನಿರ್ದೇಶಕ ಎಂ.ವಿ.ಚಳಗೇರಿ ಇದ್ದರು.