

ಕುಮಟಾ: ತಾಲೂಕಿನ ಮಾದನಗೇರಿಯ ಶ್ರೀಮಹಾಲಸಾ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಮದ್ಯವರ್ಜನ ವ್ಯವಸ್ಥಾಪನಾ ಸಮಿತಿ ಮತ್ತು ಆಶ್ರಯ ಫೌಂಡೇಶನ್ ಆಶ್ರಯದಲ್ಲಿ 8 ದಿನಗಳ ಕಾಲ ನಡೆಯುವ 1846ನೇ ಮದ್ಯವರ್ಜನ ಶಿಬಿರ ಮಂಗಳವಾರ ಆರಂಭಗೊಂಡಿತು.
ಶಿಬಿರವನ್ನು ಜೆಡಿಎಸ್ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಸೂರಜ ನಾಯ್ಕ ಉದ್ಘಾಟಿಸಿ, ಸಮಾಜಮುಖಿ ಕಾರ್ಯಗಳಿಂದಲೇ ಗುರುತಿಸಿಕೊಂಡು ರಾಜ್ಯದ ಮನೆಮಾತಾಗಿರುವ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಯೋಜನವನ್ನು ಹೆಚ್ಚು ಪಡೆದುಕೊಳ್ಳಬೇಕು. ಮದ್ಯವರ್ಜನ ಶಿಬಿರದಲ್ಲಿ ಪಾಲ್ಗೊಂಡ ಫಲಾನುಭವಿಗಳು ಚಟಮುಕ್ತರಾಗಿ ಬದುಕನ್ನು ಹಸನುಗೊಳಿಸಿಕೊಳ್ಳಬೇಕು ಎಂದರು.
ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಮಹೇಶ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಕಾಂಗ್ರೆಸ್ ಮಾಜಿ ಬ್ಲಾಕ್ ಅಧ್ಯಕ್ಷ ಹೊನ್ನಪ್ಪ ನಾಯಕ, ಗೋಕರ್ಣ ಪಿಎಸ್ಐ ವಸಂತ ಆಚಾರ್ಯ, ಪಂಚಾಯಿತಿ ಅಧ್ಯಕ್ಷ ಆನಂದ ಎನ್. ಕವರಿ, ಸದಸ್ಯ ಸತೀಶ, ಮದ್ಯವರ್ಜನ ಶಿಬಿರದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ವಾಸುದೇವ ನಾಯಕ, ಕೋಶಾಧಿಕಾರಿ ರಮೇಶ, ಗ್ರಾಮಾಭಿವೃದ್ಧಿ ಯೋಜನಾ ನಿರ್ದೇಶಕ ಮಹೇಶ ಎಂ.ಡಿ., ತಾಲೂಕು ಯೋಜನಾಧಿಕಾರಿ ಕಲ್ಮೇಶ ಎಂ., ಮೇಲ್ವಿಚಾರಕರಾದ ಮಾದೇವ, ಗುರುರಾಜ ವೇದಿಕೆಯಲ್ಲಿದ್ದರು.
ಶಿಬಿರದಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ಕೃಷಿ ಅಧಿಕಾರಿಗಳು, ನೋಡಲ್ ಅಧಿಕಾರಿಗಳು, ಜ್ಞಾನ ವಿಕಾಸ ಸಮನ್ವಯ ಅಧಿಕಾರಿಗಳು, ನವ ಜೀವನ ಸಮಿತಿ ಸದಸ್ಯರು, ಶೌರ್ಯ ಘಟಕ ಸದಸ್ಯರು, ವಿವಿಧ ಒಕ್ಕೂಟದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ಸೇವಾಪ್ರತಿನಿಧಿಗಳು ಉಪಸ್ಥಿತರಿದ್ದರು, ಮದ್ಯವರ್ಜನ ಶಿಬಿರದಲ್ಲಿ 60ಕ್ಕೂ ಹೆಚ್ಚು ಮಂದಿ ಶಿಬಿರಾರ್ಥಿಗಳಾಗಿ ಹೆಸರು ನೋಂದಾಯಿಸಿಕೊಂಡಿದ್ದಾರೆ.