

ಕಡೂರು: ನೀರಿನ ಮಹತ್ವ ತಿಳಿದಾಗ ಕೃಷಿಕರ ಬದುಕು ಹಸನಾಗುತ್ತದೆ. ಬೆಳೆಗೆ ಅಗತ್ಯವಿದ್ದಷ್ಟು ನೀರನ್ನು ನೀಡುವ ಮೂಲಕ ನೀರಿನ ಬಳಕೆಯಲ್ಲಿ ಮಿತವ್ಯಯ ಸಾಧಿಸುವ ಅಗತ್ಯವಿದೆ ಎಂದು ಸೂಕ್ಷ್ಮ ನೀರಾವರಿ ತಜ್ಞ ದಾಶರಥಿ ಅಯ್ಯಂಗಾರ್ ಹೇಳಿದರು.
ಪಟ್ಟಣದ ಎಪಿಎಂಸಿ ಪ್ರಾಂಗಣದಲ್ಲಿ ಮಂಗಳವಾರ ಕೃಷಿ ಇಲಾಖೆ ವತಿಯಿಂದ 2024-25ನೇ ಸಾಲಿನ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಸೂಕ್ಷ್ಮ ನೀರಾವರಿ ಯೋಜನೆಯಡಿ ಏರ್ಪಡಿಸಿದ್ದ ರೈತರೊಂದಿಗೆ ತರಬೇತಿ ಕಾರ್ಯಕ್ರಮದಲ್ಲಿ ಪ್ರಾತ್ಯಕ್ಷಿಕೆ ನೀಡಿ ಅವರು, ಹನಿ ಅಥವಾ ಸೂಕ್ಷ್ಮ ನೀರಾವರಿ ಏಕೆ ಬೇಕು ಎಂಬುದನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು. ಯಾವುದೇ ಬೆಳೆಯಾದರೂ ಅದಕ್ಕೆ ಅಗತ್ಯವಿರುವಷ್ಟು ನೀರನ್ನು ನೀಡಬೇಕು. ಇಸ್ರೇಲ್ನಲ್ಲಿ ಈ ತಂತ್ರಜ್ಞಾನ ಯಶಸ್ವಿಯಾಗಿ ಕೃಷಿಯಲ್ಲಿ ಕ್ರಾಂತಿಯೇ ನಡೆಯಿತು. ಬರಪೀಡಿತ ಪ್ರದೇಶವಾದ ಕಡೂರಿನಲ್ಲಿ ಸೂಕ್ಷ್ಮನೀರಾವರಿ ಪದ್ದತಿಯನ್ನು ವೈಜ್ಞಾನಿಕವಾಗಿ ಅಳವಡಿಸಿಕೊಂಡಲ್ಲಿ ಕೃಷಿ ಲಾಭದಾಯಕವಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದರು.
ತಾಲೂಕು ಕೃಷಿ ಸಹಾಯಕ ನಿರ್ದೇಶಕ ಎಂ.ಅಶೋಕ್ ಮಾತನಾಡಿ, ಕಡೂರು ಪ್ರದೇಶದಲ್ಲಿ ವಾರ್ಷಿಕ 550 ಮಿ.ಮೀ. ಮಳೆಯಾಗುತ್ತದೆ. ವೈವಿಧ್ಯಮಯ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ವಾಸ್ತವವಾಗಿ ಕಡೂರು ಬಯಲು ಸೀಮೆಯಾಗಿದ್ದು, ಬರಗಾಲ ಇಲ್ಲಿ ಸಾಮಾನ್ಯ. ಲಭ್ಯವಿರುವ ನೀರನ್ನು ಮಿತವಾಗಿ ಬಳಸಿಕೊಂಡು ಬೆಳೆಯುವ ಸೂಕ್ಷ್ಮ ನೀರಾವರಿ ವ್ಯವಸ್ಥೆಯನ್ನು ವೈಜ್ಞಾನಿಕವಾಗಿ ಅಳವಡಿಸಿಕೊಂಡರೆ ಅನುಕೂಲಕರ ಎಂದರು.