

ಧಾರವಾಡ: ವಿದ್ಯಾರ್ಥಿಗಳು ಕಾಲೇಜಿನ ಶಿಸ್ತು, ನಿಯಮಗಳನ್ನು ಪಾಲಿಸುತ್ತ ವಿದ್ಯಾರ್ಜನೆ ಕಡೆ ಗಮನ ಕೊಡಬೇಕು. ವೃತ್ತಿ ಶಿಕ್ಷಣದಲ್ಲಿ ಕಠಿಣ ಪರಿಶ್ರಮವು ಆರಂಭದಿಂದಲೇ ಪ್ರಾರಂಭಿಸಿ ಪ್ರಗತಿ ಹೊಂದಬೇಕು ಎಂದು ಎಸ್‌ಡಿಎಂ ವಿಶ್ವವಿದ್ಯಾಲಯದ ಕುಲಪತಿ ಡಾ.ನಿರಂಜನ್ ಕುಮಾರ ಹೇಳಿದರು.
ಎಸ್.ಡಿ.ಎಂ. ದಂತ ಮಹಾವಿದ್ಯಾಲಯದಲ್ಲಿ ಬುಧವಾರ ಆಯೋಜಿಸಿದ್ದ ಪ್ರಥಮ ವರ್ಷದ ಸ್ನಾತಕೋತ್ತರ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಶಿಸ್ತು ಬದ್ಧ ವಿದ್ಯಾರ್ಥಿ ಜೀವನವು ಉತ್ತಮ ವೈದ್ಯರನ್ನಾಗಿಸುತ್ತದೆ. ಸಮಯ ಪ್ರಜ್ಞೆ, ಚುರುಕುತನದಂತಹ ಒಳ್ಳೆಯ ಅಭ್ಯಾಸಗಳಿಂದ ವಿದ್ಯಾರ್ಥಿಗಳು ಉತ್ತಮ ವೃತ್ತಿಪರರಾಗಬಹುದು. ಆರೋಗ್ಯ ವೃತ್ತಿಪರರು ಲಭ್ಯವಿರುವ ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಂಡು ಸಮಾಜಕ್ಕೆ ಉತ್ತಮ ಸೇವೆ ಸಲ್ಲಿಸಬೇಕು ಎಂದರು.
ಕಾರ್ಯ ನಿರ್ವಾಹಕ ನಿರ್ದೇಶಕಿ ಪದ್ಮಲತಾ ನಿರಂಜನ್, ಆಡಳಿತ ನಿರ್ದೇಶಕ ಸಾಕೇತ್ ಶೆಟ್ಟಿ, ಸಹ ಉಪ ಕುಲಪತಿ ವಿ.ಜೀವಂಧರ ಕುಮಾರ, ಪ್ರಾಚಾರ್ಯ ಡಾ.ಬಲರಾಮ್ ನಾಯ್ಕ, ಉಪ ಪ್ರಾಚಾರ್ಯ ಡಾ.ಆನಂದ ತಾವರಗೇರೆ, ವಿಭಾಗಗಳ ಮುಖ್ಯಸ್ಥರು, ಅಧ್ಯಾಪಕರು ಮತ್ತಿತರ ಗಣ್ಯರು ಕಾರ್ಯಕ್ರಮದಲ್ಲಿ ಇದ್ದರು.
ಉಪ ಪ್ರಾಚಾರ್ಯೆ ಡಾ.ಲೇಖಾ ಪಿಳೈ ಸ್ವಾಗತಿಸಿದರು. ಡಾ.ಮೇಘನಾ ಮೇರಿ ನಿರೂಪಿಸಿದರು. ಡಾ.ರವಿ ಶಿರಹಟ್ಟಿ ವಂದಿಸಿದರು.